ಜಿಲ್ಲೆ

ಕಡಬದಲ್ಲಿ ‘ಕೈ’ ಹಿಡಿದ ಮತದಾರ : ಪಟ್ಟಣ ಪಂಚಾಯಿತಿ ಚೊಚ್ಚಲ ಚುನಾವಣೆಯಲ್ಲೇ ಕಾಂಗ್ರೆಸ್‌ಗೆ ಅಧಿಕಾರ : 13ರಲ್ಲಿ 8 ಕಾಂಗ್ರೆಸ್, 5 ಬಿಜೆಪಿ ತೆಕ್ಕೆಗೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಡಬ

ಕಡಬ ಪಟ್ಟಣ ಪಂಚಾಯಿತಿ ಚೊಚ್ಚಲ ಚುನಾವಣೆಯಲ್ಲಿ 13 ವಾರ್ಡ್‌ಗಳ ಪೈಕಿ 8 ವಾರ್ಡ್‌ಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ.

ಆ.17ರಂದು ಚುನಾವಣೆ ನಡೆದಿದ್ದು, ಜಿದ್ದಾಜಿದ್ದಿನ ಹೋರಾಟದಲ್ಲಿ ಬಿಜೆಪಿ ಐದು ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಿದೆ. ಕಳಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ತಮನ್ನಾ ಜಬೀನ್ (201 ಮತ) ಗೆಲುವು ಸಾಧಿಸಿದ್ದು, ಎಸ್‌ಡಿಪಿಐನಿಂದ ಸಮೀರಾ ಹಾರಿಸ್ (74), ಪಕ್ಷೇತರ ಅಭ್ಯರ್ಥಿ ಜೈನಾಬಿ (139) ಮತ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರೇಮಾ ಶೂನ್ಯ ಮತ ಸಂಪಾದಿಸಿದ್ದಾರೆ.

ಕೋಡಿಬೈಲು ಕ್ಷೇತ್ರದಲ್ಲಿ ಬಿಜೆಪಿಯ ಕುಸುಮಾ ಅಂಗಡಿಮನೆ (187 ಮತ) ವಿಜಯಿಯಾಗಿದ್ದು, ಕಾಂಗ್ರೆಸ್‌ನ ಮೋಹಿನಿ (177)ಸೋತಿದ್ದಾರೆ. ನಾಲ್ಕು ನೋಟಾ ಮತಗಳು ಚಲಾವಣೆಯಾಗಿವೆ. ಪನ್ಯದಲ್ಲಿ ಕಾಂಗ್ರೆಸ್‌ನ ಮಹಮ್ಮದ್ ಪೈಜಲ್ (320) ವಿಜೇತರಾಗಿದ್ದು, ಬಿಜೆಪಿಯ ಆದಂ ಕುಂಡೋಳಿ (75), ಎಸ್‌ಡಿಪಿಐಯ ಹಾರಿಸ್ ಕಳಾರ (6), ಮುಸ್ಲಿಂ ಲೀಗ್‌ನ ಕೆ.ಅಬ್ದುಲ್ ರಜಾಕ್ (2) ಸೋತಿದ್ದಾರೆ.

ಜಿದ್ದಾಜಿದ್ದಿನ ಬೆದ್ರಾಜೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸೈಮನ್ ಸಿ.ಜೆ (232) ಗೆಲುವು ಪೆಡೆದಿದ್ದು, ಬಿಜೆಪಿಯ ಅಶೋಕ್ ಕುಮಾರ್ ಪಿ.(168) ಸೋತಿದ್ದಾರೆ. ಮಾಲೇಶ್ವರದಲ್ಲಿ ಕಾಂಗ್ರೆಸ್‌ನ ಹನೀಫ್ ಕೆ.ಎಂ. (297) ಜಯಶಾಲಿಯಾಗಿದ್ದು, ಬಿಜೆಪಿಯ ಪ್ರಕಾಶ್ ಎನ್.ಕೆ. (213) ಪರಾಭವಗೊಂಡಿದ್ದಾರೆ. ಕಡಬ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ನೀಲಾವತಿ ಶಿವರಾಮ್ (314) ಗೆಲುವಿನ ನಗೆ ಬೀರಿದ್ದು, ಬಿಜೆಪಿಯ ಪ್ರೇಮಾ (176), ಪಕ್ಷೇತರ ಅಭ್ಯರ್ಥಿ ಆಲೀಸ್ ಚಾಕೊ (16), ಎಸ್‌ಡಿಪಿಐಯ ಸ್ವಾಲಿಯತ್ ಜಸೀರಾ (78) ಮತ ಪಡೆದಿದ್ದಾರೆ.

ಪಣೆಮಜಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರೋಹಿತ್ ಗೌಡ (333) ಗೆದ್ದು ಬೀಗಿದ್ದು, ಬಿಜೆಪಿಯ ಗಣೇಶ್ ಗೌಡ (248) ಹಿನ್ನಡೆ ಅನುಭವಿಸಿದ್ದಾರೆ. ಪಿಜಕ್ಕಳದಲ್ಲಿ ಬಿಜೆಪಿಯ ದಯಾನಂದ ಗೌಡ ಪಿ. (386) ಭರ್ಜರಿ ಗೆಲುವು ಪಡೆದಿದ್ದು, ಕಾಂಗ್ರೆಸ್‌ನ ಅಶ್ರಫ್ ಶೇಡಿಗುಂಡಿ (184) ಭಾರಿ ಅಂತರದಿಂದ ಸೋತಿದ್ದಾರೆ. ದೊಡ್ಡಕೊಪ್ಪದಲ್ಲಿ ಬಿಜೆಪಿಯ ಗುಣವತಿ ರಘುರಾಮ (393) ವಿಜಯ ಪತಾಕೆ ಹಾರಿಸಿದ್ದು, ಕಾಂಗ್ರೆಸ್‌ನ ತುಳಸಿ (258) ಪರಾಭವಗೊಂಡಿದ್ದಾರೆ. ಮಜ್ಜಾರುವಿನಲ್ಲಿ ಬಿಜೆಪಿಯ ಮೋಹನ (306) ಅಧಿಕಾರದ ಗುದ್ದಗೆ ಏರಿದ್ದು, ಕಾಂಗ್ರೆಸ್‌ನ ಉಮೇಶ್ ಮಡ್ಯಡ್ಕ ಸ್ಪರ್ಧಿಸಿ 238 ಮತ ಪಡೆದಿದ್ದಾರೆ. ಪುಳಿಕುಕ್ಕುವಿನಲ್ಲಿ ಕಾಂಗ್ರೆಸ್‌ನ ಕೃಷ್ಣ ನಾಯ್ಕ (315) ಗೆದ್ದಿದ್ದು, ಬಿಜೆಪಿಯ ಸದಾನಂದ ನಾಯ್ಕ (264) ಪರಾಭವಗೊಂಡಿದ್ದಾರೆ.

ಕಡಬ ನಗರಾದ್ಯಂತ ಕಾಂಗ್ರೆಸ್ ಅಭ್ಯರ್ಥಿಗಳು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಇದೇ ವೇಳೆ ಗೆದ್ದ ಬಿಜೆಪಿ ಅಭ್ಯರ್ಥಿಗಳನ್ನು ಶಾಸಕಿ ಭಾಗಿರಥಿ ಮುರುಳ್ಯ ಅಭಿನಂದಿಸಿದರು.

ಬಿಜೆಪಿ ಅಭ್ಯರ್ಥಿಗೆ ಶೂನ್ಯ ಮತ

ಕಳಾರದಲ್ಲಿ ಬಿಜೆಪಿಯ ಪ್ರೇಮಾ ಶೂನ್ಯ ಮತ ಸಂಪಾದಿಸಿದ್ದು, ಬೇರೇ ವಾರ್ಡಿಗೆ ಸೇರಿದ್ದರಿಂದ ತಮ್ಮದೇ ಮತ ಚಲಾಯಿಸಲು ಅಸಾಧ್ಯವಾಯಿತು. ಇಲ್ಲಿನ ಅಭ್ಯರ್ಥಿ ಜೈನಾಬಿ ಅವರನ್ನು ಬಿಜೆಪಿ ಬೆಂಬಲಿಸಿದ್ದಾರೆ.

2 ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಹಣಾಹಣಿ

ಕೋಡಿಂಬಾಳದಲ್ಲಿ ಬಿಜೆಪಿಯ ಅಕ್ಷತಾ ಬಾಲಕೃಷ್ಣ ಗೌಡ (265) ವಿಜೇತರಾಗಿದ್ದು, ಕಾಂಗ್ರೆಸ್‌ನ ಜ್ಯೋತಿ ಡಿ.ಕೋಲ್ಪೆ (255) ಸ್ವಲ್ಪ ಅಂತರದಲ್ಲೇ ಪರಾಜಯಗೊಂಡಿದ್ದಾರೆ. ಪೈಪೋಟಿ ಇದ್ದ ಮೂರಾಜೆಯಲ್ಲಿ ಕಾಂಗ್ರೆಸ್‌ನ ಕೃಷ್ಣಪ್ಪ ಪೂಜಾರಿ (263) ವಿಜಯಮಾಲೆಗೆ ಕೊರಳೊಡಿದ್ದು, ಬಿಜೆಪಿಯ ಕುಂಞಣ್ಣ ಕುದ್ರಡ್ಕ (235) ಹಿನ್ನಡೆ ಅನುಭವಿದ್ದಾರೆ. ಐದು ನೋಟಾ ಮತಗಳು ಚಲಾವಣೆಯಾಗಿವೆ.