ಕಾರಟಗಿಯಲ್ಲಿ ಶಿರಸ್ತೇದಾರ್ ಉಮಾಮಹೇಶ್ವರಗೆ 28ನೇ ಕಾಲುವೆ ಕ್ಯಾಂಪ್ ನಿವಾಸಿಗಳು ಗುರುವಾರ ಮನವಿ ಸಲ್ಲಿಸಿದರು. 
ಜಿಲ್ಲೆ

ಊರಿನ ಹೆಸರು ಬದಲಾವಣೆಗೆ ಖಂಡನೆ: ಕಾರಟಗಿ ತಹಸಿಲ್ ಕಚೇರಿಗೆ 28ನೇ ಕಾಲುವೆ ಕ್ಯಾಂಪ್ ಜನರ ಮನವಿ

ಕಾರಟಗಿ: ತಾಲೂಕಿನ 28ನೇ ಕಾಲುವೆ ಕ್ಯಾಂಪ್ (ತೊಂಡಿಹಾಳ)ನ್ನು ರಾಮಲಿಂಗಪುರವೆಂದು ಮರುನಾಮಕರಣ ಮಾಡಿದ್ದನ್ನು ಖಂಡಿಸಿ ಗ್ರಾಮಸ್ಥರು ಗುರುವಾರ ಶಿರಸ್ತೇದಾರ್ ಉಮಾಮಹೇಶ್ವರಗೆ ಮನವಿ ಸಲ್ಲಿಸಿದರು.

ತೊಂಡಿಹಾಳ ಗ್ರಾಮದಿಂದ 28ನೇ ಕಾಲುವೆ ಕ್ಯಾಂಪ್ ಬೇರ್ಪಡಿಸಿ ಕಂದಾಯ ಗ್ರಾಮ ಮಾಡಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಗ್ರಾಮಸ್ಥರ ಅಭಿಪ್ರಾಯ ಪಡೆಯದೆ ಕಂದಾಯ ಇಲಾಖೆ ಅಧಿಕಾರಿಗಳು ಏಕಾಏಕಿ ಕ್ಯಾಂಪ್ ಹೆಸರು ಬದಲಿಸಿರುವುದು ಸರಿಯಲ್ಲ. ಏಳು ದಶಕಗಳಿಂದ ತುಂಗಭದ್ರಾ ಜಲಾಶಯದಿಂದ ಕಾಲುವೆ ಮೂಲಕ ಹರಿದು ಬರುವ ನೀರು ಬರಡು ಭೂಮಿಯನ್ನು ಹಸಿರಾಗಿಸಿ ಹಲವರ ಬದುಕಿಗೆ ಅನ್ನ ನೀಡಿದೆ. ಅಲ್ಲದೆ ಅನೇಕರು ಇದೇ ಕ್ಯಾಂಪ್ ಹೆಸರಿನಲ್ಲಿ ಗುರುತಿಸಿಕೊಂಡು ಹೆಮ್ಮೆಯಿಂದ ಹೇಳಿಕೊಳ್ಳುವ ಜತೆಗೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿದೆ. ಇದರ ನೆನಪಿಗಾಗಿ 28ನೇ ಕಾಲುವೆ ಕ್ಯಾಂಪ್ ಹೆಸರಿಡಲಾಗಿದೆ. ಕಂದಾಯ ಗ್ರಾಮದ ಹೆಸರಿನಲ್ಲಿ ಕ್ಯಾಂಪ್ ಹೆಸರನ್ನೇ ಬದಲಿಸಲು ಹೊರಟಿರುವ ಕಂದಾಯ ಅಧಿಕಾರಿಗಳ ನಡೆ ಖಂಡನಾರ್ಹ.

ಜಿಲ್ಲಾಧಿಕಾರಿ ಹೊರಡಿಸಿರುವ 2-ಇ ಅಧಿಸೂಚನೆ ರದ್ದುಗೊಳಿಸಿ 28ನೇ ಕಾಲುವೆ ಕ್ಯಾಂಪ್ ಹೆಸರಿನಲ್ಲಿಯೇ ಕಂದಾಯ ಗ್ರಾಮವೆಂದು ಘೋಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮಸ್ಥರಾದ ಬಿ.ಮಂಜುನಾಥ, ರಮೇಶ ನಾಯಕ, ದುರುಗಪ್ಪ, ಬಸವರಾಜ, ಶರಣೇಶ ಇತರರಿದ್ದರು.