ಜಿಲ್ಲೆ

ಹೊಂ ಸ್ಟೇಗಳಲ್ಲಿ ಸುರಕ್ಷತಾ ಕ್ರಮ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರವಾಸೋದ್ಯಮದ ವ್ಯಾಪ್ತಿಯ ಹೊಂ ಸ್ಟೇಗಳಲ್ಲಿ ಸುರಕ್ಷತಾ ಮತ್ತು ರಕ್ಷಣೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಿತದೃಷ್ಟಿಯಿಂದ ಹೊಸದಾಗಿ ನಾಲ್ಕು ಹೊಸ ಹೊಂ ಸ್ಟೇಗಳಿಗೆ ಅರ್ಜಿ ಸಲ್ಲಿಕೆಯಾಗಿದೆ. ಇವುಗಳಿಗೆ ಪರವಾನಿಗೆ ನೀಡುವ ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆದು ಹೊಂ ಸ್ಟೇ ನಡೆಸುತ್ತಿರುವ ಬಗ್ಗೆ ಮಾಲೀಕರಿಂದ ಖಾತ್ರಿಪಡಿಸಿಕೊಳ್ಳಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಂ ಸ್ಟೇಗಳು ಸರ್ಕಾರದ ನಿಯಮಗಳು ಪಾಲಿಸಬೇಕು. ಗುಣಮಟ್ಟದ ಆರೋಗ್ಯ, ನೈರ್ಮಲ್ಯ ಮತ್ತು ಅಗ್ನಿ ಸುರಕ್ಷತೆ ಒಳಗೊಂಡಂತೆ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಲಾಗುತ್ತಿದೆಯೇ ಎಂದು ಪರೀಕ್ಷಿಸಬೇಕು. ಹೊಸದಾಗಿ ಪರವಾನಿಗೆ ನೀಡುವ ಸಂದರ್ಭದಲ್ಲಿ ಪರಿಶೀಲನೆಗೆ ಸಂಬಂಧಪಟ್ಟ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ, ಅಗ್ನಿಶಾಮಕ ದಳದ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ಸ್ಥಳೀಯ ಆರಕ್ಷಕ ನಿರೀಕ್ಷಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರನ್ನು ಒಳಗೊಂಡ ಒಂದು ವಿಶೇಷ ತಂಡ ರಚಿಸಿಕೊಂಡು ಪರಿಶೀಲನೆ ನಡೆಸಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ತಿಳಿಸಿದಂತೆ, ರಾಜ್ಯದ ಜಲಾಶಯಗಳ ಹಿನ್ನೀರಿನಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆ ಮತ್ತು ಜಲಸಾಹಸ ಕ್ರೀಡೆಗಳನ್ನು ಯೋಜಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿರುವ ಹಿನ್ನೆಲೆ ಜಿಲ್ಲೆಯಲ್ಲಿ 5 ಜಲಕ್ರೀಡೆಗೆ ಅನುಕೂಲಕರ ಜಾಗಗಳನ್ನು ಈಗಾಗಲೇ ಗುರುತಿಸಲಾಗಿದೆ. ನುರಿತ ತಜ್ಞರ ತಂಡವನ್ನು ರಚಿಸಿ ಜಲ ಸಾಹಸ ಮತ್ತು ಜಲ ಕ್ರೀಡೆಗಳಿಗೆ ಗುರುತಿಸಲಾಗಿರುವ ಜಾಗಗಳು ಸೂಕ್ತವಾಗಿ ಇದೆಯೇ ಮತ್ತು ಎಲ್ಲ ರೀತಿಯಿಂದ ಸುರಕ್ಷಿತವಾದ ಕ್ರಮಗಳನ್ನು ಕೈಗೊಳ್ಳಲು ಯೋಗ್ಯವಾದ ಸ್ಥಳವಾಗಿದೆಯೇ ಎಂದು ಪರೀಶೀಲನೆ ನಡೆಸಿ ಇ- ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ನಾಗಮಂಗಲ ತಾಲೂಕಿನ ಮುಳುಕಟ್ಟೆ ಹಾಗೂ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನಿರ್ಮಿಸಿರುವ ಯಾತ್ರಿನಿವಾಸ ಕಟ್ಟಡಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಇ- ಟೆಂಡರ್ ಕರೆಯಲಾಗುವುದು. ಇದರೊಂದಿಗೆ ಯಾತ್ರಿಕರು ತಂಗಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಮಾತನಾಡಿ, ರಾಜ್ಯಸರ್ಕಾರದ ಆದೇಶದಂತೆ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯಲ್ಲಿ ನೂತನ ಪ್ರವಾಸಿ ತಾಣಗಳನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗುರುತಿಸಿರುವ ಎಲ್ಲ ತಾಣಗಳು ತನ್ನದೇ ಆದ ವಿಶೇಷ, ವಿಶಿಷ್ಟೃತೆ, ಮಹತ್ವ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದೆ. ಮಂಡ್ಯ ತಾಲೂಕಿನಲ್ಲಿ 12, ಮಳವಳ್ಳಿಯಲ್ಲಿ 11, ಮದ್ದೂರಿನಲ್ಲಿ 18, ಶ್ರೀರಂಗಪಟ್ಟಣದಲ್ಲಿ 24, ಪಾಂಡವಪುರದಲ್ಲಿ 13, ನಾಗಮಂಗಲದಲ್ಲಿ 10, ಕೆ.ಆರ್.ಪೇಟೆಯಲ್ಲಿ 18 ಸೇರಿದಂತೆ ಒಟ್ಟು 106 ನೂತನ ಪ್ರವಾಸಿ ತಾಣ ಗುರುತಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ್, ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಯಪ್ರಕಾಶ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.