ಮಡಿಕೇರಿ:
ಮಳೆಗಾಲದಲ್ಲಿ ಕೊಡಗನ್ನು ಕಣ್ತುಂಬಿಸಿಕೊಳ್ಳುವ ಅನುಭವವೇ ವಿಭಿನ್ನ. ಕಾಲು ಕೂಡ ಕಾಣದಂತೆ ಕವಿಯುವ ಮಂಜು, ಬಿಸಿ ಬಿಸಿ ಕಾಫಿ ಕುಡಿಯುತ್ತಾ ಮೈಯೊಳಗೆ ಬಿಸಿಯೇರಿದರೂ ದೇಹವನ್ನು ತಟ್ಟುವ ಚಳಿ, ಬಿಡುವು ಕೊಡದೇ ಜಿಟಿ ಜಿಟಿ ಸುರಿಯುತ್ತಲೇ ಇರುವ ಮಳೆ, ಅಲ್ಲಲ್ಲಿ ಜುಳು ಜುಳು ಬೀಳುವ ಝರಿಗಳು, ತುಂಬಿ ಧುಮ್ಮಿಕ್ಕುವ ಜಲಪಾತಗಳು...ಇಂಥ ಅನುಭವ ಸವಿಯುವುದಕ್ಕಾಗಿಯೇ ಮಳೆಗಾಲದಲ್ಲಿ ಕೊಡಗಿನ ಕಡೆಗೆ ಪ್ರವಾಸ ಯೋಜಿಸಿಸುವವರು ಇದ್ದಾರೆ.
ಇಂಥವರಿಗಾಗಿಯೇ ಜಿಲ್ಲೆಯಲ್ಲಿ ಮಳೆಗಾಲದ ಪ್ರವಾಸೋದ್ಯಮ ಹುಟ್ಟಿಕೊಂಡಿದೆ.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ಕೊಡಗು ಪ್ರಾಕೃತಿಕ ಸಂಪತ್ತಿನಿAದ ಶ್ರೀಮಂತವಾಗಿದೆ. ಇಲ್ಲಿಯ ಪ್ರಕೃತಿ ಸೌಂದರ್ಯ ಸವಿಯಲು ದೇಶ, ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಪ್ರವಾಸಿ ಸೀಸನ್‌ನಲ್ಲಿ ಮಾತ್ರವಲ್ಲದೆ ವರ್ಷದ ಎಲ್ಲಾ ದಿನಗಳಲ್ಲೂ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಬಲ್ಲ ಸಂಗತಿಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ವಿಶೇಷ. 2015ರಿಂದ ಈಚೆಗೆ ಹೆಚ್ಚು ಪ್ರಚಲಿತಕ್ಕೆ ಬಂದಿರುವ ಮಳೆಗಾಲದ ಪ್ರವಾಸೋದ್ಯಮಕ್ಕೆ 2018, 2019 ಹಾಗೂ 2020ರ ಪ್ರಾಕೃತಿಕ ವಿಕೋಪ ಮತ್ತು ಈ ಬೆನ್ನಲ್ಲೇ ಕಾಣಿಸಿಕೊಂಡ ಕೊರೊನಾ ದೊಡ್ಡ ಮಟ್ಟಿಗೆ ಹೊಡೆತ ಕೊಟ್ಟಿತ್ತು.
ಆದರೆ ಮಳೆಗಾಲದ ಪ್ರವಾಸೋದ್ಯಮ 2022ರಿಂದ ಮತ್ತೆ ನಿಧಾನಕ್ಕೆ ಜೀವ ಪಡೆದುಕೊಂಡಿತ್ತು. ಜೂನ್ ಕೊನೆಯ ವಾರ ಮತ್ತು ಜುಲೈ ಮೊದಲ ವಾರದಿಂದ ಶುರುವಾಗುವ 'ಮಳೆಗಾಲ ಟೂರಿಸಂ ಟ್ರೆಂಡ್' ಅಕ್ಟೋಬರ್ ತನಕವೂ ಮುಂದುವರಿಯುತ್ತದೆ. ಅಷ್ಟರಲ್ಲಾಗಲೇ ದಸರಾವೂ ಬರುವುದರಿಂದ ಪ್ರವಾಸೋದ್ಯಮ ಚಟುವಟಿಕೆಯಿಂದ ಇರಲು ಮಳೆಗಾಲದ ಪ್ರವಾಸೋದ್ಯಮ ಸ್ಫೂರ್ತಿ ನೀಡುತ್ತಾ ಬಂದಿದೆ.
