ಜಿಲ್ಲೆ

ಪ್ರವಾಸೋದ್ಯಮ ಮಡಿಕೇರಿ ಕೇಂದ್ರೀಕೃತ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿನಲ್ಲಿ ಪ್ರವಾಸೋದ್ಯಮ ಕೆಲವೇ ಸ್ಥಳಗಳನ್ನು ಕೇಂದ್ರೀಕೃತವಾಗಿ ನಡೆಯುತ್ತಿದೆ. ಬೆರಳೆಣಿಕೆಯಷ್ಟು ತಾಣಗಳನ್ನು ಮಾತ್ರ ಪ್ರವಾಸಿ ಆಕರ್ಷಣೆಯ ತಾಣಗಳು ಎಂದು ಬಿಂಬಿಸುವ ಕೆಲಸ ನಡೆಯುತ್ತಾ ಬಂದಿದ್ದು, ಪ್ರವಾಸೋದ್ಯಮದ ಅಸಮತೋಲನ ಬೆಳವಣಿಗೆಗೆ ಕಾರಣವಾಗಿದೆ. ಇದರಿಂದ ಪ್ರವಾಸಿಗರ ಒತ್ತಡ ಸೀಮಿತಿ ಪ್ರದೇಶದ ಮೇಲೆ ಬೀಳುತ್ತಿದ್ದು, ಹಲವು ರೀತಿಯ ದುಷ್ಪರಿಣಾಮಗಳನ್ನೂ ಎದುರಿಸುವಂತಾಗಿದೆ. ಹಾಗಾಗಿ ಜಿಲ್ಲೆಯ ಇತರ ಭಾಗಗಳಲ್ಲಿ ಇರುವ ಪ್ರವಾಸಿ ತಾಣಗಳನ್ನು ಹೊರಜಗತ್ತಿಗೆ ಪರಿಚಯಿಸುವ ಕೆಲಸ ಆಗಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯ ಪ್ರವಾಸಿ ತಾಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ. ವಿರಾಜಪೇಟೆ, ಪೊನ್ನಂಪೇಟೆ, ಸೋಮವಾರಪೇಟೆ ತಾಲೂಕುಗಳಲ್ಲೂ ಆಕರ್ಷಣೀಯ ಪ್ರವಾಸಿತಾಣಗಳು ಇದ್ದರೂ ಅಷ್ಟೊಂದು ಜನಪ್ರಿಯ ಆಗಿಲ್ಲ. ಬೆಂಗಳೂರು, ಮೈಸೂರು ಎಕ್ಸ್‌ಪ್ರೆಸ್ ವೇ ಆದ ನಂತರವಂತೂ ಕೊಡಗು ಒಂದು ದಿನದ ಪ್ರವಾಸಿ ತಾಣವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಹಾಗಾಗಿ ಮೈಸೂರು, ಬೆಂಗಳೂರಿಗೆ ಹೆಚ್ಚು ಹತ್ತಿರ ಮತ್ತು ಉತ್ತಮ ಸಂಪರ್ಕ ವ್ಯವಸ್ಥೆ ಇರುವ ಕುಶಾಲನಗರ, ಮಡಿಕೇರಿ ವ್ಯಾಪ್ತಿಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಿದ್ದಾರೆ.

ಮಲೆನಾಡಿನ ಸುಂದರ ಪ್ರಾಕೃತಿಕ ಶ್ರೀಮಂತಿಕೆ ಮಧ್ಯೆ ಇರುವ ಕೊಡಗು ಜಿಲ್ಲೆಯೇ ಸಂಪೂರ್ಣವಾಗಿ ಆಕರ್ಷಣೀಯ ತಾಣ. ಪ್ರತಿ ಊರಿನಲ್ಲೂ ಒಂದಿಲ್ಲೊಂದು ಪ್ರೇಕ್ಷಣೀಯ ಸ್ಥಳಗಳು ಇಲ್ಲಿ ಕಂಡು ಬರುತ್ತದೆ. ಪ್ರಚಾರದ ಕೊರತೆ ಮತ್ತು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಕಾರಣಕ್ಕೆ ಬಹಳಷ್ಟು ಸಂಖ್ಯೆಯಲ್ಲಿ ಅತ್ಯುತ್ತಮ ಪ್ರವಾಸಿ ತಾಣಗಳು ಇನ್ನು ಕೂಡ ಕತ್ತಲೆಯಲ್ಲೇ ಇವೆ. ಜಿಲ್ಲೆಯ ಕೆಲವೇ ಕೆಲವು ಪ್ರವಾಸಿ ತಾಣಗಳ ಮೇಲೆ ಪ್ರವಾಸಿಗರ ಒತ್ತಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ವಾರಾಂತ್ಯ ಮತ್ತು ಇತರೆ ರಜಾದಿನಗಳಲ್ಲಿ ಈ ಪ್ರವಾಸಿ ತಾಣಗಳು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತದೆ. ಪ್ರವಾಸಿಗರು ಎಲ್ಲಾ ಕಡೆಗಳಿಗೂ ಹರಡುವಂತೆ ಮಾಡುವುದರಿಂದ ಇಂತಹ ಒತ್ತಡಗಳನ್ನು ದೂರ ಮಾಡಬಹುದು ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿದೆ.

