ಮಡಿಕೇರಿ:
ಕಳೆದ 9 ವರ್ಷಗಳಿಂದ ತುಕ್ಕು ಹಿಡಿಯುತ್ತ ನಿಂತಿರುವ ಮಡಿಕೇರಿ ರಾಜಾಸೀಟ್‌ನ ಪುಟಾಣಿ ರೈಲು ಸಂಚಾರ ಸದ್ಯಕ್ಕೆ ಪುನಾರಂಭದ ಲಕ್ಷಣಗಳು ಕಾಣುತ್ತಿಲ್ಲ. ಈ ಪುಟಾಣಿ ರೈಲು ತೋಟಗಾರಿಕೆ ಇಲಾಖೆಯ ಗ್ರೇಟರ್ ರಾಜಾಸೀಟ್ ಯೋಜನೆಯ ಒಂದು ಭಾಗವಾಗಿದ್ದರೂ ಸಂಬAಧಿಸಿದ ಕಡತಗಳು ಮತ್ತು ಸಾಮಗ್ರಿಗಳು ಇನ್ನು ಕೂಡ ಮಡಿಕೇರಿ ನಗರಸಭೆ ವಶದಲ್ಲೇ ಇದೆ. ಮತ್ತೊಂದು ಕಡೆ ರೈಲ್ವೆ ಇಲಾಖೆಯಿಂದ ಬರಬೇಕಿದ್ದ ತಾಂತ್ರಿಕ ವರದಿ ವಿಳಂಬ ಆಗುತ್ತಿರುವುದು ಕೂಡ ಹಿನ್ನಡೆಗೆ ಕಾರಣವಾಗಿದೆ.
ದೇಶದಲ್ಲಿ ರೈಲ್ವೇ ಸಂಪರ್ಕ ಇಲ್ಲದ ಏಕೈಕ ಜಿಲ್ಲೆ ಎನ್ನುವ ಹಣೆಪಟ್ಟಿ ಹೊತ್ತುಕೊಂಡಿರುವ ಪ್ರವಾಸಿ ಜಿಲ್ಲೆ ಕೊಡಗಿನಲ್ಲಿ 1991ರಲ್ಲಿ ಆರಂಭವಾದ ಪುಟಾಣಿ ರೈಲು ಸಂಚಾರ ಸ್ವಲ್ಪಮಟ್ಟಿಗೆ ಈ ಕೊರತೆಯನ್ನು ಹೋಗಲಾಡಿಸುವಲ್ಲಿ ಯಶಸ್ವಿ ಆಗಿತ್ತು. ಮೊದಲಿಗೆ ಮಡಿಕೇರಿ ಗಾಲ್ಫ್ ಗ್ರೌಂಡ್ ಬಳಿ ಪುಟಾಣಿ ರೈಲು ಸಂಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಆ ಪ್ರದೇಶ ನಗರದಿಂದ ದೂರ ಮತ್ತು ಅಲ್ಲಿಗೆ ಹೆಚ್ಚಾಗಿ ಪ್ರವಾಸಿಗರು ತೆರಳುವುದಿಲ್ಲ ಎನ್ನುವ ಕಾರಣಕ್ಕೆ ರಾಜಾಸೀಟ್‌ಗೆ ಸ್ಥಳಾಂತರಿಸಲಾಗಿತ್ತು. ನಂತರ 2016ರ ತನಕವೂ ಈ ಆಟಿಕೆ ರೈಲು ಚಾಲನೆಯಲ್ಲಿ ಇತ್ತು.
