ವಿಜಯಪುರದ ಜೆಎಸ್​ಎಸ್​ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಡಾ. ಮಯೂರ ಕಾಕು ಮಾತನಾಡಿದರು. ಸೌಮ್ಯಶ್ರೀ ಕಾಕು, ಡಾ.ಶರಣ ಮಳಖೇಡ್ಕರ್​ ಇದ್ದಾರೆ. 
ಜಿಲ್ಲೆ

ನಾಳೆ "ಆರೋಗ್ಯದೆಡೆಗೆ ಜಾಗೃತಿ ನಡಿಗೆ'

ಗಿರೀಶ ಸಗರ

ವಿಜಯಪುರ: ವಿಶ್ವ ಬೆನ್ನುಹುರಿ ದಿನದ ಹಿನ್ನೆಲೆಯಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್​ ಸ್ಪೆಷಾಲಿಟಿ (ಜೆಎಸ್​ಎಸ್​) ಆಸ್ಪತ್ರೆ ಸಹಯೋಗದಲ್ಲಿ ಅ. 16 ರಂದು ನಗರದಲ್ಲಿ "ಆರೋಗ್ಯದೆಡೆಗೆ ಜಾಗೃತಿ ನಡಿಗೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆಎಸ್​ಎಸ್​ ಆಸ್ಪತ್ರೆ ಸಿಇಒ ಡಾ. ಶರಣ ಮುಳಖೇಡ್ಕರ್​ ತಿಳಿಸಿದರು.

ಸಾರ್ವಜನಿಕರಿಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಈ ವಿಶೇಷ ವಾಕ್​ಥಾನ್​ ಹಮ್ಮಿಕೊಳ್ಳಲಾಗಿದೆ. 5 ಸಾವಿರ ಜನರು ನಗರ ಹೊರವಲಯದ ಜೆಎಸ್​ಎಸ್​ ಆಸ್ಪತ್ರೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಾಕ್​ಥಾನ್​ ನಡೆಸಿ ಆರೋಗ್ಯದ ಕುರಿತು ಅರಿವು ಮೂಡಿಸಲಿದ್ದಾರೆ ಎಂದು ಸೋಮವಾರ ಜೆಎಸ್​ಎಸ್​ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಅಂದು ಬೆಳಗ್ಗೆ 8 ಕ್ಕೆ ಜೆಎಸ್​ಎಸ್​ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಜಾಥಾಗೆ ಚಾಲನೆ ನೀಡಲಿದ್ದು, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯತೆ ಮತ್ತು ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಸಿಇಒ ರಿಷಿ ಆನಂದ, ಎಸ್ಪಿ ಋಷಿಕೇಶ ಸೋನಾವಣೆ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮತ್ತು ಸಿದ್ಧೇಶ್ವರ ಸಂಸ್ಥೆ ಅಧ್ಯ ಬಸಯ್ಯ ಹಿರೇಮಠ ಹಾಗೂ ಐಎಂಎ ಅಧ್ಯಕ್ಷ ರವಿ ಬಿರಾದಾರ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಜೆಎಸ್​ಎಸ್​ ಆಸ್ಪತ್ರೆಯಿಂದ ಜಾಥಾ ಹೊರಟು ಗೋಲಗುಂಬಜ್​ ಮಾರ್ಗವಾಗಿ ಡಾ. ಬಿ.ಆರ್​. ಅಂಬೇಡ್ಕರ್​ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಸೇರಿಲಿದೆ. ಜಾಥಾಗೂ ಮುನ್ನ ಅಂದು ಬೆಳಗ್ಗೆ 5 ಕ್ಕೆ ನಗರದ ಡಾ. ಬಿ.ಆರ್​. ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ಆಸ್ಪತ್ರೆಯ ಯೋಗಿಕ್​ ನರಶಾಸ ಚಿಕಿತ್ಸಕ ಡಾ. ಮಯೂರ ಕಾಕು ನೇತೃತ್ವದಲ್ಲಿ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಸುಮಾರು ಒಂದು ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಯೋಗಿಕ್​ ನ್ಯೂರೋ ಸರ್ಜನ್​ ಡಾ. ಮಯೂರ ಕಾಕು ಮಾತನಾಡಿ, ಜೆಎಸ್​ಎಸ್​ ಆಸ್ಪತ್ರೆಯಲ್ಲಿ 2 ಕೋಟಿ ವೆಚ್ಚದಲ್ಲಿ ನ್ಯೂರೋ ನೇವಿಗೇಷನ್​ ಮಶಿನ್​ ಅಳವಡಿಕೆ ಮಾಡಲಾಗಿದೆ. ನ್ಯೂರೋ ಮಾನೆಟರಿಂಗ್​ ಸೇರಿದಂತೆ ವಿನೂತನ ತಂತ್ರಜ್ಞಾನ ಬಳಸಿಕೊಂಡು ಚಿಕಿತ್ಸೆ ನೀಡಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಅದರಿಂದ ವಿಜಯಪುರದ ಜನತೆ ಚಿಕಿತ್ಸೆಗಾಗಿ ದೂರದ ಊರಿಗೆ ಹೋಗುವುದು ತಪ್ಪಲಿದ್ದು, ಸ್ಥಳಿಯವಾಗಿಯೇ ಗುಣಮಟ್ಟದ ಚಿಕಿತ್ಸೆ ಲಭಿಸಲಿದೆ ಎಂದು ಮಾಹಿತಿ ನೀಡಿದರು.

ಡಾ. ಸೌಮ್ಯಶ್ರೀ ಕಾಕು ಮಾತನಾಡಿ, ಸದ್ಯದ ದಿನಗಳಲ್ಲಿ ಮಕ್ಕಳ ಮಾನಸಿಕ ಸ್ಥಿತಿಯಲ್ಲಿ ಬಹಳಷ್ಟು ಏರಿಳಿತಗಳು ಕಾಣಿಸುತ್ತಿವೆ. ಅದರಲ್ಲೂ ಮಕ್ಕಳು ಅತಿಯಾದ ಮೊಬೈಲ್​ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಪಾಲಕರು ಸಹಿತ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸದೆ ಮೊಬೈಲ್​ ಕೈಗಿಟ್ಟು, ಅವರ ಕೆಲಸ ಕಾರ್ಯಗಳಲ್ಲಿ ಮಗ್ನರಾಗುವುದರಿಂದ ಮಕ್ಕಳ ಆರೋಗ್ಯದ ಜತೆಗೆ ಮಾನಸಿಕ ಸ್ಥಿತಿಗತಿಯು ಹಾಳಾಗುತ್ತಿದೆ. 18 ವರ್ಷದ ಮಕ್ಕಳವರೆಗೆ ಜೆಎಸ್​ಎಸ್​ ಆಸ್ಪತ್ರೆಯಲ್ಲಿಯೇ ಇನ್ನು ಮುಂದೆ ಮಾನಸಿಕ ರೋಗದ ಚಿಕಿತ್ಸೆ ನೀಡಲಿದ್ದೇವೆ ಎಂದರು.
ಆಸ್ಪತ್ರೆಯ ಮಾಧ್ಯಮ ಸಲಹೆಗಾರ ಮಂಜುನಾಥ ಜುನಗೊಂಡ ಇದ್ದರು.