ಹುಣಸೂರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿದರು. ನರಸಿಂಹಯ್ಯ, ಕೆ.ಮಾನಸಾ ಇತರರಿದ್ದರು. 
ಜಿಲ್ಲೆ

ನಾಳೆ ಅಂಬೇಡ್ಕರ್ ಪರಿನಿರ್ವಾಣ ದಿನ

ನಾಗೇಶ ಎಸ್

ಹುಣಸೂರು: ತಾಲೂಕು ಆಡಳಿತ ಮತ್ತು ದಲಿತ ಸಂಘಟನೆಗೆಳ ಸಹಯೋದಲ್ಲಿ ಡಿ.6ರಂದು ಅಂಬೇಡ್ಕರ್ ಪರಿನಿರ್ವಾಣ ದಿನ ಕಾರ್ಯಕ್ರಮವನ್ನು ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶಾಸಕ ಜಿ.ಡಿ.ಹರೀಶ್‌ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಿತು. ಶಾಸಕರು ಮಾತನಾಡಿ, ಸಂವಿಧಾನಶಿಲ್ಪಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಕೇವಲ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಸಾಂಕೇತಿಕ ಕಾರ್ಯಕ್ರಮವಾಗಬಾರದು. ಬದಲಾಗಿ ಭವಿಷ್ಯದ ಪ್ರಜೆಗಳಿಗೆ ವಿಶ್ವಜ್ಞಾನಿ ಅಂಬೇಡ್ಕರ್ ದೇಶಕ್ಕೆ ನೀಡಿರುವ ಕೊಡುಗೆಗಳನ್ನು ತಿಳಿಸುವ ಕಾರ್ಯ ಆದಲ್ಲಿ ಕಾರ್ಯಕ್ರಮ ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ 1500ಕ್ಕೂ ವಿದ್ಯಾರ್ಥಿನಿಯರಿಗೆ ಅಂಬೇಡ್ಕರ್ ಕುರಿತು ಮಾಹಿತಿ ರವಾನಿಸೋಣ ಎಂದರು.

ಸಭೆಯಲ್ಲಿ ಎಲ್ಲ ದಲಿತ ಸಂಘಟನೆಗಳು ಸಹಮತ ವ್ಯಕ್ತಪಡಿಸಿದವು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್‌ಕುಮಾರ್ ಮಾತನಾಡಿ, ಅಂದು ಸಂಜೆ ನಗರದ ಅಂಬೇಡ್ಕರ್ ಭವನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಅಂಬೇಡ್ಕರ್ ಭಾವಚಿತ್ರವುಳ್ಳ ರಥದೊಂದಿಗೆ ಕ್ಯಾಂಡಲ್ ಮರವವಣಿಗೆ ನಡೆಸಲಾಗುವುದು. ಸಂವಿಧಾನ ವೃತ್ತವನ್ನು ದೀಪಗಳಿಂದ ಅಲಂಕರಿಸಲಾಗುವುದು. ಶಾಸಕ ಜಿ.ಡಿ.ಹರೀಶ್‌ಗೌಡ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಅಂಬೇಡ್ಕರ್ ಮತ್ತು ಬುದ್ಧನ ಸ್ತಬ್ದಚಿತ್ರಗಳು ಮೆರವಣಿಗೆಯಲ್ಲಿ ಸಾಗಿಬರಲಿವೆ ಎಂದು ತಿಳಿಸಿದರು.

ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್ ನರಸಿಂಹಯ್ಯ, ಪೌರಾಯುಕ್ತೆ ಕೆ.ಮಾನಸಾ, ಲೋಕೋಪಯೋಗಿ ಇಲಾಖೆ ಎಇಇ ಯತೀಶ್, ಶಿರಸ್ತೇದಾರ್ ಶ್ರೀಪಾದ್, ದಲಿತ ಮುಖಂಡರಾದ ನಿಂಗರಾಜ ಮಲ್ಲಾಡಿ, ದರ್ಶನ್, ಪುಟ್ಟರಾಜು, ದೇವರಾಜು, ರತ್ನಪುರಿ ಪುಟ್ದಸ್ವಾಮಿ, ಕಿರಂಗೂರು ಸ್ವಾಮಿ, ಚಿಕ್ಕಸ್ವಾಮಿ, ಸಂತೋಷ್ ಇದ್ದರು.