ಜಿಲ್ಲೆ

2024ರ ಮುನ್ನೋಟ: ಅವಕಾಶಗಳ ಆಗರ ಪ್ರವಾಸೋದ್ಯಮ

ಪ್ರವಾಸವೆಂದರೆ ಬರೀ ಐತಿಹಾಸಿಕ, ಪ್ರೇಕ್ಷಣಿಯ ಸ್ಥಳಗಳಿಗಷ್ಟೇ ಭೇಟಿ ನೀಡುವುದಲ್ಲ. ಕ್ಷೇತ್ರ ಈಗ ಪರಿಸರ, ಕೃಷಿ, ಧಾರ್ವಿುಕ, ಬಾಹ್ಯಾಕಾಶ, ವೈದ್ಯಕೀಯ, ಸಿನಿಮಾ, ಆಳಸಾಗರ ಪ್ರವಾಸೋದ್ಯಮ ಸೇರಿ ನಾನಾ ಮಜಲುಗಳಾಗಿ ವಿಸ್ತರಿಸಿಕೊಂಡಿದೆ. ರಾಜ್ಯದಲ್ಲಿಯೂ ಕಡಲತೀರ, ದಟ್ಟ ಅರಣ್ಯ ಪ್ರದೇಶ, ವೈವಿಧ್ಯಮಯ ವನ್ಯಜೀವಿ, ನಿಸರ್ಗಧಾಮಗಳು, ಐತಿಹಾಸಿಕ ಸ್ಮಾರಕಗಳು, ಶಿಲ್ಪಕಲೆ, ಸಾಂಸ್ಕೃತಿಕ-ಧಾರ್ವಿುಕ ಹಿರಿಮೆಯುಳ್ಳ ಅತ್ಯಧಿಕ ಪ್ರವಾಸಿತಾಣಗಳಿವೆ. ಆದರೆ, ಮೂಲಸೌಕರ್ಯ, ಸ್ವಚ್ಛತೆ, ಆತಿಥ್ಯ, ಸಾರಿಗೆ-ಸಂಪರ್ಕ ಹಾಗೂ ತಂತ್ರಜ್ಞಾನದ ಸ್ಪರ್ಶ ನೀಡಿ, ಕ್ಷೇತ್ರವನ್ನು ಉನ್ನತೀಕರಣಗೊಳಿಸಬೇಕಿದೆ.

ಪ್ರವಾಸೋದ್ಯಮದ ಉನ್ನತೀಕರಣಕ್ಕೆ ರಾಜ್ಯದಲ್ಲಿ ವಿಪುಲ ಅವಕಾಶಗಳಿವೆ. ಅಭಯಾರಣ್ಯ, ಬೆಟ್ಟ-ಗುಡ್ಡ, ನದಿ- ಬಯಲು, ಜಲಾಶಯ, ಸಮುದ್ರತೀರ, ಎಲ್ಲವೂ ಇವೆ. ಇವೆಲ್ಲವನ್ನೂ ಅಭಿವೃದ್ಧಿಪಡಿಸಿದ್ದಲ್ಲಿ ಪ್ರವಾಸೋದ್ಯಮ ಮಾತ್ರವಲ್ಲದೆ ಆಯಾ ಸ್ಥಳಗಳ ಜನರ ತಲಾ ಆದಾಯವೂ ಹೆಚ್ಚಲಿದೆ. ಮಲೇಷ್ಯಾ, ಕಾಂಬೋಡಿಯಾವನ್ನೂ ಮೀರಿಸಬಹುದಾಗಿದೆ.

