ಮಡಿಕೇರಿ:
ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ರಾಜ್ಯ ರಾಜಧಾನಿಗೆ ಕೊಡಗನ್ನು ಮತ್ತಷ್ಟು ಹತ್ತಿರ ತಂದಿರುವುದರ ಜೊತೆಗೆ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ದೊಡ್ಡ ಕಾಣಿಕೆ ಕೊಡುವ ನಿರೀಕ್ಷೆ ಹುಟ್ಟುಹಾಕಿದೆ. ಈಗಾಗಲೇ ಇದರ ಪರಿಣಾಮ ಕಾಣಿಸಿಕೊಳ್ಳಲಾರಂಭಿಸಿದ್ದು, ವಾರಾಂತ್ಯಗಳಲ್ಲಿ ಜಿಲ್ಲೆಯ ಪ್ರಮುಖ ರಸ್ತೆಗಳು ವಾಹನಗಳಿಂದ ಭರ್ತಿ ಆಗಿರುತ್ತದೆ. ಈ ಮಧ್ಯೆ ’ಒಂದು ದಿನದ ಮಡಿಕೇರಿ ಪ್ರವಾಸ’ ಟ್ರೆಂಡ್ ಹುಟ್ಟಿಕೊಂಡಿರುವುದು ಪ್ರವಾಸೋದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ.
ಈಗ ಕೇವಲ ೩ ಗಂಟೆ ಪ್ರಯಾಣ ಮಾಡಿದರೆ ಸಾಕು, ಬೆಂಗಳೂರಿನಿಂದ ಕೊಡಗು ತಲುಪಬಹುದು. ಹಾಗಾಗಿಯೇ ವಾರಾಂತ್ಯಗಳಲ್ಲಿ ರಾಜಧಾನಿ ಸುತ್ತಮುತ್ತಲಿನಲ್ಲಿ ಪ್ರವಾಸದ ಯೋಜನೆ ರೂಪಿಸುತ್ತಿದ್ದವರು ಈಗ ಮಡಿಕೇರಿಯನ್ನು ಆದ್ಯತೆಯಲ್ಲಿ ಪರಿಗಣಿಸುತ್ತಿದ್ದಾರೆ. ಒಂದೇ ದಿನದಲ್ಲಿ ಬಂದು ಹೋಗಬಹುದಾದ ಅನುಕೂಕಲ ಸಾಧ್ಯವಾಗಿರುವುದರಿಂದ ಟೆಕ್ಕಿಗಳ ಗಮನ ಜಿಲ್ಲೆಯ ಕಡೆಗೆ ಹರಿದಿದೆ. ಬೈಕ್‌ಗಳಲ್ಲಿ ಜಾಲಿ ರೈಡ್ ಆಗಮಿಸುವವರ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳ ಕಂಡುಬಂದಿದೆ.
ಸತತ ಪ್ರಾಕೃತಿಕ ವಿಕೋಪಗಳು, ಕೊರೊನಾ ಹಾವಳಿಯಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ೨೦೨೨ರ ದಸರಾ ನಂತರ ಚೇತರಿಕೆ ಸಿಕ್ಕಿತ್ತು. ನಂತರ ಕ್ರಿಸ್‌ಮಸ್ ರಜೆ, ವರ್ಷಾಂತ್ಯದ ದಿನಗಳಲ್ಲಿ ಕೊಡಗು ಮೊದಲಿನ ಸ್ಥಿತಿಗೆ ಬಂದಿರುವುದಕ್ಕೆ ಸಾಕ್ಷಿಯಾಗುವ ರೀತಿಯಲ್ಲಿ ಪ್ರವಾಸಿಗರಿಂದ ಗಿಜಿಗುಡುತ್ತಿತ್ತು. ಈಗ ಬೆಂಗಳೂರು, ಮೈಸೂರು ದಶಪಥ ಹೆದ್ದಾರಿ ಸಾರ್ವಜನಿಕರಿಗೆ ಮುಕ್ತವಾದ ನಂತರ ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ ಕಂಡುಬರುತ್ತಿದೆ. ಬರೀ ನಷ್ಟ ಎಂದು ಈತನಕ ಕೈ ಕೈ ಹಿಚುಕಿಕೊಳ್ಳುತ್ತಿದ್ದ ಪ್ರವಾಸೋದ್ಯಮಿಗಳೇ ಈಗ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಒಪ್ಪಿಕೊಳ್ಳುತ್ತಾರೆ.
