ಹಳೇಬೀಡು: ಇಲ್ಲಿನ ಐತಿಹಾಸಿಕ ಹೊಯ್ಸಳೇಶ್ವರ ದೇವಾಲಯದ ಆವರಣದಲ್ಲಿ ಜೂನ್ 21ರಂದು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕೇಂದ್ರ ಪುರಾತತ್ವ ವಿಭಾಗದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಖಾತೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದು, ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಕೆ.ಸುರೇಶ್, ಕೇಂದ್ರ ಪುರಾತತ್ವ ವಿಭಾಗದ ಉನ್ನತ ಅಧಿಕಾರಿಗಳು, ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆರೋಗ್ಯಕ್ಕಾಗಿ ಯೋಗ ಧ್ಯೇಯ ವಾಕ್ಯದೊಂದಿಗೆ ಕಾರ್ಯಕಮವು ಬೆಳಗ್ಗೆ 6 ಗಂಟೆಯಿಂದ ಆರಂಭವಾಗಲಿದ್ದು, 300 ಯೋಗಪಟುಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.
ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಲು ಕೇಂದ್ರ ಪುರಾತತ್ವ ವಿಭಾಗದಿಂದ ದೇಗುಲ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಯೋಗಾಭ್ಯಾಸಕ್ಕೆ ಬೇಕಾದ ಮ್ಯಾಟ್‌ಗಳು, ಧ್ವನಿವರ್ಧಕ, ಆಸನ ವ್ಯವಸ್ಥೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಯೋಗದಲ್ಲಿ ಭಾಗವಹಿಸುವವರು ಟಿ-ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟ್ ಧರಿಸಿ, ಸ್ವಂತ ಯೋಗ ಮ್ಯಾಟ್ ತರಬೇಕು ಎಂದು ಸೂಚಿಸಲಾಗಿದೆ.
ಕೇಂದ್ರ ಸಚಿವ ವಿ. ಸೋಮಣ್ಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಅದಕ್ಕೂ ಮೊದಲು ಹೊಯ್ಸಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ದೇಗುಲ ಆವರಣದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಯೋಗಾಭ್ಯಾಸ ನಡೆಸಲಿದ್ದಾರೆ. ಕಾರ್ಯಕ್ರಮ ನಡೆಯುವ ಉದ್ಯಾನದ ಆವರಣದಲ್ಲಿ ಯೋಗ ಲಾಂಛನವನ್ನು ಹುಲ್ಲಿನಿಂದಲೇ ರಚಿಸಲಾಗಿದ್ದು, ನೋಡುಗರ ಮನಸೆಳೆಯುತ್ತಿದೆ.