| ಡಾ.ಎಸ್.ವೈ.ಸೋಮಶೇಖರ್ ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ ಹಂಪಿ

ಒಳನಾಡು ಜಲಸಾರಿಗೆಗೆ ಉತ್ತೇಜನ

ಎಲ್ಲ ವಯಸ್ಸಿನವರನ್ನೂ ಸೆಳೆಯಬಲ್ಲ ರಿವರ್ ರ್ಯಾಫ್ಟಿಂಗ್​ನಂಥ ಸಾಹಸಮಯ ಜಲಕ್ರೀಡೆಗಳು, ಮೌಂಟೇನ್ ಬೈಕಿಂಗ್, ಟ್ರೆಕ್ಕಿಂಗ್, ಸೈಕ್ಲಿಂಗ್​ನಂಥ ಚಟುವಟಿಕೆಗಳು ದಾಂಡೇಲಿ ಹೊರತುಪಡಿಸಿದರೆ ಒಳನಾಡಿನಲ್ಲೆಲ್ಲೂ ಅಷ್ಟಾಗಿ ಕಂಡುಬರುವುದಿಲ್ಲ. ಇನ್ನು ಕ್ರೂಸರ್, ಬೋಟಿಂಗ್, ವಾಟರ್ ಸ್ಕೂಟರ್ ರೈಡ್ಸ್ ಸಮುದ್ರತೀರಕ್ಕೆ ಸೀಮಿತಗೊಂಡಿವೆ. ಕೇರಳ, ಗೋವಾ ರಾಜ್ಯಗಳಿಗೆ ಹೋಲಿಸಿದರೆ ಒಳನಾಡು ಸಾರಿಗೆ ರಾಜ್ಯದಲ್ಲಿ ಅಷ್ಟೊಂದು ಬೆಳವಣಿಗೆ ಕಂಡಿಲ್ಲ. ಈ ವರ್ಷವಾದರೂ ಈ ನಿಟ್ಟಿನಲ್ಲಿ ಪ್ರಯತ್ನ ಆಗಬೇಕಿದೆ.

ಬ್ರ್ಯಾಂಡ್​ ಕರ್ನಾಟಕ

ಇತ್ತೀಚೆಗೆ ವಿಶ್ವ ವ್ಯಾಪಾರ ಸಂಸ್ಥೆಯಿಂದ ‘ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ’ ಎಂಬ ಹೆಗ್ಗಳಿಕೆಗೆ ಪಾತ್ರವಾದ ಗುಜರಾತ್​ನ ಧೋರ್ಡೆ ಗ್ರಾಮದಂಥ ಸ್ಥಳಗಳು ರಾಜ್ಯದಲ್ಲೂ ಇವೆ. ಶಿವಮೊಗ್ಗ ಜಿಲ್ಲೆಯ ಮತ್ತೂರು ಸಂಸ್ಕೃತ ಮಾತನಾಡುವ ಏಕೈಕ ಗ್ರಾಮವಾಗಿದ್ದರೂ ಗ್ರಾಮವನ್ನು ವಿಶ್ವಮಟ್ಟದಲ್ಲಿ ಪ್ರಚಾರಪಡಿಸುವ ಕಾರ್ಯ ಆಗಿಲ್ಲ. ಇಳಕಲ್, ಮೊಳಕಾಳ್ಮೂರು ಸೀರೆ, ಗುಳೇದಗುಡ್ಡ ಕುಪ್ಪಸ, ಕೊಪ್ಪಳದ ಕಿನ್ನಾಳ ಕಲೆ, ಚನ್ನಪಟ್ಟಣ ಬೊಂಬೆಗಳು ಸೇರಿದಂತೆ ತನ್ನದೇ ಆದ ವೈಶಿಷ್ಟ್ಯಗಳಿಂದ ಗುರುತಿಸಿಕೊಂಡಿರುವ ಸ್ಥಳಗಳ ಅಭಿವೃದ್ಧಿ ಹಾಗೂ ನಿರ್ವಹಣೆಯಲ್ಲಿ ಸ್ಥಳೀಯರ, ಸಂಘ-ಸಂಸ್ಥೆಗಳ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಿ, ಜಾಗತಿಕ ಮಟ್ಟದಲ್ಲಿ ರಾಜ್ಯದ ಬ್ರಾ್ಯಂಡ್ ಸೃಷ್ಟಿಸಬೇಕಿದೆ.