ಜಿಲ್ಲೆಯಲ್ಲಿ ಮಳೆಗಾಲದ ಪ್ರವಾಸೋದ್ಯಮವನ್ನು ಸುರಕ್ಷತೆಯ ಜತೆ ಜತೆಗೆ ಮತ್ತಷ್ಟು ಆಕರ್ಷಣೀಯಗೊಳಿಸಲು ಬೇಕಾದಷ್ಟು ಅವಕಾಶಗಳಿದ್ದು, ಇದರ ಸದ್ಬಳಕೆ ಆಗುತ್ತಿಲ್ಲ ಎನ್ನುವುದು ಪ್ರವಾಸೋದ್ಯಮ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಇನ್ನು ಕೂಡ ಕೊಡಗಿನಲ್ಲಿ ಬೆಳಕಿಗೆ ಬಾರದ ಹಲವಾರು ಜಲಪಾತಗಳಿವೆ. ಇವುಗಳನ್ನು ಪ್ರವಾಸಿಗರಿಗೆ ಪರಿಚಯ ಮಾಡಿಕೊಡಬೇಕು. ಮಳೆಗಾಲವನ್ನೂ ಪ್ರವಾಸಿಗರು ಅನುಭವಿಸುವಂತಾಗಬೇಕು ಎನ್ನುವ ಬೇಡಿಕೆಯೂ ಇದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊAಡಿದ್ದಾರೆ.
ನಮ್ಮ ಕೊಡಗಿನಲ್ಲಿ ಪ್ರವಾಸಿ ತಾಣಗಳಿಗೆ ಕೊರತೆ ಇಲ್ಲ. ಆದರೆ ಅಭಿವೃದ್ಧಿ ಕಾರ್ಯ ಆಗಬೇಕಿದೆ. ಜಲಪಾತಗಳ ಬಳಿ ಜನರು ಹೋಗದಂತೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಬೇಕು. ನಿಸರ್ಗದ ಸೌಂದರ್ಯ ಸವಿಯಲು ಬರುವವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಫಲಕ ಹಾಕಬಹುದು. ಕೊಡಗು ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಆಗಬೇಕಿರುವ ಜಿಲ್ಲೆ.
ಧನಲಕ್ಷ್ಮೀ, ಅಂಗನವಾಡಿ ಶಿಕ್ಷಕಿ, ಶನಿವಾರಸಂತೆ
ಕೊಡಗಿನಲ್ಲಿ ಮಳೆಗಾಲದ ಪ್ರವಾಸೋದ್ಯಮಕ್ಕೆ ಹಲವಾರು ಅವಕಾಶಗಳಿವೆ. ಆಯಾಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲ್ಲಿರುವ ವಿಶೇಷತೆಗಳನ್ನು ಗುರುತಿಸಿ ಹೊರಪ್ರಪಂಚಕ್ಕೆ ಪರಿಚಯ ಮಾಡಬೇಕು. ಇದರಿಂದ ಸ್ಥಳೀಯ ಪಂಚಾಯತಿಗಳ ಆದಾಯಕ್ಕೂ ದಾರಿ ಮಾಡಿಕೊಟ್ಟಂತಾಗುತ್ತದೆ. ಪ್ರವಾಸಿ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಬೇಕು. ಪ್ರವಾಸೋದ್ಯಮದ ಆದಾಯವನ್ನು ಪಂಚಾಯತ್‌ಗಳು ತೆಗೆದುಕೊಂಡು ಪ್ರವಾಸಿಗರಿಗೆ ಸವಲತ್ತುಗಳನ್ನು ಕೊಡಬೇಕು.
