ಲಿಂಗದಹಳ್ಳಿ : ರಾಜ್ಯದಲ್ಲಿರುವ ಅನೇಕ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಚಿಕ್ಕಮಗಳೂರಿನ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದ್ದರೂ ಅಕ್ರಮಗಾಗಿ ಪ್ರವಾಸಿಗರಿಗೆ ಮೋಜು ಮಸ್ತಿಗೆ ಅವಕಾಶ ನೀಡಿರುವುದರಿಂದ ನಿಷೇಧಿತ ಅರಣ್ಯದಲ್ಲಿ ಪ್ರವಾಸಿಗರ ಮೋಜು, ಮಸ್ತಿ ಎಗ್ಗಿಲ್ಲದೆ ನಡೆಯುತ್ತಿದೆ.
ಚಿಕ್ಕಮಗಳೂರಿನ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಮುತ್ತೋಡಿ ,ಹೆಬ್ಬೆ, ಎನ್.ಆರ್.ಪುರ, ಲಕ್ಕವಳ್ಳಿ, ತಣಿಗೆಬೈಲು ಸೇರಿದಂತೆ ವಿವಿಧ ವಲಯಗಳಿವೆ. ಈ ಅಭರಣ್ಯಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಆದರೂ ಅಭರಣ್ಯ ಪ್ರವೇಶಕ್ಕೆ ಅನುಮತಿ ನೀಡುವ ಜತೆಗೆ ಮದ್ಯಪಾನ, ಸಿಗರೇಟ್ ಸೇವನೆಗೆ ಅವಕಾಶ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅನುದಾನ ದುರುಪಯೋಗ ಆರೋಪ:
ಹುಲಿ ಸಂರಕ್ಷಿತ ಪ್ರದೇಶದ ಅಭಿವೃದ್ಧಿಗೆ ವಿವಿಧ ಮೂಲಗಳಿಂದ ಬರುವ ಅನುದಾನದಲ್ಲಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಪ್ರಾಣಿ ಸ್ವಚ್ಛಂದವಾಗಿ ಸಂಚರಿಸಲು ಅನುಕೂಲ ಕಲ್ಪಿಸುವುದು, ವನ್ಯ ಪ್ರಾಣಿಗಳಿಗೆ ಕುಡಿಯುವ ನೀರಿಗೆ ಕೆರೆ ಕಟ್ಟೆಗಳ ನಿರ್ಮಾಣ, ಪ್ರಾಣಿಗಳ ಆಹಾರಕ್ಕೆ ಬೇಕಾದ ಉತ್ಪನ್ನಗಳನ್ನು ಬೆಳೆಸುವುದು, ಪ್ರಾಣಿಗಳು ತಿನ್ನಲು ಉಪ್ಪು, ಇನ್ನಿತರೆ ವಸ್ತುಗಳನ್ನು ಹಾಕುವುದು, ಅರಣ್ಯ ಇಲಾಖೆ ಸಿಬ್ಬಂದಿ ಕಾಡಿನಲ್ಲಿ ಸಂಚರಿಸಲು ಅಗತ್ಯ ಕಾಲುದಾರಿ ಇನ್ನಿತರೆ ಕಾಮಗಾರಿಗಳನ್ನು ನಡೆಸಬೇಕು ಎಂಬ ನಿಯಮವಿದೆ.
ಅಲ್ಲದೇ ಅಭಯಾರಣ್ಯದ ಸುತ್ತಲು ಆನೆ ಪ್ರತಿಬಂಧಕ ಕಂದಕಗಳನ್ನು ತೆಗೆದು ವನ್ಯ ಪ್ರಾಣಿಗಳು ಗ್ರಾಮಗಳ ಕಡೆಗೆ ಬಾರದಂತೆ ತಡೆ ಹಿಡಿಯವುದು, ಕಾಡು ಪ್ರಾಣಿಗಳು ಗ್ರಾಮಗಳ ಕಡೆ ಬಂದಾಗ ಕಾಡು ಪ್ರಾಣಿಗಳನ್ನು ಹೆದರಿಸಿ ವಾಪಸ್ ಕಾಡಿಗಟ್ಟಲು ಸಿಡಿ ಮದ್ದುಗಳನ್ನು ಖರೀದಿಸಿ ಅಗತ್ಯ ರೈತರಿಗೆ ವಿತರಿಸಬೇಕು. ಆದರೆ ಅಭಯಾರಣ್ಯದಲ್ಲಿ ಸಾರ್ವಜನಿಕರಿಗೆ ಪ್ರವೇಶ ಇಲ್ಲದಿರುವುದಿಂದ ವಿವಿಧ ಮೂಲಗಳಿಂದ ಬರುವ ಅನುದಾನವನ್ನು ಅರಣ್ಯಾಧಿಕಾರಿಗಳು ಏನು ಮಾಡುತ್ತಾರೆ. ಯಾವ ಕಾಮಗಾರಿಗಳನ್ನು ಮಾಡಿಸಿದ್ದಾರೆ ಎಂಬ ಮಾಹಿತಿಯೇ ಇಲ್ಲದಂತಾಗಿದೆ. ಇಲ್ಲಿ ಅಭಯಾರಣ್ಯದ ಅಭಿವೃದ್ಧಿಗಿಂತ ಅಭಯಾರಣ್ಯದಲ್ಲಿರುವ ಸಿಬ್ಬಂದಿಗಳ ಅನುಕೂಲಕ್ಕೆ ಈ ಅನುದಾನ ಬಳಕೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.