ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಅಂತರ್ಜಲ ಅತೀ ಬಳಕೆ ಪಟ್ಟಿಯಲ್ಲಿರುವ ರಾಜ್ಯದ 15 ಜಿಲ್ಲೆಗಳ ಪೈಕಿ ಗ್ರಾಮಾಂತರ ಜಿಲ್ಲೆಯೂ ಸೇರಿದ್ದು ಅಂತರ್ಜಲ ವೃದ್ಧಿಗೆ ಸರ್ಕಾರ ಕೈಗೆತ್ತಿಕೊಂಡಿರುವ ನೀರಿದ್ದರೆ ನಾಳೆ ಯೋಜನೆ ಅನುಷ್ಟಾನಕ್ಕೆ ಜಿಲ್ಲಾ ಸಣ್ಣ ನೀರಾವರಿ ಇಲಾಖೆ ಸಿದ್ದತೆ ಕೈಗೊಳ್ಳುತ್ತಿದೆ.
ಬೆಂಗಳೂರಿನಲ್ಲಿ ಇತ್ತೀಚಿಗೆ ಸಿಎಂ ನೀರಿದ್ದರೆ ನಾಳೆ ಯೋಜನೆಗೆ ಚಾಲನೆ ನೀಡಿದ್ದು, ಗ್ರಾಮಾಂತರ ಜಿಲ್ಲೆಯಲ್ಲಿ ಈ ಕಾರ್ಯಕ್ರಮದ ಮೂಲಕ ಜನಜಾಗೃತಿ ಮೂಡಿಸಲು ಸರ್ಕಾರದ ಮಾರ್ಗಸೂಚಿಯನ್ನು ಎದುರು ನೋಡಲಾಗುತ್ತಿದೆ. ಯಾವುದೇ ನದಿ ಮೂಲವಿಲ್ಲದ ಜಿಲ್ಲೆಗಳಲ್ಲಿ ಕೆರೆಗಳೇ ಪ್ರಮುಖ ನೀರಿನ ಸೆಲೆಯಾಗಿದ್ದು, ಈಗಾಗಲೇ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಭರದಿಂದ ಸಾಗಿದೆ ಇದರ ಜತೆಗೆಯಲ್ಲಿ ನೀರಿದ್ದರೆ ನಾಳೆ ಎಂಬ ವಿನೂತನ ಪರಿಕಲ್ಪನೆ ಮೂಲಕ ಅಂತರ್ಜಲ ಸುಧಾರಣೆಯತ್ತ ಇಲಾಖೆ ಹೆಜ್ಜೆ ಹಾಕಲಿದೆ.
ಏನಿದು ನೀರಿದ್ದರೆ ನಾಳೆ? ಇದೊಂದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅಂತರ್ಜಲ ಅತೀ ಬಳಕೆಯಾಗಿರುವ ಜಿಲ್ಲೆಗಳಲ್ಲಿ ಅಂತರ್ಜಲ ಸುಧಾರಣೆಗೆ ಜಾಗೃತಿ ಮೂಡಿಸುವುದರ ಜತೆಗೆ ಭವಿಷ್ಯದಲ್ಲಿ ಅಂತರ್ಜಲ ವೃದ್ಧಿಗೆ ವಿಶೇಷ ಒತ್ತು ನೀಡುವ ಸುಧಾರಿತ ಯೋಜನೆಗಳನ್ನು ಜಾರಿಗೊಳಿಸುವುದಾಗಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಅತೀ ಹೆಚ್ಚು ಕೊಳವೆಬಾವಿಗಳನ್ನೇ ಕೃಷಿ, ಕೈಗಾರಿಕೆ ಸೇರಿ ಕುಡಿಯುವ ನೀರಿನ ಮೂಲಗಳಾಗಿ ಬಳೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅತೀ ಹೆಚ್ಚು ಅಂತರ್ಜಲ ಬಳಕೆಯಾಗುತ್ತಿದ್ದು ಭವಿಷ್ಯದಲ್ಲಿ ನೀರಿಗೆ ಹಾಹಾಕಾರ ಎದುರಾಗುವ ಮುನ್ಸೂಚನೆ ಎದ್ದು ಕಾಣುತ್ತಿದೆ. ಕೊಳವೆಬಾವಿಗಳ ಮೂಲಕ ನೀರು ಪಡೆಯಲು ಅಂತರ್ಜಲ ಅವಶ್ಯಕತೆ ಇರುವುದರಿಂದ ಜಿಲ್ಲೆಯಲ್ಲಿನ ಕೆರೆಗಳಲ್ಲಿ ನೀರು ತುಂಬಿಸುವ ಕೆಲಸಕ್ಕೆ ಸರ್ಕಾರ ಈಗಾಗಲೇ ಮುಂದಾಗಿದ್ದು, ವೃಷಭಾವತಿ ನಾಲೆ ಯೋಜನೆ, ಕೆಸಿ ವ್ಯಾಲಿ ಹಾಗೂ ಎಚ್‌ಎನ್ ವ್ಯಾಲಿಗಳ ಮೂಲಕ ಕೆರೆಗಳನ್ನು ತುಂಬಿಸುವ ಕೆಲಸ ಪ್ರಗತಿಯಲ್ಲಿದೆ.
