ಜಿಲ್ಲೆ

ಅನ್‌ಲಾಕ್‌ನಲ್ಲಿ ಚಿಗುರುತ್ತಿರುವ ಪ್ರವಾಸೋದ್ಯಮ

Dakshina Kannada

ಭರತ್ ಶೆಟ್ಟಿಗಾರ್ ಮಂಗಳೂರು

ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ತಬ್ಧವಾಗಿದ್ದ ಪ್ರವಾಸೋದ್ಯಮ, ಹಂತಹಂತವಾಗಿ ಅನ್‌ಲಾಕ್ ಆಗುತ್ತಿರುವ ಸಂದರ್ಭ ಮತ್ತೆ ಚಿಗುರುತ್ತಿದೆ. ಕಳೆದೊಂದು ತಿಂಗಳಿಂದ ದೇವಸ್ಥಾನ, ಬೀಚ್ ಮತ್ತಿತರ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

ದ.ಕ, ಉಡುಪಿ ಜಿಲ್ಲೆಗಳು ಧಾರ್ಮಿಕ ಸ್ಥಳ ಮತ್ತು ಬೀಚ್ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಪ್ರತಿ ವರ್ಷ ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದರು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಬೇಕಿದ್ದ ಕಳೆದ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಕರೊನಾ ಲಾಕ್‌ಡೌನ್ ಕಾರಣ ಎಲ್ಲವೂ ಶೂನ್ಯಕ್ಕೆ ತಲುಪಿತ್ತು. ಜೂನ್‌ನಿಂದ ಅನ್‌ಲಾಕ್ ಆದರೂ, ಮುಂಗಾರು ಕಾರಣದಿಂದ ಪ್ರತಿ ವರ್ಷದಂತೆ ಪ್ರವಾಸಿಗರ ಸಂಖ್ಯೆ ವಿರಳವಾಗಿತ್ತು.

ದೇವಳಗಳಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ಸಿಗುತ್ತಿದ್ದಂತೆ ಆಗಸ್ಟ್ ಮಧ್ಯಂತರದ ಬಳಿಕ ಪ್ರವಾಸೋದ್ಯಮ ಮತ್ತೆ ನಿಧಾನವಾಗಿ ತೆರೆದುಕೊಂಡಿದೆ. ಪ್ರಸ್ತುತ ದೇವಳಗಳಲ್ಲಿ ಸೇವೆ, ಅನ್ನದಾನಗಳೂ ಆರಂಭವಾಗಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹೊರ ಜಿಲ್ಲೆ, ರಾಜ್ಯಗಳಿಂದ ಧಾರ್ಮಿಕ ಕೇಂದ್ರಗಳ ವೀಕ್ಷಣೆಗೆ ಬರುವ ಜನರು, ಬೀಚ್ ಸೇರಿದಂತೆ ಇತರ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡುತ್ತಿದ್ದಾರೆ. ಸರ್ಕಾರಿ-ಖಾಸಗಿ ಬಸ್ ಸೇವೆ ಸಂಪೂರ್ಣವಾಗಿ ಆರಂಭವಾದ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಬಹುದು ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು.

ವಾರಾಂತ್ಯದಲ್ಲಿ ಅಧಿಕ: ಪ್ರಮುಖ ದೇವಾಲಯಗಳಿಗೆ ದಿನಕ್ಕೆ ಸರಾಸರಿ 500-1000 ಮಂದಿ ಭೇಟಿ ನೀಡುತ್ತಿದ್ದು, ಪ್ರಸ್ತುತ ವಾರಾಂತ್ಯಗಳಲ್ಲಿ ಎರಡು ಮೂರು ಪಟ್ಟು ಹೆಚ್ಚಿರುತ್ತದೆ. ಅನ್‌ಲಾಕ್‌ನಲ್ಲಿ ಪ್ರಮುಖ ಧಾರ್ಮಿಕ ಸ್ಥಳಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು, ಕೊಲ್ಲೂರು, ಉಳ್ಳಾಲ ದರ್ಗಾ, ಮೂಡುಬಿದಿರೆ ಜೈನ ಬಸದಿ, ಕಾರ್ಕಳ ಗೊಮ್ಮಟಬೆಟ್ಟ, ಅತ್ತೂರು ಚರ್ಚ್ ಮೊದಲಾದವುಗಳು ಪ್ರವಾಸಿಗರಿಗಾಗಿ ತೆರೆದುಕೊಂಡಿವೆ. ಉಡುಪಿ ಶ್ರೀಕೃಷ್ಣ ಮಠ ಸೆ.28ರಂದು ಭಕ್ತರಿಗೆ ಮುಕ್ತವಾಗಲಿದೆ. ಸೇಂಟ್ ಮೇರೀಸ್ ದ್ವೀಪ, ಜಲಪಾತಗಳು, ಜಂಗಲ್ ರೆಸಾರ್ಟ್‌ಗಳು ಸೇರಿದಂತೆ ಕೆಲವು ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವೇಶಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. 10ವರ್ಷದ ಕೆಳಗಿನ ಮಕ್ಕಳಿಗೆ ದೇವಳಗಳಿಗೆ ಪ್ರವೇಶ ಅವಕಾಶ ಇಲ್ಲದಿರುವುದು ಸ್ವಲ್ಪ ಹಿನ್ನೆಡೆಯಾಗಿದ್ದು, ಕುಟುಂಬ ಸಹಿತ ದೇವಳಕ್ಕೆ ಭೇಟಿ ನೀಡುವವರು ಹಿಂಜರಿಯುತ್ತಿದ್ದಾರೆ.