2018ರ ಆ.9 ರಂದು ನಡೆಸಿದ್ದ ಪುಟಾಣಿ ರೈಲಿನ ನಿಯತಕಾಲಿಕ ತಪಾಸಣಾ ವರದಿಯಲ್ಲಿ ಹಾಲಿ ಇರುವ ಪುಟಾಣಿ ರೈಲಿನಲ್ಲಿ ಗೇರ್ ಬಾಕ್ಸ್, ಹೈಡ್ರಾಲಿಕ್ ಪವರ್ ಟ್ರಾನ್ಸ್ಮಿಷನ್, ಲೀಫ್ ಸ್ಪಿçಂಗ್‌ಗಳು, ಸೆಂಟರ್ ಪಿಓಟ್‌ಗಳು ಮತ್ತು ರೈಲ್ವೆ ಬಾಡಿ 28 ವರ್ಷ ಹಳೆಯದಾಗಿರುವುದರಿಂದ ಶಿಥಿಲಗೊಂಡು, ತಾಂತ್ರಿಕ ದೋಷದಿಂದ ಕೂಡಿದೆ. ಹಾಗಾಗಿ ಪ್ರಯಾಣಿಕರ ಹಿತದೃಷ್ಟಿಯಿಂದ ಸ್ಥಗಿತಗೊಳಿಸುವಂತೆ ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಹಳೆಯ ರೈಲಿನ ದುರಸ್ತಿಯ ಬದಲು ಪ್ರವಾಸಿಗರ ಸುರಕ್ಷತಾ ಹಿತದೃಷ್ಠಿಯಿಂದ ಹೊಸದಾಗಿ ರೈಲನ್ನು ಖರೀದಿಸಿ ಚಾಲನೆ ಮಾಡಲು ಶಿಫಾರಸ್ಸು ಮಾಡಿದ್ದರು.
ಸ್ಥಳೀಯರು ಮಾತ್ರವಲ್ಲದೆ ಪ್ರವಾಸಿಗರ ಮನವನ್ನೂ ಗೆದ್ದಿದ್ದ ಈ ಪುಟಾಣಿ ರೈಲಿನ ಸಂಚಾರವನ್ನು ರೈಲ್ವೇ ಇಲಾಖೆ ಅಧಿಕಾರಿಗಳ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ಕಾರಣ ನೀಡಿ ನಿಲ್ಲಿಸಲಾಗಿತ್ತು. ನಂತರ ಜಿಲ್ಲೆಯನ್ನು ಕಾಡಿದ್ದ ಪ್ರಾಕೃತಿ ವಿಕೋಪ ಈ ರೈಲು ಸಂಚಾರದ ಮೇಲೂ ಪರಿಣಾಮ ಬೀರಿ ಪುನಾರಂಭಕ್ಕೆ ಕಾಲವೇ ಕೂಡಿಬಂದಿರಲಿಲ್ಲ. ಈ ಬಗ್ಗೆ ಅಂದಿನ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಹ್ಮಣಿ ಸದನದಲ್ಲಿ ಪ್ರಸ್ತಾಪ ಮಾಡಿದ್ದರು.
ಈ ಮತ್ತೆ ಹಾಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಕೂಡ ಮಡಿಕೇರಿ ಪುಟಾಣಿ ರೈಲು ವಿಷಯದ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇದೀಗ ಮಕ್ಕಳ ಟಾಯ್ ಟ್ರೆöÊನ್ ಘಟಕ ಗ್ರೇಟರ್ ರಾಜಾಸೀಟ್ ಉದ್ಯಾನವನದ ಒಂದು ಭಾಗವಾಗಿರುವ ಬಗ್ಗೆ ತೋಟಗಾರಿಕಾ ಸಚಿವರು ವಿಧಾನಪರಿಷತ್‌ನಲ್ಲಿ ಮಾಹಿತಿ ಕೊಟ್ಟಿದ್ದಾರೆ. ರೈಲ್ವೇ ಹಳಿ, ಬೋಗಿ, ಎಂಜಿನ್‌ಗಳು ಹಾಳಾದ ಕಾರಣ ದುರಸ್ತಿ ಸಾಧ್ಯವಾಗದೇ ಸ್ಥಗಿತವಾದ ಪುಟಾಣಿ ರೈಲು ಸಂಚಾರ 9 ವರ್ಷ ಆದರೂ ಪುನಾರಂಭ ಆಗಿಲ್ಲ ಎಂದಿರುವ ಅವರು ಇದಕ್ಕೂ ಮೊದಲು ಈ ಪುಟಾಣಿ ರೈಲನ್ನು ಮಡಿಕೇರಿ ನಗರಸಭೆ ವತಿಯಿಂದ ಅಭಿವೃದ್ಧಿಪಡಿಸಿ ಇದರಿಂದ ಬರುವ ಆದಾಯ ಮತ್ತು ಖರ್ಚನ್ನು ನಗರಸಭೆಯ ವತಿಯಿಂದಲೇ ನಿರ್ವಹಣೆ ಮಾಡಲಾಗುತ್ತಿತ್ತು ಎಂದಿದ್ದಾರೆ.
