ಜಿಲ್ಲೆ

ಮತ್ತೆ ಓಡಲಿದೆ ಪ್ರವಾಸಿ ಬಸ್

ಭರತ್ ಶೆಟ್ಟಿಗಾರ್ ಮಂಗಳೂರು

ನಗರ ವ್ಯಾಪ್ತಿಯ ವಿವಿಧ ಪ್ರವಾಸಿ ತಾಣಗಳ ವೀಕ್ಷಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸಹಕಾರದಿಂದ ‘ಪ್ರವಾಸಿ ಬಸ್’ ಸೇವೆ ಮತ್ತೆ ಆರಂಭಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರಯತ್ನ ನಡೆಸುತ್ತಿದೆ.

ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರಿಗೆ ಈ ನಿಟ್ಟಿನಲ್ಲಿ ಮನವಿ ಮಾಡಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಬಸ್ ಸೇವೆ ಆರಂಭಿಸುವ ನಿಟ್ಟಿನಲ್ಲಿ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರಿಂದ ಸ್ಥಗಿತಗೊಂಡಿರುವ ಬಸ್ ಸೇವೆ ಮತ್ತೆ ಆರಂಭವಾಗುವ ಸಾಧ್ಯತೆಯಿದೆ.

ಮೊದಲಿದ್ದ ಬಸ್ ಬೆಳಗ್ಗೆಯಿಂದ ಸಾಯಂಕಾಲ ತನಕ ನಗರ ವ್ಯಾಪ್ತಿಯ ವಿವಿಧ ಪ್ರವಾಸಿ ತಾಣಗಳಿಗೆ ತೆರಳುತಿತ್ತು. ಲಾಲ್‌ಭಾಗ್‌ನಿಂದ ಪ್ರವಾಸಿಗರನ್ನು ಪಿಕಪ್ ಮಾಡುತ್ತಿದ್ದ ಬಸ್ ಕುದ್ರೋಳಿ ದೇವಸ್ಥಾನ, ಕದ್ರಿ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್, ಪಿಲಿಕುಳ ನಿಸರ್ಗಧಾಮ, ತಣ್ಣೀರುಬಾವಿ ಟ್ರೀ ಪಾರ್ಕ್, ಕಡಲ ತೀರ ಸುತ್ತಿ ಬಳಿಕ ಲಾಲ್‌ಭಾಗ್‌ಗೆ ಮರಳುತಿತ್ತು. ಬೆಳಗ್ಗೆ ಹೋದರೆ ಸಾಯಂಕಾಲವೇ ವಾಪಸಾಗುವುದು. ಪ್ರವಾಸಿಗರ ಜತೆ ಸ್ಥಳೀಯರೂ ಈ ಬಸ್‌ನ ಸೌಲಭ್ಯ ಪಡೆಯುತ್ತಿದ್ದರು. ದರವೂ ದೊಡ್ಡ ಹೊರೆಯಾಗಿರಲಿಲ್ಲ, ವಿದ್ಯಾರ್ಥಿಗಳಿಗೆ ರಿಯಾಯಿತಿಯೂ ಇತ್ತು.

ಈಗ ಬಸ್ ಅಗತ್ಯ: ಲಾಕ್‌ಡೌನ್ ಬಳಿಕ ಪ್ರಸ್ತುತ ಪ್ರವಾಸೋದ್ಯಮ ಕ್ಷೇತ್ರವೂ ಚಿಗುರಿಕೊಳ್ಳುತ್ತಿದ್ದು, ಇಂಥ ಸಂದರ್ಭ ಬಸ್ ಆರಂಭಿಸುವುದು ಹೆಚ್ಚು ಅನುಕೂಲಕರ. ಒಂದು ದಿನಕ್ಕೆ ಟ್ಯಾಕ್ಸಿ ಮಾಡಿಕೊಂಡು ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರವಾಸಿ ಬಸ್‌ನಲ್ಲಿ ತೆರಳಬಹುದಾಗಿದ್ದು, ಆರ್ಥಿಕವಾಗಿಯೂ ಹೆಚ್ಚು ಹೊರೆಯಾಗದು. ಇದಲ್ಲದೆ ಪ್ರಸ್ತುತ ಜಿಲ್ಲೆಯಲ್ಲಿ ಹಲವು ರೀತಿಯ ಪ್ರವಾಸೋದ್ಯಮ ಚಟುವಟಿಕೆಗಳು ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದ್ದು, ಅಂಥ ಸ್ಥಳಗಳಿಗೂ ಒಂದು ಭೇಟಿಗೆ ಮೂಲಕ ಪ್ರವಾಸಿಗರಿಗೆ ಕರಾವಳಿ ಸಂಸ್ಕೃತಿ ಪರಿಚಯ ಮಾಡಲೂ ಸಾಧ್ಯವಾಗಲಿದೆ.