ಕೊಡಗಿನಲ್ಲಿ ಮಡಿಕೇರಿ ಕೇಂದ್ರಿಕತ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿರುವುದರಿಂದ ಜಿಲ್ಲಾ ಕೇಂದ್ರದ ಮೇಲೆ ಅನಗತ್ಯ ಒತ್ತಡ ಬೀಳುತ್ತಿದೆ. ಬಹುತೇಕ ಪ್ರವಾಸಿಗರು ಕೊಡಗು ಎಂದರೆ ಮಡಿಕೇರಿ ಮಾತ್ರ ಎಂದೇ ತಿಳಿದುಕೊಂಡಿದ್ದಾರೆ. ಮತ್ತೆ ಕೆಲವರು ’ಕೂರ್ಗ್’ ಎನ್ನುವ ಬೇರೆಯೇ ಪ್ರವಾಸಿ ಸ್ಥಳ ಇದೆ ಎನ್ನುವ ತಪ್ಪು ಕಲ್ಪನೆಯಲ್ಲೂ ಇದ್ದು, ಮಡಿಕೇರಿಗೆ ಆಗಮಿಸಿ ’ಇಲ್ಲಿಂದ ಕೂರ್ಗ್ ಎಷ್ಟು ದೂರ?’ ಎಂದು ಕೇಳುವವರೂ ಇದ್ದಾರೆ. ಇಂಥವರಿಂದ ಜಿಲ್ಲಾ ಕೇಂದ್ರ ಕೇಂದ್ರಿತ ಪ್ರವಾಸೋದ್ಯಮಕ್ಕೆ ಒತ್ತು ಸಿಕ್ಕಂತಾಗುತ್ತಿದೆ.

ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶದಿಂದ ಆಗಮಿಸುವ ಪ್ರವಾಸಿಗರು ಸಹಜವಾಗಿ ನೇರವಾಗಿ ಮಡಿಕೇರಿಗೆ ಭೇಟಿ ಕೊಡುತ್ತಾರೆ. ತಂಗಲು ಇಲ್ಲಿಯೇ ವ್ಯವಸ್ಥೆ ಮಾಡಿಕೊಂಡು ಸುತ್ತಮುತ್ತಲಿನ ಹತ್ತಿರದ ಪ್ರವಾಸಿತಾಣಗಳಿಗೆ ತೆರಳುತ್ತಾರೆ. ಹಾಗಾಗಿಯೇ ವಾರಾಂತ್ಯ ಮತ್ತು ಇತರ ರಜಾ ದಿನಗಳಲ್ಲಿ ಮಡಿಕೇರಿ ಬ್ಯುಸಿ ಆಗಿಬಿಡುತ್ತದೆ. ವಾಹನಗಳು ಓಡಾಡುವುದಿರಲಿ ರಸ್ತೆಯಲ್ಲಿ ನಡೆದಾಡುವುದು ಕೂಡ ಅಸಾಧ್ಯ ಎನ್ನುವ ಪರಿಸ್ಥಿತಿ ಇಲ್ಲಿರುತ್ತದೆ. ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳು ಭರ್ತಿ ಆಗಿ ಬೇಡದ ಒತ್ತಡಕ್ಕೆ ಕಾರಣವಾಗುತ್ತದೆ. ಕುಶಾಲನಗರ ವ್ಯಾಪ್ತಿಯಲ್ಲೂ ಇದೇ ಪರಿಸ್ಥಿತಿ ಇರುತ್ತದೆ. ಆದರೆ ಜಿಲ್ಲೆಯ ಇತರ ಪ್ರವಾಸಿ ಕೇಂದ್ರಗಳಲ್ಲಿ ಈ ಮಟ್ಟಿಗೆ ಪ್ರವಾಸಿಗರ ದಟ್ಟಣೆ ಇರುವುದಿಲ್ಲ.

