ಮಡಿಕೇರಿ: ಕೊಯಿನಾಡು ಸಂಪಾಜೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ಪಯಸ್ವಿನಿ ಉಕ್ಕಿ ಹರಿದು ೫ ಮನೆಗಳು ಜಲಾವೃತವಾದ ಘಟನೆ ಮಂಗಳವಾರ ನಡೆದಿದೆ.
ಮಂಗಳವಾರ ಬೆಳಗ್ಗೆ ೮೦.೩೦ಕ್ಕೆ ಕೊನೆಗೊಂಡಂತೆ ಸಂಪಾಜೆ ವ್ಯಾಪ್ತಿಯಲ್ಲಿ ೧೨೦.೫೦ ಮಿ.ಮೀ ಮಳೆಯಾಗಿದೆ. ಪರಿಣಾಮ ಪಯಸ್ವಿನಿ ನದಿ ಉಕ್ಕಿ ಹರಿದಿದೆ. ಇಲ್ಲಿನ ೫ ಕುಟುಂಬಗಳ ೨೧ ಸದಸ್ಯರನ್ನು ದೇವಸ್ಥಾನ ಕಲಾಮಂದಿರದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಪಯಶ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟೆನಿಂದ ಇಲ್ಲಿನ ನಿವಾಸಿಗಳಿಗೆ ಗೋಳು ತಪ್ಪದಾಗಿದೆ. ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ತೇಲಿ ಬಂದಿರುವ ಸಾವಿರಾರು ಮರದ ದಿಮ್ಮಿಗಳು ಕಿಂಡಿ ಅಣೆಕಟ್ಟೆಯಲ್ಲಿ ಸಿಲುಕಿ ನೀರು ಬ್ಲಾಕ್‌ಆಗಿದೆ. ಇದರಿಂದ ಕೊಯಿನಾಡಿನ ಐದು ಮನೆಗಳಿಗೆ ರಾತ್ರಿ ಕೃತಕ ಪ್ರವಾಹ ನೀರು ನುಗ್ಗಿದೆ. ಪರಿಣಾಮ ಪ್ರವಾಹದ ನೀರಿನಲ್ಲಿ ಮನೆಯಲ್ಲಿದ್ದ ಕೆಲವು ವಸ್ತುಗಳು ಕೊಚ್ಚಿ ಹೋಗಿದೆ. ಸದ್ಯ ಮರಗಳನ್ನು ಎನ್ ಡಿಆರ್‌ಎಫ್ ತಂಡದವರು ತೆರವುಗೊಳಿಸಿದ್ದಾರೆ. ಒಂದೇ ತಿಂಗಳಲ್ಲಿ ೨ ಬಾರಿ ಪ್ರವಾಹ ಏರ್ಪಟ್ಟ ಹಿನ್ನೆಲೆ ಕಿಂಡಿ ಅಣೆಕಟ್ಟೆ ವಿರುದ್ಧ ಹರಿಹಾಯ್ದಿರುವ ಜನರು ಸೇತುವೆ ನಿರ್ಮಿಸಿ ಎಂದರೆ ಕಿಂಡಿ ಅಣೆಕಟ್ಟೆ ನಿರ್ಮಿಸಿ ಸಮಸ್ಯೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿಗೆ ಬಿದ್ದ ಮರ: ಭಾರೀ ಮಳೆಗೆ ಮಡಿಕೇರಿ ತಾಲೂಕಿನ ಕೊಯಿನಾಡು ಬಳಿ ರಾಷ್ಟ್ರೀಯ ಹೆದ್ದಾರಿ ೨೭೫ ರಲ್ಲಿ ಭಾರೀ ಗಾತ್ರದ ಮರವೊಂದು ಬಿದ್ದಿತ್ತು. ಮರ ಬಿದ್ದಿರುವ ಹಿನ್ನೆಲೆ ಕೆಲ ಕಾಲ ಸಂಚಾರ ಬಂದ್ ಆಗಿತ್ತು. ನಂತರ ಸ್ಥಳಕ್ಕೆ ಆಗಮಿಸಿದ ದ ಲೋಕೋಪಯೋಗಿ ಇಲಾಖೆ ಜೆಸಿಬಿ ಬಳಸಿ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ದಾರೆ.