ಗುರುಪ್ರಸಾದ್, ಕೃಷಿಕ, ನಂದಿಗುAದ
ಕೊಡಗಿನ ಪ್ರತಿ ಪ್ರವಾಸಿ ತಾಣಗಳಲ್ಲೂ ಸಂಬAಧಪಟ್ಟ ಪಂಚಾಯತಿ, ಪುರಸಭೆಯಿಂದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಮೇಲ್ವಿಚಾರಕರ ನೇಮಕ ಮಾಡಬೇಕು. ಪ್ರ‍್ರಾಕೃತಿಕ ತಾಣಗಳಲ್ಲಿ ತಿಂಡಿ, ತಿನಿಸು, ಪ್ಲಾಸ್ಟಿಕ್ ಬಾಟಲಿ, ಕವರ್‌ಗಳನ್ನು ನಿಷೇದಿಸಬೇಕು. ನದಿ ಮೂಲಗಳಲ್ಲಿ ಎಲ್ಲಾ ಸುರಕ್ಷತೆಯೊಂದಿಗೆ ಜಲ ಕ್ರೀಡೆಗೆ ಆದ್ಯತೆ ನೀಡಬೇಕು.
ಸಾಯಿಲ್ ಚೆಂಗಪ್ಪ, ವಿದ್ಯಾರ್ಥಿ, ಜೈ ಭಾರತ್ ಸೇನಾ ತರಬೇತಿ ಕೇಂದ್ರ, ವಿರಾಜಪೇಟೆ
ಕೊಡಗು ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಮಳೆಗಾಲದಲ್ಲಿ ಎಲ್ಲಾ ಜಲಪಾತಗಳು ತುಂಬಿ ಹರಿದು ಇನ್ನಷ್ಟು ಆಕರ್ಷಕವಾಗಿರುತ್ತದೆ. ಅದೇ ರೀತಿ ಅಲ್ಲಿ ಪ್ರವಾಸಿಗರು ನೀರಿಗೆ ಇಳಿಯದಂತೆ ಸೂಚನಾ ಫಲಕ ಅಳವಡಿಸಬೇಕು. ಅಥವಾ ಸಿಬ್ಬಂದಿ ನೇಮಿಸಿದರೆ ಅನಾಹುತಗಳು ತಪ್ಪುತ್ತವೆ. ಮಳೆಗಾಲದಲ್ಲಿ ಇಂತಹ ವಿಚಾರಗಳ ಮೇಲೆ ಹೆಚ್ಚಿನ ಗಮನ ಹರಿಸಿದರೆ ಪ್ರವಾಸೋದ್ಯಮಕ್ಕೆ ಒಳಿತು.
ಎನ್.ಜಿ. ಸುರೇಶ್, ವಿದ್ಯುತ್ ಗುತ್ತಿಗೆದಾರ, ಗೋಣಿಕೊಪ್ಪಲು
ಪ್ರವಾಸೋದ್ಯಮ ಯೋಜನೆಗೆ ನೈಸರ್ಗಿಕ ಭೂದೃಶ್ಯಗಳು ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಹೆಚ್ಚಿಸುವುದರ ಮೂಲಕ ಹಾಗೂ ಸ್ಥಳೀಯ ಸಮುದಾಯಗಳನ್ನು ಪ್ರೋತ್ಸಾಹಿಸುವುದು ಮತ್ತು ಉತ್ತೇಜಿಸುವುದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿದಂತಾಗುವುದು.
