ಜಿಲ್ಲೆ

ಮಲ್ಪೆ ಸೈಂಟ್​ ಮೇರಿಸ್​ ದ್ವೀಪ ಪ್ರವೇಶಕ್ಕೆ ನಿರ್ಬಂಧ...

ಮಳೆಗಾಲದ ಆರಂಭ ಹಿನ್ನೆಲೆ

ಸೆ.15ರ ವರೆಗೆ ಜಿಲ್ಲಾಡಳಿತದಿಂದ ನಿಷೇಧ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಳೆಗಾಲ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಉಡುಪಿಯ ಪ್ರಸಿದ್ಧ ದ್ವೀಪ ಪ್ರವಾಸಿ ತಾಣವಾಗಿರುವ ಮಲ್ಪೆಯ ಸೈಂಟ್​ ಮೇರಿಸ್​ ದ್ವೀಪ ಪ್ರವೇಶಕ್ಕೆ ಜಿಲ್ಲಾಡಳಿತ ನಾಲ್ಕು ತಿಂಗಳು ನಿರ್ಬಂಧ ಹೇರಿದೆ.

ದೇಶ-ವಿದೇಶದಿಂದ ಬರುವ ಪ್ರವಾಸಿಗರಿಗಾಗಿ ಈ ದ್ವೀಪದಲ್ಲಿ ವಿವಿಧ ಜಲಸಾಹಸ ಕ್ರೀಡೆಗಳನ್ನು ನಡೆಸಲಾಗುತ್ತಿದ್ದು, ಅವುಗಳನ್ನೂ ಸಹ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮಳೆಗಾಲದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿರುವುದರಿಂದ ದ್ವೀಪಕ್ಕೆ ಪ್ರವಾಸ ಕೈಗೊಳ್ಳುವುದು ಜೀವಕ್ಕೆ ಅಪಾಯಕಾರಿಯಾಗಿದೆ. ಹೀಗಾಗಿ ಮೇ 15ರಿಂದಲೇ ಇಲ್ಲಿಗೆ ಪ್ರವೇಶ ನಿರಾಕರಿಸಲಾಗಿದ್ದು, ಸೆ.15ರವರೆಗೆ ಮುಂದುವರಿಯಲಿದೆ.

ಬೀಚ್​ನ ಉದ್ದಕ್ಕೂ ತಡೆಬೇಲಿ

ಪ್ರವಾಸಿಗರು ಸಮುದ್ರದಲ್ಲಿನ ವಾತಾವರಣ, ಪ್ರತಿಕೂಲತೆ ನೋಡಿಕೊಂಡು ಜೂ.1ರ ವರೆಗೆ ನೀರಿಗಿಳಿಯಲು ಮತ್ತು ಈಜಾಡಲು ಅವಕಾಶ ನೀಡಲಾಗಿದೆ. ಮುಂಗಾರು ಮಳೆಗಾಲ ಆರಂಭವಾದ ಬಳಿಕ ಪ್ರವಾಸಿಗರು ಸಮುದ್ರದ ನೀರಿಗೆ ಇಳಿಯದಂತೆ ಬೀಚ್​ನ ಉದ್ದಕ್ಕೂ ತಡೆಬೇಲಿ ಹಾಕಿ ಸುರಕ್ಷಾ ಕ್ರಮ ಕೈಗೊಳ್ಳಲಾಗುತ್ತದೆ.

ಹಾರ್ಬರ್​ ಕ್ರಾಫ್ಟ್​ ನಿಯಮದ ಪ್ರಕಾರದಂತೆ ದ್ವೀಪದಲ್ಲಿ ಮೇ 16ರಿಂದ 4 ತಿಂಗಳು ಸಮುದ್ರದಲ್ಲಿ ಪ್ರವಾಸಿ ಬೋಟ್​ ಮತ್ತು ಜಲಸಾಹಸ ಕ್ರೀಡೆಗಳನ್ನು ನಿಷೇಧಿಸಲಾಗಿದೆ. ಅಲ್ಲಿ ಜಲಸಾಹಸಿ ಕ್ರೀಡೆಗಳನ್ನು ಅಳವಡಿಸಿದ್ದ ಖಾಸಗಿ ಸಂಸ್ಥೆಗೆ ಅನುಮತಿ ನೀಡುವಾಗ ಪ್ರವಾಸೋದ್ಯಮ ಇಲಾಖೆಯವರು ಬಂದರು ನಿಯಮವನ್ನು ಕರಾರಿನಲ್ಲಿ ಉಲ್ಲೇಖಿಸಲಾಗಿದೆ. ಮಳೆಗಾಲದ ಕಾರಣದಿಂದಾಗಿ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