ಅರಮನೆಯಲ್ಲಿ ಭಾನುವಾರ ಭರದಿಂದ ನಡೆದ ಸಿದ್ಧತೆಗಳು. 
ಜಿಲ್ಲೆ

ನಗರದಲ್ಲಿ ಪ್ರವಾಸೋದ್ಯಮ, ವ್ಯಾಪಾರ ಚೇತರಿಕೆ

ಮೈಸೂರು: ಎರಡು ವರ್ಷಗಳ ಬಳಿಕ ವಿಜೃಂಭಣೆಯಿಂದ ದಸರಾ ಮಹೋತ್ಸವ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಕರೊನಾ ಸಂಕಷ್ಟದಲ್ಲಿದ್ದ ಪ್ರವಾಸೋದ್ಯಮ ಮತ್ತು ವ್ಯಾಪಾರೋದ್ಯಮ ಹಿಂದಿನ ಸ್ಥಿತಿಗೆ ಮರಳಿದ್ದು, ಅಂದಾಜು 700 ರಿಂದ 800 ಕೋಟಿ ರೂ. ವಹಿವಾಟು ನಡೆದಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್ ತಿಳಿಸಿದರು.


ಎರಡು ವರ್ಷಗಳ ನಂತರ ಮೈಸೂರಿನಲ್ಲಿ ಅದ್ದೂರಿಯಾಗಿ ದಸರಾ ಆಚರಿಸಲಾಗಿದೆ. ಕೆಲ ಸಣ್ಣಪುಟ್ಟ ಅಡಚಣೆ ಹೊರತಾಗಿ ಎಲ್ಲ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದಿವೆ. ನಗರದಲ್ಲಿ ಹತ್ತು ದಿನ ನಡೆದ ವಿವಿಧ ಕಾರ್ಯಕ್ರಮಗಳನ್ನು 15 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ಸಂದರ್ಭ ಹೋಟೆಲ್ ಉದ್ಯಮಕ್ಕೆ 200 ಕೋಟಿ ರೂ.ಗೂ ಹೆಚ್ಚು ವ್ಯವಹಾರವಾಗಿದ್ದರೆ, ಇತರ ವ್ಯಾಪಾರ ವಹಿವಾಟಿನಿಂದ 700 ರಿಂದ 800 ಕೋಟಿ ರೂ. ವ್ಯವಹಾರ ನಡೆದಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಸೆ.26ರಿಂದ ಅಕ್ಟೋಬರ್ 7 ರವರೆಗೆ ಮೈಸೂರು ಮೃಗಾಲಯಕ್ಕೆ 2,46,485 ಜನರು ಹಾಗೂ ಕಾರಂಜಿ ಕೆರೆಗೆ 10 ಲಕ್ಷ ಜನರು ಭೇಟಿ ನೀಡಿದ್ದು, ಮೃಗಾಲಯಕ್ಕೆ ಒಟ್ಟು 2.60 ಕೋಟಿ ರೂ. ಆದಾಯ ಬಂದಿದೆ. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹದಿನೈದು ದಿನಗಳ ಕಾಲ ಮೈಸೂರಿನಲ್ಲೇ ಉಳಿದು ದಸರಾ ಯಶಸ್ಸಿಗೆ ಶ್ರಮಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಬಾರಿಯ ದಸರಾ ಉತ್ಸವ ಅಧ್ವಾನದಿಂದ ಕೂಡಿತ್ತು ಎಂಬ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ, ವಿಶ್ವನಾಥ್ ಹಿರಿಯ ನಾಯಕರು. ಅನೇಕ ಬಾರಿ ಮಂತ್ರಿಯಾಗಿದ್ದವರು. ದಸರಾ ಸಂಬಂಧ ಮೈಸೂರಿನಲ್ಲಿ ನಡೆದ ಸಭೆಗಳಲ್ಲಿ ಎಲ್ಲ ಪಕ್ಷದ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಿ ಅಗತ್ಯ ಸಲಹೆ, ಸೂಚನೆ ನೀಡಿದ್ದರು. ಅದರಂತೆ ವಿಶ್ವನಾಥ್ ಅವರು ಸಭೆಯಲ್ಲಿ ಭಾಗವಹಿಸಿ ಸಲಹೆ, ಸೂಚನೆ ನೀಡಿದ್ದರೆ ಕಾರ್ಯರೂಪಕ್ಕೆ ತರಬಹುದಿತ್ತು. ಆದರೆ ದಸರಾ ಮುಗಿದ ಮೇಲೆ ಈ ರೀತಿ ಹೇಳಿಕೆ ನೀಡುವುದರಿಂದ ಏನೂ ಪ್ರಯೋಜನವಿಲ್ಲ ಎಂದರು.


ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಮಾತನಾಡಿ, ದಸರಾ ಉನ್ನತ ಸಮಿತಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಆಧಾರದ ಮೇಲೆ ಕಾರ್ಯಕ್ರಮ ರೂಪುಗೊಂಡಿದೆ. ಜನಸಾಮಾನ್ಯರಿಂದ ಅದ್ದೂರಿ ದಸರೆಯಾಗಿದೆ. ಈಗ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಯಶಸ್ವಿಯಾಗಿ ದಸರಾ ನಡೆಸಿದ್ದರಿಂದ, ದಸರಾ ಮುಗಿದು ಒಂದು ವಾರವಾದರೂ ಮೈಸೂರು ನಗರ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಮಾಧ್ಯಮ ಸಂಚಾಲಕ ಮಹೇಶ್‌ರಾಜೇ ಅರಸ್, ಸಹ ವಕ್ತಾರ ಮಹೇಶ್, ಪ್ರದೀಪ್‌ಕುಮಾರ್ ಇದ್ದರು.