ಶರ್ಮಿಳಾ ರಮೇಶ್, ಸಾಹಿತಿ, ಸೋಮವಾರಪೇಟೆ
ಪ್ರವಾಸಿಗರನ್ನು ಆಕರ್ಷಿಸುವ ಕೊಡಗಿನ ಜಲಪಾತಗಳನ್ನು ಅಬಿವೃದ್ಧಿಪಡಿಸಬೇಕು. ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಮಹಿಳೆಯರಿಗೆ ಶೌಚಗೃಹ ನಿರ್ಮಾಣ ಮಾಡಬೇಕು. ಜಲಪಾತದಲ್ಲಿ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಬೇಕು. ಕೊಡಗಿನಲ್ಲಿ ಮಳೆಗಾಲದ ಪ್ರವಾಸೋದ್ಯಮ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಎಚ್.ಜೆ. ಜವರಪ್ಪ, ಶಿಕ್ಷಣ ಇಲಾಖೆ, ಬೇಳೂರು ಗ್ರಾಮ
ಕೊಡಗಿನಲ್ಲಿ ಮಳೆಗಾಲದಲ್ಲಿ ಹಲವಾರು ಕಡೆ ಎಲೆ ಮರೆಯಲ್ಲಿ ಬೇಕಾದಷ್ಟು ಝರಿ, ತೊರೆಗಳು ಹಾಲ್ನೊರೆಯಿಂದ ಧುಮ್ಮಿಕ್ಕುತ್ತಾ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೆ ಇಂಥ ಸ್ಥಳಗಳ ಪರಿಚಯ ಮಾಡುವುದು ಮುಖ್ಯ. ಇದಲ್ಲದೆ ವಿಶೇಷವಾಗಿ ಮಳೆಗಾಲದಲ್ಲಿ ಇಂಥ ಕಡೆ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಒದಗಿಸಬೇಕಾಗುತ್ತದೆ. ಪ್ರವಾಸಿಗರು ಕೂಡ ಪ್ರೇಕ್ಷಣೀಯ ಸ್ಥಳಗಳ ಆನಂದವನ್ನು ಸವಿಯುವುದರೊಂದಿಗೆ ತಮ್ಮ ಸುರಕ್ಷತೆಯನ್ನು ಕೂಡ ಕಾಪಾಡಿಕೊಳ್ಳಬೇಕು. ಎಚ್ಚರಿಕೆಯಿಂದ ಜಲಕ್ರೀಡೆಯಲ್ಲಿ ಭಾಗವಹಿಸುವುದರೊಂದಿಗೆ ಪರಿಸರ ಸ್ವಚ್ಛತೆಗೂ ಆದ್ಯತೆ ಕೊಡಬೇಕು.
ಬೈಮನ ಜ್ಯೋತಿ ತಿಮ್ಮಯ್ಯ, ಕೊಟ್ಟೂರು
ಕೊಡಗಿನಲ್ಲಿ ಮಳೆಗಾಲದ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಇಲ್ಲಿಯ ಬೆಟ್ಟಗುಡ್ಡಗಳಲ್ಲಿ ಇನ್ನು ಕೂಡ ಹಲವಾರು ಅಜ್ಞಾತ ಜಲಪಾತಗಳಿವೆ. ಅವುಗಳನ್ನು ಬೆಳಕಿಗೆ ತರುವ ಪ್ರಯತ್ನ ಆಗಬೇಕು. ಇಲ್ಲಿಯ ಮಳೆಯನ್ನು ಅನುಭವಿಸುವುದು ಕೂಡ ಒಂದು ವಿಶೇಷವೇ..ಇದಕ್ಕೆ ಸ್ಥಳೀಯ ಪ್ರವಾಸೋದ್ಯಮಿಗಳು ಮಳೆಗಾಲದ ಪ್ಯಾಕೇಜ್‌ಗಳನ್ನು ಮಾಡಬಹುದು. ಮಳೆಗಾಲದ ಅಡುಗೆ ಸವಿಯುವ ವ್ಯವಸ್ಥೆ ಕಲ್ಪಿಸಬಹುದು.
ಲತೀಶ್ ಪೂಜಾರಿ, ಮಡಿಕೇರಿ
ಜಲಪಾತಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ಕೊಡಲಾಗುತ್ತಿದೆ. ಪ್ರವಾಸಿಗರ ಸುರಕ್ಷತೆಗೂ ಗಮನಹರಿಸಲಾಗುತ್ತಿದೆ. ಮಲ್ಲಳ್ಳಿಯಲ್ಲಿ ಮೂವರು ಪ್ರವಾಸಿ ಮಿತ್ರರರು ಇದ್ದಾರೆ. ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ಎಸ್‌ಪಿ ಅವರಿಗೆ ಪತ್ರ ಬರೆಯಲಾಗಿದೆ. ಅಬ್ಬಿಫಾಲ್ಸ್ನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ನಿರ್ವಹಣೆಗೆ ಸ್ಥಳೀಯ ಪಂಚಾಯಿತಿಗೆ ಒಪ್ಪಿಸಲಾಗಿದೆ. ಮಲ್ಲಳ್ಳಿ ಫಾಲ್ಸ್ ಅನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. ರಿವರ್ ರ‍್ಯಾಫ್ಟಿಂಗ್ ಕೂಡ ಪುನಾರಂಭ ಆಗಿದೆ.
ಅನಿತಾ ಭಾಸ್ಕರ್, ಉಪನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ, ಕೊಡಗು