ಮೈಸೂರು: ರಾಜ್ಯ ಸರ್ಕಾರದಿಂದ ತಯಾರಿಸಲಾಗಿರುವ ನೂತನ ಟೂರಿಸಂ ಪಾಲಿಸಿಯಿಂದ ಪ್ರವಾಸೋದ್ಯಮಿಗಳು ಸಾಕಷ್ಟು ಅನುಕೂಲಗಳನ್ನು ಪಡೆದುಕೊಳ್ಳಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಎಚ್.ಪಿ.ಜನಾರ್ದನ ಹೇಳಿದರು.
ಮೈಸೂರಿನ ಹೋಟೆಲ್ ಮಾಲೀಕರ ಸಂಘ, ಸ್ಕಾಲ್ ಇಂಟರ್‌ನ್ಯಾಷನಲ್ ಮೈಸೂರು ವತಿಯಿಂದ ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ಕರ್ನಾಟಕ ಟೂರಿಸಂ ಪಾಲಿಸಿ 2024-29ರ ಒಳನೋಟ’ ಕಾರ್ಯಕ್ರಮದಲ್ಲಿ ನೂತನ ಟೂರಿಸಂ ಪಾಲಿಸಿ ಕುರಿತು ಮಾತನಾಡಿದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರದಿಂದ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಲ, ಕಾಲಕ್ಕೆ ಹೊಸ ನೀತಿಗಳನ್ನು ರೂಪಿಸುತ್ತಿದ್ದು, ಈಗ ಸರ್ಕಾರ ರೂಪಿಸಿರುವ ನೂತನ ಪ್ರವಾಸೋದ್ಯಮ ನೀತಿ, ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದರು.
ಪ್ರವಾಸೋದ್ಯಮ ವಿಷಯದಲ್ಲಿ ನಮ್ಮ ಸಾಂಸ್ಕೃತಿಕ ನಗರಿ ಮೈಸೂರು ಕರ್ನಾಟಕಕ್ಕೆ ಕಳಶಪ್ರಾಯವಿದ್ದಂತೆ. ನಾವು ಎಲ್ಲಿ ಹೋದರೂ ಮೈಸೂರನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಪ್ರಚಾರ ಮಾಡುತ್ತೇವೆ. ಈ ನಿಟ್ಟಿನಲ್ಲಿ ಇಲ್ಲಿನ ಪ್ರವಾಸೋದ್ಯಮಿಗಳೂ ಸಹ ಸರ್ಕಾರದೊಂದಿಗೆ ಆಗಿಂದಾಗ್ಗೆ ಸಂಪರ್ಕದಲ್ಲಿದ್ದು ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಯಾಗುವಂತೆ ಮಾಡಬೇಕು ಎಂದು ಕೋರಿದರು.
ಪ್ರವಾಸೋದ್ಯಮಿಗಳು ಹೆಚ್ಚಾಗಿ ರಾಜ್ಯ ಸರ್ಕಾರದಿಂದ ನಡೆಯುವ ಪ್ರವಾಸೋದ್ಯಮ ಸಂಬಂಧಿ ಕಾರ್ಯಕ್ರಮಗಳಿಗೆ ಹಾಜರಾಗಬೇಕು. ನಿರಂತರವಾಗಿ ನಮ್ಮ ಸಂಪರ್ಕದಲ್ಲಿರಬೇಕು, ಏನೇ ತೊಂದರೆಗಳಾದರೂ ನಮ್ಮನ್ನು ಸಂಪರ್ಕಿಸಬೇಕು. ಸರ್ಕಾರದಿಂದ ಅಗತ್ಯವಾದ ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದರು.
ರಾಜ್ಯಕ್ಕೆ ಬರುವ ಪ್ರವಾಸಿಗರ ಸುರಕ್ಷತೆಯ ನಿಟ್ಟಿನಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಅಲ್ಲದೆ ಪ್ರವಾಸಿಗರೊಂದಿಗೆ ಹೇಗೆ ವರ್ತಿಸಬೇಕು ಎಂದು ಪೊಲೀಸರು, ಟಾಂಗಾವಾಲಾಗಳು, ಹೋಟೆಲ್ ಸಿಬ್ಬಂದಿ ಸೇರಿದಂತೆ ಇತರರಿಗೆ ತರಬೇತಿ ನೀಡುವುದು, ನಮ್ಮ ಹೊಸ ಪಾಲಿಸಿಗಳ ಬಗ್ಗೆ ಪ್ರವಾಸೋದ್ಯಮಿಗಳಿಗೆ ಅರಿವು ಮೂಡಿಸಿ ಅವರು ಇದರ ಸಂಪೂರ್ಣ ಉಪಯೋಗ ಪಡೆದುಕೊಳ್ಳುವಂತೆ ಮಾಡುವುದು ಉದ್ದೇಶ ನಮ್ಮದು ಎಂದು ಹೇಳಿದರು.
ಈ ನಿಟ್ಟಿನಲ್ಲಿ ಇಲಾಖೆ ನಿರಂತರವಾಗಿ ಕಾರ್ಯಪ್ರವೃತ್ತವಾಗಿದೆ. ಮೈಸೂರು ದೇಶದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ದಸರಾ ಹೊರತುಪಡಿಸಿ ಇತರ ಸಮಯದಲ್ಲೂ ಇಲ್ಲಿ ವಿವಿಧ ಚಟುವಟಿಕೆ ನಡೆಸುವುದು, ನೈಟ್ ಲೈಫ್ ಉತ್ತಮಗೊಳಿಸುವ ಬಗ್ಗೆ ಯೋಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರದ ಹಳೇ ಜಿಲ್ಲಾಧಿಕಾರಿ ಕಚೇರಿಯ ಉನ್ನತೀಕರಣ, ದಸರಾ ಸಂದರ್ಭದಲ್ಲಿ ಆಗುವ ತೊಂದರೆಗಳು, ಪ್ರವಾಸಿಗರು ದಿನನಿತ್ಯ ಅನುಭವಿಸುವ ತೊಂದರೆಗಳು, ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮಾತನಾಡಿದರು. ಇದಕ್ಕೆ ಉತ್ತರಿಸಿದ ಜಂಟಿ ನಿರ್ದೇಶಕರು, ಈ ಬಗ್ಗೆ ಗಮನ ವಹಿಸುವುದಾಗಿ ತಿಳಿಸಿದರು.
ಮೈಸೂರು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ನಿರ್ದೇಶಕ ಪ್ರಭುಸ್ವಾಮಿ, ಸ್ಕಾಲ್ ಇಂಟರ್‌ನ್ಯಾಷನಲ್ ಮೈಸೂರು ವಿಭಾಗದ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಹಾಲಿ ಅಧ್ಯಕ್ಷ ಸಿ.ಎ.ಜಯಕುಮಾರ್, ಕಾರ್ಯದರ್ಶಿ ಎಂ.ಎಲ್.ನಾಗೇಶ್, ಉಪಾಧ್ಯಕ್ಷ ಎಸ್.ಜೆ.ಅಶೋಕ್, ಖಜಾಂಚಿ ಸಮರ್ಥ್ ವೈದ್ಯ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಮೈಸೂರು ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಲಿಂಗರಾಜು ಇತರರು ಇದ್ದರು.