ಸ್ಟ್ರಾಂಗ್​ ರೂಮ್​ನ ಬಾಗಿಲಿಗೆ ಕೀಲಿ ಹಾಕಿ, ಸೀಲ್​ ಮಾಡಿ, ಕಾರ್ಡ್​ಬೋರ್ಡ್​ ಅಳವಡಿಸುತ್ತಿರುವುದುನ್ನು ವೀಸುತ್ತಿರುವ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಕೆ.ಅರುಣಕುಮಾರ್​ ಹಾಗೂ ಚುನಾವಣಾ ಸಿಬ್ಬಂದಿ. 
ಜಿಲ್ಲೆ

ಉಡುಪಿ-ಚಿಕ್ಕಮಗಳೂರು ಶೇ.77.15 ಮತದಾನ

ಶೇ.1.08 ಪೋಲಿಂಗ್​ ಏರಿಕೆ -- ಹಕ್ಕು ಚಲಾಯಿಸದ 3.62 ಲಕ್ಷ ಮತದಾರರು

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯದಲ್ಲಿ ನಡೆದ ಮೊದಲನೇ ಹಂತದ ಲೋಕಸಭೆಯ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಏ.26ರಂದು ನಡೆದ ಚುನಾಣೆಯಲ್ಲಿ ಅಂತಿಮವಾಗಿ ಶೇ.77.15 ಮತದಾನ ನಡೆದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 15,85,162 ಮತದಾರರಿದ್ದು, 12,22,888 ಜನರು ಹಕ್ಕು ಚಲಾಯಿಸಿದ್ದಾರೆ. ಒಟ್ಟು 7,68,215 ಪುರುಷ ಮತದಾರರಲ್ಲಿ 5,94,465 ಮಂದಿ ಹಕ್ಕು ಚಲಾಯಿಸಿದ್ದಾರೆ. ಒಟ್ಟು 8,16,910 ಮಹಿಳಾ ಮತದಾರರಲ್ಲಿ 6,28,316 ನಾರಿಯರು ಹಕ್ಕು ಚಲಾಯಿಸಿದ್ದಾಗಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಶೇ.1.08 ಮತದಾನ ಏರಿಕೆ

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಶೇ.76.07 ಮತದಾನವಾಗಿದ್ದು, ಈ ಬಾರಿ ಮತದಾನ ಅಲ್ಪ ಪ್ರಮಾಣದಲ್ಲಿ ಶೇ.1.08ರಷ್ಟು ಏರಿಕೆ ಕಂಡಿದೆ. ಪ್ರಸ್ತುತ ಚುನಾವಣೆಯ ಕುರಿತಾಗಿ ಜಿಲ್ಲಾ ಸ್ವೀಪ್​ ಸಮಿತಿ ಜಿಲ್ಲಾದ್ಯಂತ ಭಾರಿ ಜಾಗೃತಿ ಮೂಡಿಸಿತ್ತು. ಅಧಿಕಾರಿಗಳೇ ಯಕ್ಷಗಾನ ವೇಷ ತೊಟ್ಟು ಜಾಗೃತಿ ಮೂಡಿಸಿದ್ದಲ್ಲದೆ, ಜನವಸತಿ ಇರದ ಆಳಸಮುದ್ರಕ್ಕೂ ತೆರಳಿ ಮತದಾನ ಮಾಡುವಂತೆ ಪ್ರಚಾರ ನಡೆಸಿದ್ದು ಜಿಲ್ಲೆಯ ಗಮನ ಸೆಳೆದಿತ್ತು.

3.62 ಲಕ್ಷ ಮತದಾರರು ಗೈರು

ಎಂಟು ಕ್ಷೇತ್ರಗಳ ಮತದಾನದ ಬಳಿಕ ಹಕ್ಕು ಚಲಾಯಿಸದ ಮತದಾರರ ಸಂಖ್ಯೆಯೂ ಬಹಿರಂಗಗೊಂಡಿದೆ. 1,73,650 ಪುರುಷರು ಹಾಗೂ 1,88,594 ಮಹಿಳೆಯರು ಹಾಗೂ ಒಟ್ಟು 37 ತೃತೀಯ ಲಿಂಗಿಗಳಲ್ಲಿ 30 ಮಂದಿ ಸೇರಿ ಒಟ್ಟು 3,62,274 ಜನರು ಮತದಾನದಿಂದ ದೂರ ಇರುವುದು ಕಂಡುಬಂದಿದೆ. ಜಿಲ್ಲೆಯಲ್ಲಿ ಈ ಬಾರಿ 29,909 ಯುವ ಮತದಾರರು ಇದ್ದು, ಅವರೂ ಸಹ ಮತದಾನದಲ್ಲಿ ಪಾಲ್ಗೊಂಡಿದ್ದರಿಂದ ಹಕ್ಕು ಚಲಾವಣೆ ತುಸು ಏರಿಕೆ ಕಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕ್ಷೇತ್ರವಾರು ಮತದಾನದ ಮಾಹಿತಿ

ಕ್ಷೇತ್ರ - ಪುರುಷ - ಮಹಿಳೆ - ತೃ.ಲಿಂಗ - ಒಟ್ಟು - ಶೇಕಡ
ಕಾರ್ಕಳ 79,132 - 88,478 - 2 - 1,67,612 - 79.12
ಕಾಪು 82,602 - 89,655 - 0 - 1,72,257 - 77.84
ಕುಂದಾಪುರ 71,586 - 80,890 - 1 - 1,52,477 - 79.17
ಉಡುಪಿ 73,352 - 80,802 - 0 - 1,54,154 - 79.66
ಚಿಕ್ಕಮಗಳೂರು 67,146 - 68,531 - 1 - 1,35,678 - 80.31
ಮುಡಿಗೆರೆ 66,521 - 66,724 - 0 - 1,32,975 - 77.47
ಶೃಂಗೇರಿ 81,895 - 82,357 - 1 - 1,64,253 - 70.73
ತರಿಕೆರೆ 72,601 - 70,879 - 2 - 1,43,482 - 74.29
ಒಟ್ಟು 5,94,565 - 6,28,316 - 07 - 12,22,888 - 77.15

ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆಯ ಎಲ್ಲ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದ್ದು, ಉಡುಪಿ-&ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಸಹಕರಿಸಿದ ಎಲ್ಲ ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷಗಳಿಗೆ, ಸಾರ್ವಜನಿಕರಿಗೆ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಡಾ. ಕೆ.ವಿದ್ಯಾಕುಮಾರಿ.ಜಿಲ್ಲಾಧಿಕಾರಿ, ಉಡುಪಿ