ಪುಟಾಣಿ ರೈಲು ಸಂಚಾರ ಸ್ಥಗಿತ ಆಗುವ ಸಂದರ್ಭ ಈ ಸಂಪೂರ್ಣ ವ್ಯವಸ್ಥೆ ನಗರಸಭೆ ವತಿಯಿಂದ ನಿರ್ವಹಣೆ ಆಗುತ್ತಿತ್ತು. ನಗರಸಭೆಯ ನಿರ್ವಹಣೆಯಲ್ಲಿ ಇರುವಾಗಲೇ ಪುಟಾಣಿ ರೈಲಿನ ಬೋಗಿ, ಎಂಜಿನ್, ಹಳಿಗಳು ಹಾಳಾಗಿದ್ದು, ಓಡಾಟವೂ ಸ್ಥಗಿತಗೊಂಡಿತ್ತು. ನಂತರದ ಅವಧಿಯಲ್ಲಿ ಅಂದರೆ 2021ರ ಆ. 8ರಂದು ಗ್ರೇಟರ್ ರಾಜಾಸೀಟ್ ಉದ್ಯಾನವನ ತೋಟಗಾರಿಕೆ ಇಲಾಖೆಗೆ ಹಸ್ತಾಂತರ ಆಗಿದೆ. ಆದರೆ ತೋಟಗಾರಿಕೆ ಇಲಾಖೆಗೆ ರಾಜಾಸೀಟ್ ಜಮೀನು ಹಸ್ತಾಂತರವಾಗುವ ಸಂದರ್ಭದಲ್ಲಿ ಗ್ರೇಟರ್ ರಾಜಾಸೀಟ್‌ನ ಭಾಗವಾಗಿರುವ ಪುಟಾಣಿ ರೈಲಿಗೆ ಸಂಬAಧಿಸಿದ ಕಡತ ಮತ್ತು ಸಾಮಗ್ರಿಗಳು ಹಸ್ತಾಂತರ ಆಗಿಲ್ಲ ಎಂದು ಕೂಡ ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉತ್ತರ ಕೊಟ್ಟಿದ್ದಾರೆ.
ಪುಟಾಣಿ ರೈಲಿಗೆ ಸಂಬAಧಿಸಿದ ಕಡತ ಮತ್ತು ಸಾಮಗ್ರಿಗಳು ತೋಟಗಾರಿಕೆ ಇಲಾಖೆಗೆ ಹಸ್ತಾಂತರ ಆಗದ ಕಾರಣ ಪುಟಾಣಿ ರೈಲು ದುರಸ್ತಿಗೆ ತೋಟಗಾರಿಕೆ ಇಲಾಖೆ ಯಾವುದೇ ಆಸಕ್ತಿ ತೋರಿಸಿದಂತೆ ಕಾಣುತ್ತಿಲ್ಲ. ಈ ಪುಟಾಣಿ ರೈಲನ್ನು ದುರಸ್ತಿಪಡಿಸಿ ಮತ್ತೆ ಸಂಚಾರಕ್ಕೆ ಅಣಿಗೆಳಿಸಲು ಬೇಕಾದ ಅನುದಾನಕ್ಕೆ ಅಂದಾಜು ಕೂಡ ನಡೆಸಿಲ್ಲ.