ನೆಲಮಂಗಲದಲ್ಲಿ 70 ಕೆರೆಗಳಿಗೆ ನೀರು: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಸುಮಾರು 230 ಕೆರೆಗಳಿಗೆ ನೀರು ತುಂಬಿಸುವ ವೃಷಭಾವತಿ ವ್ಯಾಲಿ ಯೋಜನೆ ಪ್ರಗತಿಯಲ್ಲಿದ್ದು ಈ ಪೈಕಿ ನೆಲಮಂಗಲ ತಾಲೂಕಿನ ಸುಮಾರು 70 ಕೆರೆಗಳಿಗೆ ಈ ಯೋಜನೆಯಡಿ ನೀರು ತುಂಬಿಸಲಾಗುವುದು, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಉಳಿದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ, ಹೊಸಕೋಟೆಯಲ್ಲಿ ಎಚ್‌ಎನ್ ವ್ಯಾಲಿ ಮೂಲಕ ಸುಮಾರು 7 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು, ಈ ಮೂಲಕ ಅಂತರ್ಜಲ ವೃದ್ಧಿಸಿ ನೀರಿದ್ದರೆ ನಾಳೆ ಎಂಬ ಯೋಜನೆ ಸಾಕಾರಕ್ಕೆ ಶ್ರಮಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎತ್ತರ ಪ್ರದೇಶದಿಂದ ನೀರು: ವೃಷಭಾವತಿ ಯೋಜನೆಯಡಿ ಎತ್ತರದ ಪ್ರದೇಶದಿಂದ ನೀರು ಹರಿಸುವ ಕೆಲಸ ಮಾಡಲಾಗುತ್ತದೆ, ಬೆಂಗಳೂರಿನ ಕೋರಮಂಗಲ ಹಾಗೂ ಚಲ್ಲಘಟ್ಟ ಭಾಗದಿಂದ ತಮಿಳುನಾಡಿಗೆ ಹರಿದುಹೋಗುತ್ತಿರುವ ನೀರನ್ನು ಎಸ್‌ಟಿಪಿಯಲ್ಲಿ ಸಂಸ್ಕೃರಿಸಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕೆರೆಗಳನ್ನು ತುಂಬಿಸಲಾಗುತ್ತಿದ್ದು ಇದೇ ನೀರನ್ನು ಜಿಲ್ಲೆಯ ಕೆರೆಗಳಿಗೆ ತುಂಬಿಸುವ ಕೆಲಸ ಮಾಡಲಾಗುತ್ತಿದೆ, ಹೆಬ್ಬಾಳ ಹಾಗೂ ನಾಗವಾರ ವ್ಯಾಲಿಗಳಿಂದ ಸಂಸ್ಕರಿತ ನೀರನ್ನು ಹರಿಸುವುದು ರಾಮನಗರ, ಕನಕಪುರ ಕಡೆಗಳಿಂದ ತಮಿಳುನಾಡು ಕಡೆಗೆ ಹರಿಯುವ ನೀರನ್ನು ನೆಲಮಂಗಲ, ಬೆಂಗಳೂರು, ಬೆಂಗಳೂರು ದಕ್ಷಿಣ ದೊಡ್ಡಬಳ್ಳಾಪುರ, ದೇವನಹಳ್ಳಿ ಗೌರಿಬಿದನೂರು ಭಾಗದ ಕೆರೆಗಳಿಗೆ ಹರಿಸುವ ಯೋಜನೆಯಾಗಿದೆ.
ವಿಧಾನಸೌಧದಲ್ಲಿ ಚಾಲನೆ:
ರಾಜ್ಯದ 15 ಜಿಲ್ಲೆಗಳ, 27 ತಾಲೂಕುಗಳಲ್ಲಿನ ಅಂತರ್ಜಲ ಅತಿಬಳಕೆಯ ಪಟ್ಟಿಯಲ್ಲಿರುವ 252 ಗ್ರಾಮ ಪಂಚಾಯಿತಿಗಳನ್ನು ಗುರುತಿಸಿದ್ದು, ನೀರಿದ್ದರೆ ನಾಳೆ ಯೋಜನೆಯನ್ನು ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್.ಭೋಸರಾಜು ವಿಧಾನಸೌಧದ ಆವರಣದಲ್ಲಿ ಚಾಲನೆ ನೀಡಿದ್ದಾರೆ.
ಇದೊಂದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅಂತರ್ಜಲ ಅತೀ ಬಳಕೆಯಾಗಿರುವ ಜಿಲ್ಲೆಗಳಲ್ಲಿ ಅಂತರ್ಜಲ ಸುಧಾರಣೆಗೆ ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ. ಅಂತರ್ಜಲ ವೃದ್ಧಿಗೆ ಮೊದಲ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳೂ ಈ ಯೋಜನೆಯಡಿ ಬರಲಿವೆ. ಸದ್ಯಕ್ಕೆ ಈ ಯೋಜನೆಗೆ ಸರ್ಕಾರ ಚಾಲನೆ ನೀಡಿದ್ದು ಗ್ರಾಮಾಂತರ ಜಿಲ್ಲೆಯಲ್ಲಿ ಯೋಜನೆ ಅನುಷ್ಟಾನದ ಆದೇಶವನ್ನು ಎದುರು ನೋಡುತ್ತಿದ್ದೇವೆ.
ಮಂಜುನಾಥ್, ಜಿಲ್ಲಾ ಸಣ್ಣ ನೀರಾವರಿ ಇಲಾಖೆ ಅಧಿಕಾರಿ
----------