ಜಿಲ್ಲೆ

ಫೋರ್ಬ್ಸ್ ಪಟ್ಟಿಯಲ್ಲಿ ಕನ್ನಡಿಗ, ದೇಶದ ಅಗ್ರ 100 ಮ್ಯಾನೇಜರ್‌ಗಳಲ್ಲಿ ಗಣೇಶ್ ಓರ್ವ

Udupi

ಕುಂದಾಪುರ: ಭಾರತದ 100 ಮೇರು ವ್ಯವಸ್ಥಾಪಕರ ಪಟ್ಟಿಯಲ್ಲಿ ಲೋಧಾ ಗ್ರೂಪ್‌ನ ಆಡಳಿತ ಮತ್ತು ಮಾನವ ಸಂಪನ್ಮೂಲ ಸೇವೆಗಳ ವಿಭಾಗದ ಉಪಾಧ್ಯಕ್ಷರಾಗಿರುವ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಡಿ ಗ್ರಾಮದ ಗಣೇಶ್ ಪೂಜಾರಿ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ ಇಂಡಿಯಾದ ಸಹಭಾಗಿತ್ವದಲ್ಲಿ ಗ್ರೇಟ್ ಪೀಪಲ್ ಮ್ಯಾನೇಜರ್ಸ್ ಸ್ಟಡಿ ಬ್ಯಾನರ್ ಅಡಿಯಲ್ಲಿ ಗ್ರೇಟ್ ಮ್ಯಾನೇಜರ್ ಇನ್‌ಸ್ಟಿಟ್ಯೂಟ್ ಪ್ರತಿಷ್ಠಿತರ ಪಟ್ಟಿಯನ್ನು ಅಕ್ಟೋಬರ್‌ನಲ್ಲಿ ಪ್ರಕಟಿಸಿದೆ.

ಗಣೇಶ್ ಕೋಡಿ ಮೋಯಿದ್ದೀನ್ ಹಾಜಿ ಕೆ.ಮೊಯಿದ್ದೀನ್ ಶಾಲೆ ಹಳೇ ವಿದ್ಯಾರ್ಥಿ. ಕೋಡಿಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿ ಮುಂಬೈಗೆ ತೆರಳಿ ಕೆಲಸದ ಜತೆ ವಿದ್ಯಾಭ್ಯಾಸ ಮುಂದುವರಿಸಿ, ಹಂತ ಹಂತವಾಗಿ ಯಶಸ್ಸು ಗಳಿಸಿದರು.

ಉನ್ನತ ಸ್ಥಾನ ಪಡೆದರೂ ಕೋಡಿ ಮತ್ತು ಕಲಿತ ಶಾಲೆ ಎರಡರೊಂದಿಗೂ ನಿರಂತರ ಸಂಪರ್ಕದಲ್ಲಿದ್ದು, ಅಲ್ಮಾ ಮೇಟರ್ ಅಭಿವೃದ್ಧಿ ಮತ್ತು ಬೆಳವಣಿಗೆಯ ಬಗ್ಗೆ ಕಾಳಜಿ ವಹಿಸುತ್ತಿದ್ದರು ಎಂದು ಶಾಲೆ ಅಧ್ಯಕ್ಷ ಸಯ್ಯದ್ ಬ್ಯಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಉತ್ತಮ ಸಹೋದ್ಯೋಗಿಗಳ ತಂಡ ಸಿಗದಿದ್ದರೆ ಉತ್ತಮ ವ್ಯವಸ್ಥಾಪಕನಾಗಲು ಸಾಧ್ಯವಿಲ್ಲ. ಹೂಡಿಕೆ ಮಾಡಿ ಎಲ್ಲ ಹಂತಗಳಲ್ಲಿ ತಂಡದೊಂದಿಗೆ ಹೊಂದಾಣಿಕೆಯಿದ್ದರೆ ಯಶಸ್ಸು ಸಾಧ್ಯ. ಸಾಮರ್ಥ್ಯ ಮತ್ತು ಕೆಲಸ ಮಾಡುವ ಕ್ಷೇತ್ರಗಳಲ್ಲಿ ಸದಾ ಕಲಿಯುತ್ತಿರಬೇಕು. ಕಲಿಕೆ ಮತ್ತು ಒಗ್ಗಟ್ಟು ಉತ್ಪಾದಕತೆ ಮತ್ತು ವ್ಯವಹಾರ ಹೆಚ್ಚಿಸಲು ಸಹಾಯ ಮಾಡುತ್ತದೆ.

- ಗಣೇಶ್ ಪೂಜಾರಿ, ಲೋಧಾ ಗ್ರೂಪ್ ಉಪಾಧ್ಯಕ್ಷ