ಪುಟಾಣಿ ರೈಲು ಸಂಚಾರ ಪುನಾರಂಭಿಸುವ ಸಂಬAಧ ರೈಲ್ವೇ ಹಳಿ, ಬೋಗಿ ಹಾಗೂ ರೈಲು ಎಂಜಿನ್ ಅನ್ನು ಹೊಸದಾಗಿ ಅಳವಡಿಸಲು ಸ್ಥಳ ಪರಿಶೀಲನೆ ನಡೆಸಿ ಅಂದಾಜು ಪಟ್ಟಿ ಸಲ್ಲಿಸುವಂತೆ ಮೈಸೂರು ವಿಭಾಗದ ದಕ್ಷಿಣ-ಪಶ್ಚಿಮ ರೈಲ್ವೇ ಅಧಿಕಾರಿಗಳನ್ನು ತೋಟಗಾರಿಕೆ ಇಲಾಖೆಯಿಂದ ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಬAಧಿಸಿದ ರೈಲ್ವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರೂ ಇಲ್ಲಿಯ ತನಕ ತಾಂತ್ರಿಕ ಮಾಹಿತಿ ಮತ್ತು ಅಂದಾಜು ಪಟ್ಟಿ ತೋಟಗಾರಿಕೆ ಇಲಾಖೆ ಕೈ ಸೇರಿಲ್ಲ.
ಕೊಡಗಿನಲ್ಲಿ ಸುಸ್ಥಿರ ಪ್ರವಾಸೋದ್ಯಮ ಬೆಳವಣಿಗೆ ಅಗತ್ಯತೆ ಬಗ್ಗೆ ಪರಿಸರಾಸಕ್ತರಿಂದ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಪ್ರಕೃತಿಯ ಸುಂದರ ತಾಣದಲ್ಲಿ ಇರುವ ಮಡಿಕೇರಿ ರಾಜಾಸೀಟ್‌ನ ಪುಟಾಣಿ ರೈಲು ವ್ಯವಸ್ಥೆ ಪುನಾರಂಭ ಆದರೆ ಇದಕ್ಕೆ ಪೂರಕ ವಾತಾವರಣ ನಿರ್ಮಾಣ ಆಗಲಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇನ್ನಾದರೂ ಮನಸ್ಸು ಮಾಡಲಿ ಎನ್ನುವುದು ಸ್ಥಳೀಯರ ನಿರೀಕ್ಷೆ.
ಮಡಿಕೇರಿ ರಾಜಾಸೀಟ್‌ನ ಪುಟಾಣಿ ರೈಲು ಸಂಚಾರ ಸ್ಥಗಿತಗೊಳಿಸಿರುವ ಬಗ್ಗೆ ಜನವರಿ ತಿಂಗಳಿನಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ವರದಿ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ವಿಧಾನಪರಿಷತ್‌ನಲ್ಲಿ ವಿಷಯ ಪ್ರಸ್ತಾಪ ಮಾಡಿದ್ದಾರೆ. ಈ ಸಂಬAಧ ಮಂಗಳವಾರ (ಮಾ. 18) ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉತ್ತರ ಕೊಟ್ಟಿದ್ದು, ತೋಟಗಾರಿಕೆ ಇಲಾಖೆಯಿಂದ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಈ ಮಾಹಿತಿ ಗಮನಿಸಿದರೆ ಸದ್ಯದ ಮಟ್ಟಿಗೆ ಪುಟಾಣಿ ರೈಲು ಪುನಾರಂಭ ಆಗುವಂತೆ ಕಂಡುಬರುತ್ತಿಲ್ಲ.
