ಜಿಲ್ಲೆ

ಆಮೆ ಬೇಟೆಯಾಡುತ್ತಿದ್ದವರ ಬಂಧನ

Uttara Kannada - Subash Hegde

ಶಿರಸಿ: ಆರು ಆಮೆಗಳನ್ನು ಬೇಟೆಯಾಡಿ ಮಾಂಸ ಸಿದ್ಧಪಡಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಆರು ಆಮೆಗಳ ಪೈಕಿ ಎರಡನ್ನು ಈ ದುರುಳರು ಈಗಾಗಲೇ ಕೊಂದು ಮಾಂಸ ತಯಾರಿಸುತ್ತಿದ್ದರು.
ಇತ್ತೀಚಿಗೆ ದಾಸನಕೊಪ್ಪದಲ್ಲಿ ಹಂದಿ ಬೇಟೆಯಾಡಿದ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಬನವಾಸಿ ವಲಯದಲ್ಲಿ ಆಮೆಗಳ ಬೇಟೆಯೂ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಆರೋಪಿಗಳ ಖಚಿತ ಸುಳಿವಿನೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಸೊರಬ ತಾಲೂಕಿನ ಸೊರಣಗಿಯ ದ್ಯಾಮಣ್ಣ ರಮೇಶ (26) ಹಾಗೂ ಹೆಬ್ಬತ್ತಿಯ ಶ್ರೀಕಾಂತ ನಾಯ್ಕ (42) ಬಂಧಿತರಾಗಿದ್ದಾರೆ. ಇವರು ಹಿಡಿದಿದ್ದ ಆಮೆಗಳಲ್ಲಿ ನಾಲ್ಕು ಜೀವಂತವಾಗಿದ್ದರೆ ಇನ್ನೆರಡು ಆಮೆಗಳನ್ನು ಬೇಯಿಸಿ ಪಾತ್ರೆಯಲ್ಲಿ ಮುಚ್ಚಿಟ್ಟಿದ್ದರು. ದಾಸನಕೊಪ್ಪದಿಂದ ಮಳಗಿಗೆ ಹೋಗುವ ಮಾರ್ಗದಲ್ಲಿ ಹರಿಯುವ ಬದನಗೋಡ ಹಳ್ಳದ ಸೇತುವೆ ಸಮೀಪ ಬಲೆ ಹಾಕಿ ಈ ಆಮೆಗಳನ್ನು ಹಿಡಿಯಲಾಗಿತ್ತು. ಡಿಎಫ್ ಒ ಡಾ. ಅಜ್ಜಯ್ಯ ಜೆ. ಆರ್. ಅವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯಾಧಿಕಾರಿ ಹರೀಶ ಸಿ.ಎನ್, ವಲಯಾರಣ್ಯಾಧಿಕಾರಿ ವರದ ರಂಗನಾಥ ಜಿ. ಹೆಚ್, ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.