ಪಶ್ಚಿಮಘಟ್ಟಗಳ ಶ್ರೇಣಿಯ ಮಲೆನಾಡಿನಲ್ಲಿ ಬರುವ ಕೊಡಗಿನ ಎಲ್ಲ ಕಡೆಗಳಲ್ಲೂ ವಿಭಿನ್ನ ಅಭಿರುಚಿಯ ಪ್ರವಾಸಿಗರನ್ನು ಸೆಳೆಯಬಲ್ಲ ಪ್ರವಾಸಿ ತಾಣಗಳಿವೆ. ಇವುಗಳ ಬಗ್ಗೆ ಮತ್ತಷ್ಟು ಪ್ರಚಾರ ಕೊಟ್ಟರೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಈ ಸ್ಥಳಗಳಿಗೂ ಭೇಟಿ ನೀಡಲು ಸಾಧ್ಯವಾಗಬಹುದು. ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಪ್ರವಾಸಿಗರ ಆಕರ್ಷಣೆ ಹೆಚ್ಚಿಸಲು ಮತ್ತಷ್ಟು ಕ್ರಮಗಳನ್ನು ತೆಗೆದುಕೊಂಡಲ್ಲಿ ಮಡಿಕೇರಿ ಜೊತೆಗೆ ಜಿಲ್ಲೆಯ ಇತರ ಭಾಗಗಳಿಗೂ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು ಎನ್ನುವುದು ಜನಸಾಮಾನ್ಯರ ಅಭಿಪ್ರಾಯ.

ಜಿಲ್ಲೆಯ ಇತರ ಭಾಗಗಳಿಗೆ ಹೋಲಿಸಿದರೆ ಮಡಿಕೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ಕೊಡುವುದು, ಮಡಿಕೇರಿ ಆಸುಪಾಸಿನಲ್ಲೇ ಪ್ರವಾಸೋದ್ಯಮ ಕೇಂದ್ರೀಕತ ಚಟುವಟಿಕೆಗಳು ನಡೆಯವುದು ಹಾಗೂ ಈ ಭಾಗದಲ್ಲಿ ಮಾತ್ರ ಪ್ರವಾಸೋದ್ಯಮ ಬೆಳವಣಿಗೆ ಸಾಧಿಸುವುದರಿಂದ ವರ್ತಮಾನದಲ್ಲಿ ಲಾಭ ಅನ್ನಿಸಬಹುದು. ಆದರೆ ಇದರಿಂದಾಗಿ ನಿರ್ಮಾಣವಾಗುವ ಒತ್ತಡ ಮತ್ತು ಅಸಮತೋಲನ ಭವಿಷ್ಯದಲ್ಲಿ ಕೊಡಗಿಗೆ ಮಾರಕ ಆಗಬಹುದು ಎನ್ನುವ ಅಭಿಪ್ರಾಯ ಜಿಲ್ಲೆಯಲ್ಲಿ ವ್ಯಕ್ತವಾಗುತ್ತಿದೆ.

ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಮಲ್ಲಳ್ಳಿ ಜಲಪಾತ, ಕೋಟೆ ಬೆಟ್ಟ, ಜೈನ ಬಸದಿಗಳು, ಹೊನ್ನಮ್ಮನ ಕೆರೆ ಹೀಗೆ ವೈವಿಧ್ಯಮಯ ಪ್ರವಾಸಿ ತಾಣಗಳಿವೆ. ಪೊನ್ನಂಪೇಟೆ ತಾಲೂಕಿನಲ್ಲೂ ಇರ್ಪು ಾಲ್ಸ್, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಅನೇಕ ಪ್ರವಾಸಿ ಆಕರ್ಷಣೆಯ ಸ್ಥಳಗಳಿವೆ. ವಿರಾಜಪೇಟೆ ಸುತ್ತಮುತ್ತಲಿನ ಪ್ರದೇಶದಲ್ಲೂ ಪ್ರಾಕೃತಿಕ ಮತ್ತು ಐತಿಹಾಸಿಕ ತಾಣಗಳು ಇವೆ. ಆದರೆ ಮಡಿಕೇರಿಗೆ ಹೋಲಿಸಿದರೆ ಇಲ್ಲಿ ಸಾಮಾನ್ಯ ದಿನಗಳು ಇರಲಿ, ರಜಾ ದಿನಗಳಲ್ಲೂ ಪ್ರವಾಸಿಗರ ಸಂಖ್ಯೆ ಕಡಿಮೆ ಇರುತ್ತದೆ.