ಪುಟಾಣಿ ರೈಲು ಸಂಚಾರ ಪುನಾರಂಭಕ್ಕೆ ಸಾಕಷ್ಟು ಪ್ರಯತ್ನಗಳು ಮೊದಲಿನಿಂದಲೂ ನಡೆಯುತ್ತಿದೆ. ಆದರೆ ಸೂಕ್ತ ಕಾಲ ಮಾತ್ರ ಕೂಡಿ ಬರುತ್ತಿಲ್ಲ. 2019ರಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಂದಿನ ಸದಸ್ಯ ಪಿ.ಡಿ. ಪೊನ್ನಪ್ಪ ಇದೇ ವಿಷಯ ಪ್ರಸ್ತಾಪಿಸಿದ್ದರು. ಈ ವೇಳೆ ಉತ್ತರಿಸಿದ್ದ ಅಧಿಕಾರಿಗಳು, 'ಪುಟಾಣಿ ರೈಲನ್ನು ಪರಿಶೀಲಿಸಿರುವ ರೈಲ್ವೇ ಇಲಾಖೆ, ಈ ರೈಲು ಓಡಾಟ ಸುರಕ್ಷಿತ ಅಲ್ಲ. ಅದನ್ನು ಬದಲಾಯಿಸಬೇಕು ಎನ್ನುವ ಸಲಹೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರೈಲನ್ನು ಬದಲಾಯಿಸುವ ಸಂಬAಧ ಸಿದ್ಧತೆ ನಡೆದಿದೆ. 48 ಜನ ಪ್ರಯಾಣಿಸಬಹುದಾದ ಪುಟಾಣಿ ರೈಲಿಗೆ 1.12 ಕೋಟಿ ರೂ. ವೆಚ್ಚ ಆಗಲಿದೆ. ಇದು ಸಂಪೂರ್ಣ ಸುರಕ್ಷಿತವಾಗಿದ್ದು, ಕೊಡಗಿನ ಹವಾಮಾನ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈಗಿರುವ ಹಳಿಗೆ ಬಳಸಿರುವ ಮರವೂ ಹಾಳಾಗಿದ್ದು, ಅದನ್ನೂ 48 ಲಕ್ಷ ವೆಚ್ಚದಲ್ಲಿ ಬದಲಾಯಿಸಿ ಕಾಂಕ್ರಿಟ್ ಅಳವಡಿಸಲಾಗುವುದು,' ಎಂದು ತಿಳಿಸಿದ್ದರು. ನಂತರ ರಾಜಾಸೀಟ್ ಅನ್ನು ಗ್ರೇಟರ್ ರಾಜಾಸೀಟ್ ಆಗಿ ಅಭಿವೃದ್ಧಿ ಪಡಿಸುವ ಸಂದರ್ಭ ಯೋಜನೆಯಲ್ಲಿ ಪುಟಾಣಿ ರೈಲು ಸಂಚಾರ ಸೇರ್ಪಡೆ ಆಯಿತಾದರೂ ಗ್ರೇಟರ್ ರಾಜಾಸೀಟ್ ಕಾಮಗಾರಿ ಪೂರ್ಣಗೊಂಡರೂ ರೈಲು ಸಂಚಾರ ಆರಂಭವಾಗಿಲ್ಲ.
ಟಾಯ್ ಟ್ರೆöÊನ್ ಅನ್ನು ಪುನಾರಂಭಿಸುವ ಸಂಬAಧ ರೈಲ್ವೇ ಹಳಿ, ಬೋಗಿ ಹಾಗೂ ರೈಲು ಎಂಜಿನ್ ಅನ್ನು ಹೊಸದಾಗಿ ಅಳವಡಿಸಲು ಸ್ಥಳ ಪರಿಶೀಲನೆ ನಡೆಸಿ ಅಂದಾಜು ಪಟ್ಟಿ ಸಲ್ಲಿಸಲು ಮೈಸೂರು ವಿಭಾಗದ ದಕ್ಷಿಣ-ಪಶ್ಚಿಮ ಅಧಿಕಾರಿಗಳನ್ನು ತೋಟಗಾರಿಕೆ ಇಲಾಖೆಯಿಂದ ಕೋರಲಾಗಿದೆ. ಸಂಬAಧಿಸಿದ ರೈಲ್ವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು ತಾಂತ್ರಿಕ ಮಾಹಿತಿ ಮತ್ತು ಅಂದಾಜು ಪಟ್ಟಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಕಾಲಮಿತಿ ನಿರ್ಧರಿಸಿರುವುದಿಲ್ಲ. ಈ ಟಾಯ್ ಟ್ರೆöÊನ್ ದುರಸ್ತಿ ಕಾರ್ಯಕ್ಕೆ ಅನುದಾನದ ಅಂದಾಜು ನಡೆಸಿಲ್ಲ.
ಎಸ್.ಎಸ್. ಮಲ್ಲಿಕಾರ್ಜುನ್, ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