ಗಂಗಾವತಿ: ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಮಂಜೂರಾದ 100 ಕೋಟಿ ರೂ.ವೆಚ್ಚದ ಯೋಜನಾ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುತ್ತಿದ್ದು, ಡಿ.15 ಗಡುವು ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಹನುಮನಹಳ್ಳಿಯ ಹಂಪಿ ಡೆಲ್ಮಾಟ್ ಸಭಾಂಗಣದಲ್ಲಿ ಅಂಜನಾದ್ರಿ ಅಭಿವೃದ್ಧಿ ಕುರಿತು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಜಿಲ್ಲಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಮೊದಲ ಹಂತದಲ್ಲಿ 21.54 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ವಸತಿ ಸಮುಚ್ಚಯಕ್ಕಾಗಿ 9.08 ಕೋಟಿ ರೂ., ಪ್ರದಕ್ಷಿಣ ಪಥಕ್ಕಾಗಿ 4.32 ಕೋಟಿ ರೂ. ಮತ್ತು ಶಾಪಿಂಗ್ ಕಾಂಪ್ಲೆಕ್ಸ್, ಶೌಚಗೃಹಕ್ಕಾಗಿ 7.24 ಕೋಟಿ ರೂ. ಮೀಸಲಿರಿಸಲಾಗಿದೆ. ಈಗಾಗಲೇ ಶೇ.50 ಕಾಮಗಾರಿ ಪೂರ್ಣಗೊಂಡಿದೆ. ಡಿ.15ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು.
== ಅಭಿವೃದ್ಧಿ ನೀಲಿನಕ್ಷೆ ==
ಅಂಜನಾದ್ರಿ ಸಮಗ್ರ ಅಭಿವೃದ್ದಿ 105 ಎಕರೆ ಭೂಮಿ ಅಗತ್ಯವಿದ್ದು, 12.15 ಎಕರೆ ಸರ್ಕಾರಿ ಭೂಮಿಯಿದೆ. ಉಳಿದ ಭೂಮಿ ಸ್ವಾಧೀನಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಮಾ.2026ರೊಳಗೆ ಪೂರ್ಣಗೊಳಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ದೇವಸ್ಥಾನ ನವೀಕರಣ, ಥೀಮ್ ಪಾರ್ಕ್, ಅಂಜನಾದ್ರಿಯಿಂದ ಹಂಪಿ ವೀಕ್ಷಣೆಗೆ ದೂರದರ್ಶಕ ವ್ಯವಸ್ಥೆ, ಧ್ವನಿ ಮತ್ತು ಬೆಳಕು, ಪ್ರದಕ್ಷಿಣ ಪಥ ಮುಂದುವರಿದ ಕಾಮಗಾರಿ, ಸಮುದಾಯ ಭವನ, ಪ್ರವಾಸಿಗರ ಅನುಕೂಲಕ್ಕಾಗಿ ಅಡುಗೆ ಮನೆ, ವಿಐಪಿ ಅತಿಥಿ ಗೃಹ, ಪಾರಂಪರಿಕ ರೀತಿಯಲ್ಲಿ ಮೆಟ್ಟಿಲುಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಕೇಬಲ್ ಕಾರ್ ನಿರ್ಮಾಣಕ್ಕೆ ಟೆಂಡರ್ ಪೂರ್ಣಗೊಂಡಿದ್ದು, ರೈಟ್ಸ್ ಸಂಸ್ಥೆ ಟೆಂಡರ್ ಪಡೆದಿದೆ. ಬೆಟ್ಟ ಹತ್ತಲು ಎಕ್ಸಲೇಟರ್ ನಿರ್ಮಾಣವನ್ನು ಮಾ.2026ರೊಳಗೆ ಪೂರ್ಣಗೊಳಿಸಲಾಗುವುದು. ಮಲೀನ ನೀರು ತುಂಗಭದ್ರಾ ನದಿಗೆ ಸೇರದಂತೆ ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ವಿಳಂಬಕ್ಕೆ ಅವಕಾಶ ನೀಡದೇ ಗಂಭೀರ ಚಿಂತನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬೆಟ್ಟದಲ್ಲಿನ ಪೂಜೆ ವಿವಾದ ಗೊಂದಲ ಬಗೆಹರಿಸುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದ್ದು, ಬಗೆಹರಿಸಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಪ್ರದಕ್ಷಿಣೆ ಪಥಕ್ಕಾಗಿ ಹಣ ವಿನಿಯೋಗಿಸದೆ, ಶೌಚಗೃಹ ಮತ್ತು ಸ್ನಾನಘಟ್ಟಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಆನೆಗೊಂದಿ ಭಾಗದಲ್ಲಿ ಪೊಲೀಸ್ ಠಾಣೆ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.