ಕೆಲವೇ ತಿಂಗಳು ಓಡಿದ್ದ ಬಸ್: 2016ರ ಏ.17ರಂದು ಅಂದಿನ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಪಿಲಿಕುಳದಲ್ಲಿ ಬಸ್‌ಗೆ ಚಾಲನೆ ನೀಡಿದ್ದರು. ಆರಂಭದ ಕೆಲವು ತಿಂಗಳು ಬಸ್‌ಗೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ಆದರೆ ಅದೇ ವರ್ಷದ ಮಳೆಗಾಲ ಮುಗಿಯುವಷ್ಟರಲ್ಲಿ ಬಸ್‌ನ ಬಿಡಿಭಾಗಗಳು ಹದಗೆಟ್ಟಿದ್ದು, ಬಳಿಕ ಅದನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ನಂತರ ವಾಪಸ್ ಬಂದಿರಲಿಲ್ಲ. ಮತ್ತೆ ಬಸ್ ಸೇವೆ ಆರಂಭಿಸುತ್ತಿರುವುದು ನಗರದ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿದೆ.

ಸ್ವಂತ ವಾಹನ ಇಲ್ಲದವರು, ದುಬಾರಿ ಬಾಡಿಗೆ ನೀಡಿ ಟ್ಯಾಕ್ಸಿ ಮಾಡಿಕೊಂಡು ಪ್ರವಾಸಿ ಸ್ಥಳಗಳಿಗೆ ತೆರಳಲು ಅಸಾಧ್ಯ. ಬೆಂಗಳೂರು, ಮೈಸೂರು ನಗರಗಳಲ್ಲಿ ಪ್ರವಾಸಿಗರಿಗೆ ಪ್ರತ್ಯೇಕ ಬಸ್‌ಗಳ ಸೇವೆ ಲಭ್ಯವಿದೆ. ಮಂಗಳೂರಿನಲ್ಲೂ ಮೊದಲು ಒಂದು ಬಸ್ ಇತ್ತು. ಆದರೆ ಬಳಿಕ ಅದು ಸ್ಥಗಿತಗೊಂಡಿದ್ದು, ಮತ್ತೆ ಆರಂಭಿಸುವ ನಿಟ್ಟಿನಲ್ಲಿ ಜತೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಯವರಿಗೆ ಮನವಿ ಮಾಡಲಾಗಿದೆ.

ಡಾ.ರಾಜೇಂದ್ರ ಕೆ.ವಿ. ದ.ಕ ಜಿಲ್ಲಾಧಿಕಾರಿ

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಯವರಿಗೆ ಜಿಲ್ಲಾಧಿಕಾರಿ ಮನವಿ ಮಾಡಿದ್ದು, ಪೂರಕವಾಗಿ ಸ್ಪಂದಿಸಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಬಸ್ ವ್ಯವಸ್ಥೆ ಆಗಬೇಕಿದ್ದು, ಮತ್ತೆ ಬಸ್ ಆರಂಭಿಸುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ಮಾಡಲಾಗುವುದು.

ಸೋಮಶೇಖರ್ ಬನವಾಸಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