ಪಾಂಡವಪುರ: ತಾಲೂಕಿನ ಜಯಂತಿ ನಗರದ ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ಜೂನ್ 12ರಂದು ಬೆಳಗ್ಗೆ 9.30ಕ್ಕೆ ಅಕ್ಷರ ಅಭ್ಯಾಸ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಪ್ರೊ.ಎಂ.ಪಂಚಲಿಂಗೇಗೌಡ ಹೇಳಿದರು.
ಅಕ್ಷರ ಅಭ್ಯಾಸ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯವನ್ನು ಆದಿಚುಂಚನಗಿರಿ ಕ್ಷೇತ್ರದ ಫೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಪು.ತಿ.ನ.ಟ್ರಸ್ಟ್ ಅಧ್ಯಕ್ಷ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಸಂತೋಷ್, ಬಿಇಒ ಎಸ್.ರವಿಕುಮಾರ್, ಎಸ್‌ಎಸ್‌ಇಟಿ ಸಂಸ್ಥೆಯ ಅಧ್ಯಕ್ಷ ಪಿ.ಹೊನ್ನರಾಜು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಭಾರತ ತಂಡ ಖೋ-ಖೋ ವಿಶ್ವಕಪ್ ಆಟಗಾರ್ತಿ, ಕಾಲೇಜಿನ ವಿದ್ಯಾರ್ಥಿನಿ ಬಿ.ಚೈತ್ರಾ, ವಿದ್ಯಾರ್ಥಿ ಎಂ.ಕೆ.ಗೌತಮ್, ತರಬೇತುದಾರ ಮಂಜುನಾಥ್, ಖೋಖೋ ವಿಶ್ವಕಪ್ ತೀರ್ಪುಗಾರರಾದ ಕೆ.ಎಸ್.ಅಮೂಲ್ಯಾ, ರಾಷ್ಟ್ರಮಟ್ಟ ಹಾಗೂ ಅಂತಾರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ನಮ್ಮ ಕಾಲೇಜಿನ ಬಿಪಿಇಡಿ ಮತ್ತು ಎಂಪಿಇಡಿ ಕ್ರೀಡಾಪಟುಗಳಿಗೆ ಹಾಗೂ 2024-25ನೇ ಸಾಲಿನ 10ನೇ ತರಗತಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಫಲಿತಾಂಶ ತಂದುಕೊಟ್ಟ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಪಿ.ಹೊನ್ನರಾಜು, ಕಾರ್ಯದರ್ಶಿ ಪಿ.ಅಕ್ಷಯ್ ಇದ್ದರು.