ಖಂಡೇನಹಳ್ಳಿ ಬಸವರಾಜ ಹಿರಿಯೂರು
ಪ್ರವಾಸಿಗರ ಮನಸ್ಸು ಅರಳಿಸಬೇಕಿದ್ದ ವಿವಿ ಸಾಗರದ ಧನ್ವಂತರಿ ಗಿಡಮೂಲಿಕೆ ಉದ್ಯಾನವನ ಕಳೆದ ಎರಡು-ಮೂರು ವರ್ಷಗಳಿಂದ ನಿರ್ವಹಣೆ ಕೊರತೆಗೆ ತುತ್ತಾಗಿ ಪಾಳು ಬಿದ್ದಿದೆ. ಪ್ರವಾಸಿಗರಿಗಾಗಿಯೇ 4 ಎಕರೆ ವಿಶಾಲ ಜಾಗದಲ್ಲಿ ಅರಣ್ಯ ಇಲಾಖೆ ಗಿಡಮೂಲಿಕೆ ಉದ್ಯಾನ ನಿರ್ಮಿಸಿದೆ. ಜಲಾಶಯ ಹಾಗೂ ಕಣಿವೆ ಮಾರಮ್ಮ ದೇವಿ ದರ್ಶನಕ್ಕೆ ಆಗಮಿಸಿದವರು ಇಲ್ಲಿ ತುಸು ಹೊತ್ತು ವಿರಮಿಸಿ ಹೋಗುವುದು ರೂಢಿ. ಯಾವಾಗ ಅರಣ್ಯ ಇಲಾಖೆ ನಿರ್ವಹಣೆ ಅಸಾಧ್ಯ ಎಂದು ಕೈ ಚೆಲ್ಲಿತೋ ಆಗ ಪಾರ್ಕ್‌ಗೆ ಬೀಗಮುದ್ರೆ ಹಾಕಿ ಸುಮ್ಮನಾಯಿತು. ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಗಮನಹರಿಸಿಲ್ಲ.
ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ವಿಶ್ರಾಂತಿ ಪಡೆಯಲು ಉದ್ಯಾನವನದ ಸುತ್ತ ದೃಷ್ಟಿ ಹಾಯಿಸಿದಾಗ ಎಲ್ಲೆಂದರಲ್ಲಿ ಬೆಳೆದು ನಿಂತಿರುವ ಗಿಡ-ಗಂಟಿಗಳು, ಪ್ರವೇಶ ದ್ವಾರದ ಗೇಟ್‌ಗೆ ಬೀಗ ಹಾಕಿರುವುದು ಬೇಸರ ಮೂಡಿಸುತ್ತದೆ. ಇಲ್ಲಿನ ಕಣಿವೆ ಮಾರಮ್ಮ ಹಾಗೂ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.
ಹಕ್ಕಿ-ಪಕ್ಷಿಗಳ ಕಲರವ: ನೂರಾರು ಗಿಳಿ, ಅಳಿಲು, ಕೋಗಿಲೆ, ಪಾರಿವಾಳ ಇತರ ಜೀವ ಸಂಕುಲಗಳು ಉದ್ಯಾನದ ಮರಗಳನ್ನು ಆಶ್ರಯಿಸಿದ್ದವು. ಇಲ್ಲಿ ಕುಳಿತರೆ ಹಕ್ಕಿಗಳ ಕಲರವ ಮನಸ್ಸಿಗೆ ನೆಮ್ಮದಿ ನೀಡುತ್ತಿತ್ತು. ನಿರ್ವಹಣೆ ಇಲ್ಲದ ಉದ್ಯಾನಕ್ಕೆ ಬೀಗ ಜಡಿದಿದ್ದು ಜನರಷ್ಟೇ ಅಲ್ಲ ಪಕ್ಷಿಗಳೂ ಬಾರದಂತಾಗಿವೆ. ನಿರ್ವಹಣೆ ಕೊರತೆಯಿಂದ ಇಂದು ಹಾಳು ಕೊಂಪೆಯಾಗಿದೆ. 2002-03ರಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಪ್ರಕೃತಿ ವಿಹಾರ ವನ ನಿರ್ಮಿಸಿದ್ದು, 2011 ರವರೆಗೆ ಅರಣ್ಯ ಇಲಾಖೆ ಉತ್ತಮವಾಗಿ ನಿರ್ವಹಣೆ ಮಾಡಿದ್ದು, ನಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿರ್ವಹಣೆಗೆ ಒಂದು ಕಮಿಟಿ ರಚಿಸಲಾಗಿತ್ತು. (ಸಿಇಒ, ತಹಸೀ ಲ್ದಾರ್, ಅರಣ್ಯ ಇಲಾಖೆ ಇತರೆ ಅಧಿಕಾರಿಗಳು) ಇಚ್ಛಾಶಕ್ತಿ ಕೊರತೆ ಯಿಂದ ನಿರ್ವಹಣೆ ಮಾಡದೆ ವಿಹಾರ ವನಕ್ಕೆ ಬೀಗ ಹಾಕಲಾಗಿದೆ.
ಪ್ರಸ್ತಾವನೆ ಸಲ್ಲಿಕೆ: ಭದ್ರಾ ನೀರು ವಿವಿ ಸಾಗರದ ಒಡಲು ಸೇರಿದ ನಂತರ ಜಲಾಶಯದ ಜಲ ವೈಭೋಗ, ಕಣಿವೆಯ ಹಸಿರು ಸೌಂದರ್ಯ ನೋಡಲು ಪ್ರವಾಸಿಗರು ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಕೃತಿ ವಿಹಾರ ವನ ನಿರ್ವಹಣೆ, ಅಭಿವೃದ್ಧಿ ಸ್ಪರ್ಶ ನೀಡಲು 2.5 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ರೂಪಿಸಿ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.