ಗೋಕರ್ಣ: ದೇಶ ವಿದೇಶಗಳ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ಗೋಕರ್ಣದ ಪ್ರವಾಸೋದ್ಯಮ ಕಳೆದ ಕೆಲ ವರ್ಷಗಳಿಂದ ಹೊಸ ಜಾಡಿನತ್ತ ಸಾಗುತ್ತಿದೆ. ಯಾತ್ರಾ ಸ್ಥಳವಾಗಿ ಧರ್ಮ ಮತ್ತು ಕರ್ಮಾನುಷ್ಠಾನಗಳಿಗೆ ಮಾತ್ರವೇ ಪ್ರಧಾನವಾಗಿದ್ದ ಕ್ಷೇತ್ರವು 90ರ ದಶಕದಿಂದೀಚೆಗೆ ಮೊದಲ ಬಾರಿಗೆ ವಿದೇಶಿ ಪ್ರವಾಸಿಗರ ಆಗಮನದಿಂದ ಪ್ರವಾಸೋದ್ಯಮದ ಹೊಸ ಮಾರ್ಗದತ್ತ ಹೊರಳಿತು.
ಅಂದಿನ ಪರಿಶುದ್ಧ ಗೋಕರ್ಣದ ನಿಸರ್ಗ ರಮ್ಯತೆ, ಜನ-ವಾಹನಗಳ ವಿರಳ ಸಂಚಾರ ಮತ್ತು ಪ್ರಶಾಂತ ವಾತಾವರಣದ ಬೀಚ್‌ಗಳು ವಿದೇಶಿಗರು ಗೋಕರ್ಣಕ್ಕೆ ಹೆಜ್ಜೆ ಇಡುವಂತೆ ಮಾಡಿತು. ವಿಶೇಷವಾಗಿ ಯುರೋಪಿನಲ್ಲಿ ಗೋಕರ್ಣದ ಆಕರ್ಷಣೆಯ ಪ್ರಸಾರ ಮತ್ತು ಪ್ರಚಾರ ಎಲ್ಲ ದೇಶಗಳಿಗೆ ಮುಟ್ಟಿತು. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಏರುತ್ತ ಸಾಗಿತು. ಜತೆಗೆ ಪರದೇಶೀಯರನ್ನು ನೋಡಲು ಕೂಡ ನಾನಾ ರಾಜ್ಯಗಳಿಂದ ಪ್ರವಾಸಿಗರು ಲಗ್ಗೆಯಿಡುವಂತಾಯಿತು. ಇದರಿಂದಾಗಿ ವರ್ಷದಲ್ಲಿ 10 ಲಕ್ಷಕ್ಕೂ ಅಧಿಕ ಪ್ರವಾಸಿಗರು ಗೋಕರ್ಣಕ್ಕೆ ಆಗಮಿಸುವಂತಾಯಿತು.
ಹೊಸ ದಾಖಲೆಯತ್ತ:
ವಿವಿಧ ವ್ಯವಸ್ಥೆ ಹೊಂದಿದ ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಸೇರಿದಂತೆ ಉದ್ಯಮಗಳೂ ನೆಲೆಯೂರಿದವು. ಇದರಿಂದಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ವಸತಿ ಏರ್ಪಾಟುಗಳಿರುವ ಪ್ರವಾಸಿ ಕೇಂದ್ರ ಎನಿಸಿತು.