ಇನ್ನು ಮಕ್ಕಳಿಗೆ ಪರೀಕ್ಷೆಗಳು ಮುಗಿದು ಶಾಲೆಗಳಿಗೆ ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆಯೇ ’ಪ್ರವಾಸಿ ಸೀಸನ್’ ಶುರುವಾಗುತ್ತದೆ. ಅನುಕೂಲಕರ ವಾತಾವರಣ, ಉತ್ತಮ ಸಂಪರ್ಕ ವ್ಯವಸ್ಥೆ ಇರುವುದರಿಂದ ಈ ವರ್ಷದ ಪ್ರವಾಸಿ ಋತುವಿನಲ್ಲಿ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಿಗಳು ಕೂಡ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ರೆಸಾರ್ಟ್, ಹೋಮ್‌ಸ್ಟೇಗಳಲ್ಲಿ ಭರದಿಂದ ಬುಕ್ಕಿಂಗ್ ನಡೆದಿದೆ.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವೇನೋ ಆಗಿದೆ. ಆದರೆ ಇದರಿಂದ ಸ್ಥಳೀಯ ಹೊಟೇಲ್, ಲಾಡ್ಜ್‌ಗಳಿಗೆ ಹೆಚ್ಚಿನ ಪ್ರಯೋಜ ಆಗುತ್ತಿಲ್ಲ ಎನ್ನುವ ಚರ್ಚೆ ಪ್ರವಾಸೋದ್ಯಮಿಗಳಲ್ಲಿ ಶುರುವಾಗಿದೆ. ಮೊದಲೆಲ್ಲಾ ಬೆಂಗಳೂರಿನಿಂದ ಕೊಡಗಿಗೆ ಪ್ರವಾಸ ಬರುವವರು ಸಾಮಾನ್ಯವಾಗಿ ಒಂದು ದಿನದ ತಂಗುವಿಕೆ ಸೇರಿ ೩ ದಿನಗಳ ಯೋಜನೆ ರೂಪಿಸಿಕೊಂಡು ಆಗಮಿಸುತ್ತಿದ್ದರು. ಇದರಿಂದ ಪ್ರವಾಸೋದ್ಯಮ ಅವಲಂಬಿತರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಲವು ರೀತಿಯ ಪ್ರಯೋಜನ ಆಗುತ್ತಿತ್ತು. ಈಗ ಬಹುತೇಕರು ಒಂದು ದಿನದ ಪ್ರವಾಸದಲ್ಲಿ ಬೆಳಗ್ಗೆ ಬಂದು ರಾತ್ರಿ ಮರಳುವುದರಿಂದ ಪ್ರವಾಸೋದ್ಯಮಕ್ಕೆ ಆರ್ಥಿಕ ಹೊಡೆತ ಬೀಳುತ್ತಿರುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ.
ಕೊಡಗಿಗೆ ಆಗಮಿಸುವ ಪ್ರವಾಸಿಗರ ಪ್ರವಾಸದ ಅವಧಿಯನ್ನು ವಿಸ್ತರಿಸಲು ಅನುಕೂಲ ಆಗುವಂತಹ ಯೋಜನೆಗಳನ್ನು ರೂಪಿಸುವ ಮೂಲಕ ಜಿಲ್ಲೆಗೆ ಲಾಭ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನುವ ಸಲಹೆಯನ್ನು ಪ್ರವಾಸೋದ್ಯಮ ಚಿಂತಕರು ಕೊಡುತ್ತಾರೆ. ಹೊಸ ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೆಲಸ ಸರಕಾರ ಮಾಡಬೇಕು. ತೆರೆ ಮರೆಯಲ್ಲಿ ಇರುವ ಪ್ರವಾಸಿತಾಣಗಳನ್ನು ಬೆಳಕಿಗೆ ತರುವಂತಾಗಬೇಕು. ಈಗ ಗುರುತಿಸಿಕೊಂಡಿರುವ ಪ್ರವಾಸಿತಾಣಗಳಲ್ಲಿ ಮತ್ತಷ್ಟು ಪ್ರವಾಸಿ ಆಕರ್ಷಣೆಗಳನ್ನು ಹೆಚ್ಚಿಸುವ ಮೂಲಕವೂ ದೀರ್ಘಾವಧಿ ಪ್ರವಾಸಕ್ಕೆ ಪ್ರೋತ್ಸಾಹ ಕೊಡಬಹುದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಬೆಂಗಳೂರು, ಮೈಸೂರು ದಶಪಥ ಹೆದ್ದಾರಿಯಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಹೆಚ್ಚು ಅನುಕೂಲ ಆಗಿದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಹೊಸ ಪ್ರವಾಸಿತಾಣಗಳನ್ನು ಗುರುತಿಸಿ ಪರಿಚಯಿಸುವ ಕೆಲಸ ಆದರೆ ಜಿಲ್ಲೆಗೆ ಮತ್ತಷ್ಟು ಲಾಭ ಆಗಲಿದೆ.
ಬಿ.ಆರ್. ನಾಗೇಂದ್ರ ಪ್ರಸಾದ್, ಅಧ್ಯಕ್ಷ, ಜಿಲ್ಲಾ ಹೊಟೇಲ್, ರೆಸಾರ್ಟ್ ಹಾಗೂ ರೆಸ್ಟೋರೆಂಟ್ ಅಸೋಸಿಯೇಷನ್