ಪಿಲಿಕುಳ-ಬೀಚ್: ಮಂಗಳೂರಿನ ಪಿಲಿಕುಳದಲ್ಲಿ ಜೈವಿಕ ಉದ್ಯಾನವನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಇತರ ವಿಭಾಗಗಳು ಸದ್ಯ ಮುಚ್ಚಿವೆ. ಶನಿವಾರ-ಭಾನುವಾರ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ ಎನ್ನುತ್ತಾರೆ ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಜಯಪ್ರಕಾಶ್ ಭಂಡಾರಿ. ಕಳೆದೊಂದು ತಿಂಗಳಿಂದ ಕರಾವಳಿಯ ಬೀಚ್‌ಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಯಾರನ್ನೂ ನೀರಿಗೆ ಇಳಿಯಲು ಬಿಡುವುದಿಲ್ಲ. ವಾರಾಂತ್ಯ, ರಜಾದಿನಗಳಲ್ಲಿ ಪಾರ್ಕಿಂಗ್ ಪ್ರದೇಶ ಭರ್ತಿಯಾಗುತ್ತದೆ ಎಂದು ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆ ಸಿಇಒ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.

ಜಿಲ್ಲೆಯ ಕೆಲವು ಪ್ರಸಿದ್ಧ ದೇವಳಗಳಲ್ಲಿ ಪೂಜೆಗಳು ಆರಂಭವಾಗಿರುವುದರಿಂದ ಹೊರ ಜಿಲ್ಲೆ, ರಾಜ್ಯಗಳಿಂದ ಭಕ್ತರು ಬರುತ್ತಿದ್ದಾರೆ. ದೇವಳಗಳಿಗೆ ಬರುವವರು ಬೀಚ್ ಸೇರಿದಂತೆ ಜಿಲ್ಲೆಯ ಇತರ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ವರ್ಷಾಂತ್ಯದ ವೇಳೆಗೆ ಮತ್ತೆ ಹಿಂದಿನಂತೆ ಪ್ರವಾಸಿಗರು ಬರುವ ಸಾಧ್ಯತೆಯಿದೆ.

ಬಿ.ಕೆ.ಸೋಮಶೇಖರ್, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ದ.ಕ.

ಉಡುಪಿ ಜಿಲ್ಲೆಯಲ್ಲೂ ಪ್ರವಾಸೋದ್ಯಮ ನಿಧಾನವಾಗಿ ಚುರುಕು ಪಡೆಯುತ್ತಿದೆ. ಕೆಲವೊಂದು ಸ್ಥಳಗಳು ಪ್ರವಾಸಿಗರಿಗೆ ತೆರೆದುಕೊಂಡಿದ್ದು, ಇದರಿಂದ ಆರ್ಥಿಕ ಚಟುವಟಿಕೆಗಳೂ ಗರಿಗೆದರಿದೆ. ಕೆಲವೇ ಸಮಯದಲ್ಲಿ ಮತ್ತೆ ಯಥಾಸ್ಥಿತಿಗೆ ಮರಳುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿದೆ.

ಚಂದ್ರಶೇಖರ್ ನಾಯಕ್, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ ಉಡುಪಿ