ಅರಕಗೂಡು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಟಾಪರ್ ಆಗಿ ಹೊರಹೊಮ್ಮಿರುವ ಪಟ್ಟಣದ ಬಿಜಿಎಸ್ ಕಾಲೇಜಿನ ವಿದ್ಯಾರ್ಥಿಗಳಾದ ಎಚ್.ಆರ್. ಮನೀಷಾ ಹಾಗೂ ಎಂ.ಸತೀಶ್ ಅವರಿಗೆ ಪ್ರಾಂಶುಪಾಲ ಮಹೇಶ್ ಹೊಡೆನೂರು ಹಾಗೂ ಅಧ್ಯಾಪಕರು ಬುಧವಾರ ಸಿಹಿ ತಿನ್ನಿಸಿ ಸಂಭ್ರಮ ಹಂಚಿಕೊಂಡರು.
ಪಾಲಕರೊಂದಿಗೆ ಕಾಲೇಜಿಗೆ ಬಂದು ಸಿಹಿ ಹಂಚಿದ ವಿದ್ಯಾರ್ಥಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಉಪನ್ಯಾಸಕರು, ಸಹ ವಿದ್ಯಾರ್ಥಿಗಳು ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. ಕಾಲೇಜಿನ ವಾತಾವರಣ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಪಾಲಕರ ಪ್ರೋತ್ಸಾಹದಿಂದ ಹಾಗೂ ಸತತ ಅಭ್ಯಾಸದ ಪರಿಣಾಮ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಇಬ್ಬರು ವಿದ್ಯಾರ್ಥಿಗಳು ಈ ವೇಳೆ ತಮ್ಮ ಅನಿಸಿಕೆ ಹಂಚಿಕೊಂಡರು.
ಪ್ರಾಂಶುಪಾಲ ಮಹೇಶ್ ಹೊಡೆನೂರು ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಯಿಂದಾಗಿ ಕಾಲೇಜಿಗೆ ಈ ಬಾರಿ ಶೇ. 96.94ರಷ್ಟು ಫಲಿತಾಂಶ ಬರಲು ಸಾಧ್ಯವಾಗಿದೆ. ಎಲ್ಲ ಉಪನ್ಯಾಸಕರ ಶ್ರಮದಿಂದ ವಿಜ್ಞಾನ ವಿಭಾಗದಲ್ಲಿ 97.61 ಹಾಗೂ ವಾಣಿಜ್ಯ ವಿಭಾಗದಲ್ಲಿ 95.74 ಫಲಿತಾಂಶ ಬಂದಿದೆ. ಮುಂದಿನ ಸಲ ರಾಜ್ಯಮಟ್ಟಕ್ಕೆ ಪೈಪೋಟಿ ನೀಡುವ ಆಶಯ ಹೊಂದಲಾಗಿದೆ ಎಂದು ತಿಳಿಸಿದರು.