ಆದರೆ ಕರೋನಾ ಮತ್ತು ನಂತರದ ದಿನಗಳಲ್ಲಿ ನಾನಾ ಕಾರಣಗಳಿಂದ ಗೋಕರ್ಣದ ವಿದೇಶಿ ಪ್ರವಾಸೋದ್ಯಮ ತೀರಾ ಇಳಿಕೆ ಕಂಡು ಪ್ರವಾಸೋದ್ಯಮ ಹೊರಳು ದಾರಿಯತ್ತ ಸಾಗುವಂತಾಯಿತು. ವಿದೇಶಿಯರ ಪ್ರಮಾಣ ಕುಸಿಯಿತು. ರಷ್ಯಾ ಮತ್ತು ಯುಕ್ರೇನ್ ಯುದ್ಧದ ವಾತಾವರಣದ ದುಷ್ಪರಿಣಾಮ ಗೋಕರ್ಣದ ಮೇಲಾಯಿತು. ಇಲ್ಲಿಗೆ ಬರುವ ಶೇ. 60ಕ್ಕಿಂತ ಹೆಚ್ಚಿನ ವಿದೇಶಿಯರು ರಷ್ಯಾ ಮತ್ತು ಇಸ್ರೇಲಿಗಳಾಗಿದ್ದು, ಕೈಬಿಚ್ಚಿ ವಿವಿಧ ವ್ಯವಹಾರ ಮಾಡುವುದರಲ್ಲೂ ಇವರೇ ಮುಂದು. ಜತೆಗೆ ಯುರೋಪಿನಲ್ಲಿನ ಆರ್ಥಿಕ ಹಿಂಜರಿತವೂ ಗೋಕರ್ಣ ಸಂದರ್ಶಿಸುವ ಯುರೋಪಿಯನ್‌ರ ಮೇಲಾಯಿತು. ಹೀಗಾಗಿ 2019ರಿಂದೀಚೆಗೆ ವಿದೇಶಿಯರ ಸಂಖ್ಯೆ ಸಾವಿರಕ್ಕಿಂತ ಕಡಿಮೆಯಾಯಿತು.
ಕಳೆದ ವರ್ಷ ವಿದೇಶಿಯರ ಭೇಟಿ ಏರಿಕೆಯತ್ತ ಸಾಗಿತ್ತಾದರೂ ಇಸ್ರೇಲ್ ಯುದ್ಧ ಪ್ರಾರಂಭವಾಗಿದ್ದರಿಂದ ಇಲ್ಲಿನ ಇಸ್ರೇಲಿಗಳು ತಿರುಗಿ ದೇಶ ಸೇರುವಂತಾಯಿತು.
ಹೋಟೆಲ್, ವಸತಿ ವ್ಯವಸ್ಥೆ ಮುಂತಾದವನ್ನು ನಿರ್ಮಿಸಿ ವ್ಯಾಪಾರ ವಹಿವಾಟು ಮಾಡಲು ಧೈರ್ಯ ತೋರಿದ ಸಣ್ಣ ಮತ್ತು ದೊಡ್ಡ ಉದ್ಯಮಿಗಳಿಂದಾಗಿ ಪ್ರವಾಸಿ ವ್ಯವಸ್ಥೆಗಳು ಗೋಕರ್ಣದಲ್ಲಿ ನೆಲೆಯೂರಿವೆ. ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸರ್ಕಾರಗಳ ಪ್ರಯತ್ನ ಶೂನ್ಯ. ವಸ್ತುತಃ ಮೂಲ ಸೌಲಭ್ಯಗಳ ಅಭಾವ ಇವತ್ತಿಗೂ ಸಮಗ್ರ ಗೋಕರ್ಣವನ್ನು ಬಾಧಿಸುತ್ತಿರುವುದು ವಿಚಿತ್ರವಾದರೂ ವಾಸ್ತವ.
ಗೋಕರ್ಣದಲ್ಲಿ ಸರ್ಕಾರದಿಂದ ಆಗಲೇ ಬೇಕಾದ ಅಗತ್ಯ ಅಭಿವೃದ್ಧಿ ಕೆಲಸಗಳು ಸಾಕಷ್ಟಿವೆ. ಗೋಕರ್ಣದ ಸಾರ್ವಜನಿಕ ವ್ಯವಸ್ಥೆಗಳನ್ನು ಉತ್ಕೃಷ್ಟವಾಗಿಸಲು ಸರ್ಕಾರಿ ಅನುದಾನ ಸಾಲದಾಗಿದೆ. ಹೀಗಾಗಿ ಇಲ್ಲಿನ ಮೂಲಸೌಕರ್ಯಗಳನ್ನು ಬಲ ಪಡಿಸಿ ಉತ್ತಮವಾಗಿಸಲು ಸರ್ಕಾರದ ಯೋಜನೆಗಳ ’ವಿಶೇಷ ಪ್ಯಾಕೇಜ್’ ಘೋಷಣೆ ಅತ್ಯಂತ ತ್ವರಿತದ ಅವಶ್ಯಕತೆ ಹಾಗೂ ಸ್ಥಳೀಯರ ಬೇಡಿಕೆಯಾಗಿದೆ.-ದಿನಕರ ಶೆಟ್ಟಿ ಶಾಸಕ