ಮಲ್ಲಳ್ಳಿ ಜಲಪಾತ ಮಳೆಗಾಲದಲ್ಲಿ ಮೈತುಂಬಿಕೊಂಡಾಗ ಅದ್ಭುತವಾಗಿ ಕಾಣುತ್ತದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿ ಮೂಲಭೂತ ಸೌಕರ್ಯಗಳೂ ಉತ್ತಮವಾಗಿದೆ. ತೂಗುಸೇತುವೆಯಂತಹ ಪ್ರವಾಸಿ ಆಕರ್ಷಣೆ ನಿರ್ಮಾಣಕ್ಕೆ ಒತ್ತು, ಸ್ಥಳದ ಬಗ್ಗೆ ಹೆಚ್ಚಿನ ಪ್ರಚಾರ ಕೊಡುವುದರಿಂದ ಇಲ್ಲಿಗೆ ಪ್ರವಾಸಿಗರನ್ನು ಸೆಳೆಯಬಹುದಾಗಿದೆ ಎನ್ನುತ್ತಾರೆ ಸ್ಥಳೀಯರು. ದಕ್ಷಿಣ ಕೊಡಗು ಪ್ರದೇಶದಲ್ಲೂ ಇಂತಹ ಸಾಕಷ್ಟು ಅವಕಾಶಗಳಿದ್ದು, ಪ್ರವಾಸೋದ್ಯಮ ಇಲಾಖೆ ಮತ್ತು ಪ್ರವಾಸೋದ್ಯಮಿಗಳು ಆಸಕ್ತಿ ತೋರಿಸಬೇಕಿದೆ ಎನ್ನುವುದು ಈ ಭಾಗದವರ ಅಭಿಪ್ರಾಯ.

ಸೋಮವಾರಪೇಟೆ ಭಾಗದಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಅಗತ್ಯವಿದೆ. ಇಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಣೀಯ ತಾಣಗಳಿವೆ. ಇಲ್ಲಿಗೂ ಪ್ರವಾಸಿಗರು ಆಗಮಿಸುವ ರೀತಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ಕೊಡಲಾಗುವುದು. ಜಿಲ್ಲೆಯ ಎಲ್ಲಾ ಪ್ರವಾಸಿತಾಣಗಳೂ ಏಕರೂಪದಲ್ಲಿ ಅಭಿವೃದ್ಧಿ ಹೊಂದಬೇಕಿದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ಕೊಡಗಿನಲ್ಲಿ ಪ್ರವಾಸೋದ್ಯಮ ವಿಕೇಂದ್ರೀಕರಣದ ಅವಶ್ಯಕತೆ ಇದೆ. ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಚರ್ಚಿಸಿ ಎಲ್ಲಾ ರಾಷ್ಟ್ರೀಯ ಮತ್ತು ಐತಿಹಾಸಿಕ ಮಹತ್ವದ ಸ್ಥಳಗಳ ಬಗ್ಗೆ ಜಾಹೀರಾತು ನೀಡಿ ಆ ಮೂಲಕ ಜನರನ್ನು ಆಕರ್ಷಿಸಬೇಕು. ಜಿಲ್ಲೆಯ ಎಲ್ಲಾ ಪ್ರವಾಸಿತಾಣಗಳನ್ನು ಜನಪ್ರಿಯಗೊಳಿಸುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ.
-ಟಿ. ಅಕ್ಷಿತಾ ನಾಯ್ಕ, ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ, ಕಾವೇರಿ ಕಾಲೇಜು, ವಿರಾಜಪೇಟೆ