ಜಿಲ್ಲೆ

ಬಟ್ಟಂಪಾಡಿ ಬೀಚ್‌ ಗೆಸ್ಟ್‌ಹೌಸ್‌ನಲ್ಲಿ ಪಾನಮತ್ತ ಪ್ರವಾಸಿಗರಿಂದ ಹೊಡೆದಾಟ, ಸ್ಥಳೀಯ ಮನೆಗೆ ನುಗ್ಗಿದವನಿಗೆ ಧರ್ಮದೇಟು

ಮಂಗಳೂರು: ಪ್ರವಾಸಕ್ಕೆಂದು ಉಚ್ಚಿಲ ಬಟ್ಟಂಪಾಡಿ ಬೀಚ್‌ ಬಳಿಯ ಖಾಸಗಿ ಗೆಸ್ಟ್‌ಹೌಸ್‌ಗೆ ಬೆಂಗಳೂರಿನಿಂದ ಬಂದಿದ್ದ ತಂಡವೊಂದು ಪಾನಮತ್ತರಾಗಿ ಪರಸ್ಪರ ಹಲ್ಲೆ ನಡೆಸಿರುವುದು ಮಾತ್ರವಲ್ಲದೆ, ಸ್ಥಳೀಯ ಮನೆಗೆ ನುಗ್ಗಲು ಯತ್ನಿಸಿದ ಹಿನ್ನೆಲೆಯಲ್ಲಿ ಸ್ಥಳೀಯರಿಂದಲೂ ಧರ್ಮದೇಟು ಪಡೆದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಬೆಂಗಳೂರಿನ ಖಾಸಗಿ ಪ್ರಿಂಟಿಂಗ್‌ ಪ್ರೆಸ್‌ ಸಂಸ್ಥೆಯ ಸುಮಾರು 60 ಮಂದಿ ನೌಕರರು ಎರಡು ಬಸ್‌ಗಳಲ್ಲಿ ಬಂದಿದ್ದು, ಬಟ್ಟಂಪಾಡಿ ಬೀಚ್‌ ಬಳಿಯ ಕ್ಯಾಂಪ್‌-21 ಮತ್ತು ಪಕ್ಕದ ಇನ್ನೊಂದು ಗೆಸ್ಟ್‌ಹೌಸ್‌ನಲ್ಲಿ ತಂಗಿದ್ದರು. ಶನಿವಾರ ರಾತ್ರಿ ಮದ್ಯ ಸೇವಿಸಿದ ಯುವಕರು, ಯಾವುದೋ ಕಾರಣಕ್ಕೆ ಪರಸ್ಪರ ಹೊಡೆದಾಟ ನಡೆಸಿದ್ದಾರೆ. ಕುಡಿದ ಅಮಲಿನಲ್ಲಿದ್ದ ಬೀದರ್‌ ಮೂಲಕ ಶರಣ ಬಸಪ್ಪ ಎಂಬಾತ ಊಟದ ತಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು ಪಕ್ಕದ ರಾಮಪ್ಪ ಎನ್ನುವವರ ಮನೆಯ ಆವರಣ ಪ್ರವೇಶಿಸಿ ಬಾಗಿಲು ಬಡಿದಿದ್ದಾನೆ. ಬಾಗಿಲು ತೆರೆದ ಮನೆಯಲ್ಲಿದ್ದ ಯುವತಿ ಆತನನ್ನು ನೋಡಿ ಕಿರುಚಿದ್ದು, ಸ್ಥಳಕ್ಕೆ ಆಗಮಿಸಿದ ಅಕ್ಕಪಕ್ಕದವರು ಆತನಿಗೆ ಧರ್ಮದೇಟು ನೀಡಿದ್ದಾರೆ.
ಗೆಸ್ಟ್‌ಹೌಸ್‌ನಲ್ಲಿದ್ದ ಮೂವರು ಪ್ರವಾಸಿಗರು ರಸ್ತೆಯಲ್ಲಿ ಹೊಡೆದಾಟ ನಡೆಸಿದ್ದು, ಅವರಿಗೂ ಸ್ಥಳಿಯರು ಎಚ್ಚರಿಕೆ ನೀಡಿದ್ದಾರೆ. ಬಳಿಕ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರವಾಸಿಗರು ಸ್ಥಳೀಯರ ಮೇಲೆ ದೂರು ನೀಡಿದ್ದಾರೆ.