ಗುಂಡ್ಲುಪೇಟೆ ಬಸ್ ನಿಲ್ದಾಣದ ಒಳಗೆ ಮಳೆನೀರು ನುಗ್ಗುತ್ತಿರುವುದರಿಂದ ಪ್ರಯಾಣಿಕರು ಹಾಗೂ ಪಾದಚಾರಿಗಳು ಪರದಾಡುತ್ತಿರುವುದು. 
ಜಿಲ್ಲೆ

ಗುಂಡ್ಲುಪೇಟೆಯಲ್ಲಿ ತಂಪೆರೆದ ಮಳೆ

ಮಾದೇಶ್ ತಿ.ನರಸೀಪುರ

ಗುಂಡ್ಲುಪೇಟೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ಸುರಿದ ಮಳೆ ತಂಪೆರೆದಿದೆ.

ಮಧ್ಯಾಹ್ನ ಸುಮಾರು ಮುಕ್ಕಾಲು ಗಂಟೆಗಳ ಕಾಲ ಸುರಿದ ಮಳೆ ಬಿರುಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ತಂಪೆರೆದಿದೆ. ಆದರೆ ಹೆದ್ದಾರಿಯಲ್ಲಿ ಹರಿದ ನೀರು ಬಸ್ ನಿಲ್ದಾಣದೊಳಗೆ ನುಗ್ಗಿದ ಪರಿಣಾಮ ಪ್ರಯಾಣಿಕರು ಪರದಾಡುವಂತೆ ಮಾಡಿತು.

ನಿಲ್ದಾಣದ ಒಳಭಾಗದಲ್ಲಿ ಮಳೆ ನೀರು ಹರಿದುಹೋಗಲು ಕಾಲುವೆ ನಿರ್ಮಾಣ ಹಾಗೂ ಚರಂಡಿ ನೀರು ಬರದಂತೆ ಮಾಡಿದ್ದರೂ ಪ್ರತಿ ಬಾರಿ ಮಳೆ ಬಿದ್ದಾಗಲೂ ಮಳೆನೀರು ಸಾರಿಗೆ ಬಸ್ ನಿಲ್ದಾಣದೊಳಗೆ ಹರಿದುಬರುತ್ತಿದೆ. ಇದರಿಂದ ಶಾಲೆ ಕಾಲೇಜು ಮುಗಿಸಿ ತಮ್ಮ ಊರುಗಳಿಗೆ ತೆರಳುವ ವಿದ್ಯಾರ್ಥಿಗಳು, ಗ್ರಾಮಾಂತರ ಪ್ರದೇಶಗಳ ಬಸ್‌ಗಳಿಗೆ ಹೋಗುವ ಪ್ರಯಾಣಿಕರು, ಮೈಸೂರು ಮುಂತಾದ ಕಡೆಗಳಿಂದ ಬಂದು ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರು ಮಳೆನೀರನ್ನು ಹಾದುಕೊಂಡು ಹೋಗಬೇಕಾಗಿದೆ. ಅಲ್ಲದೆ ನಿಲ್ದಾಣದ ತಗ್ಗು ಪ್ರದೇಶದಲ್ಲಿ ಮಡುಗಟ್ಟಿ ನಿಲ್ಲುವ ನೀರಿನಿಂದ ನಿಲ್ದಾಣವು ಕೆಸರುಗದ್ದೆಯಂತಾಗುತ್ತಿದೆ.

ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಮಳೆನೀರು ಬಸ್ ನಿಲ್ದಾಣದ ಒಳಗೆ ಬರದಂತೆ ತಡೆಗಟ್ಟುವ ಜತೆಗೆ ತಗ್ಗು ಪ್ರದೇಶದಲ್ಲಿ ನಿಲ್ಲದಂತೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.