ಜಿಲ್ಲೆ

ಬಿಬಿಎಂಪಿ ಬಜೆಟ್ ನಾಳೆ: ವಿಡಿಯೋ ಕಾನ್ಪರೆನ್ಸ್ ಮೂಲಕ ಮಂಡನೆ- ದೇಶದಲ್ಲೇ ಪ್ರಥಮ ಪ್ರಯೋಗ

kumarvrl

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ತಲಾ 50 ಕೋಟಿ ರೂ. ಅನುದಾನ, ಬೀದಿನಾಯಿಗಳ ನಿಯಂತ್ರಣಕ್ಕೆ ನಾಯಿಗೂಡು ಇತರ ಅಭಿವೃದ್ಥಿ ಯೋಜನೆಗಳ ಘೋಷಣೆ ಸಾಧ್ಯತೆ ಒಳಗೊಂಡಂತೆ 2020-21ನೇ ಸಾಲಿನ ಆಯವ್ಯಯವನ್ನು ಸೋಮವಾರ (ಏ.20) ಮಂಡಿಸಲು ಬಿಬಿಎಂಪಿ ಸಿದ್ಧವಾಗಿದೆ.

ಬಜೆಟ್ ಅನ್ನು ನಿಗದಿತ ಸಮಯದಲ್ಲಿ ಮಂಡಿಸಲು ಪಾಲಿಕೆಗೆ ಸಾಧ್ಯವಾಗಿರಲಿಲ್ಲ. ಈ ನಡುವೆ ಲಾಕ್​ಡೌನ್ ಜಾರಿಯಿಂದ ಅದು ಮತ್ತಷ್ಟು ವಿಳಂಬವಾಯಿತು. ಇದರಿಂದ ಅಭಿವೃದ್ಧಿ ಕಾರ್ಯಗಳು, ಕರೊನಾ ಸೋಂಕು ನಿಯಂತ್ರಣ ಕಾರ್ಯಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಸೀಮಿತ ಜನರು ಸೇರಿ ಬಜೆಟ್ ಮಂಡನೆಗೆ ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆಯಲಾಗಿದ್ದು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ವಿಡಿಯೋ ಕಾನ್ಪರೆನ್ಸ್ ಮೂಲಕ ಬಜೆಟ್ ಮಂಡಿಸಲಿದ್ದಾರೆ.

ಬಜೆಟ್ ಕೊಡುಗೆಗಳು ಏನಿರಬಹುದು?: ಅಕ್ರಮ- ಸಕ್ರಮ ಯೋಜನೆ ಜಾರಿ ಹಿನ್ನೆಲೆಯಲ್ಲೇ ‘ಬಿ’ ಖಾತೆ ಹೊಂದಿದ ಕಂದಾಯ ಭೂಮಿಯಲ್ಲಿ ನಿರ್ವಣವಾದ ಮನೆಗಳಿಗೆ ‘ಎ’ ಖಾತೆ ನೀಡುವುದು, ವಿದ್ಯಾರ್ಥಿಗಳಿಗೆ 65 ಸಾವಿರ ರೂ. ಮೌಲ್ಯದ ಲ್ಯಾಪ್​ಟಾಪ್ ವಿತರಣೆ, ಎಲ್ಲ ವಲಯಗಳಲ್ಲಿ ವಿಶೇಷ ಆಂಬುಲೆನ್ಸ್ ಸೇವೆ ಮತ್ತು ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ, ಬೃಹತ್ ಮಕ್ಕಳ ಆಸ್ಪತ್ರೆ ತೆರೆಯಲು ಅನುದಾನ ನೀಡುವ ಸಾಧ್ಯತೆಗಳಿವೆ.

ನಾಯಿ ಗೂಡುಗಳು: ನಗರದ 4 ದಿಕ್ಕುಗಳಲ್ಲಿ ಬೀದಿಯಿಗಳ ನಿಯಂತ್ರಣಕ್ಕೆ ನಾಯಿಗೂಡು (ಡಾಗ್ ಕೆನಾಲ್), 4 ದಿಕ್ಕುಗಳಲ್ಲಿ ವಿದ್ಯುತ್ ಚಿತಾಗಾರ ನಿರ್ವಣ, ಕೆರೆಗಳ ಆಸ್ತಿ ಗುರುತಿಸಿ ಬೇಲಿ ನಿರ್ವಿುಸಿ ಅಭಿವೃದ್ಧಿಪಡಿಸುವುದು, ನರ್ಸರಿಗಳ ಸ್ಥಾಪನೆ ಮತ್ತು ಮರ ಕಟಾವು ಮಾಡಿದ ಸ್ಥಳದಲ್ಲಿ ಸಸಿ ನೆಡುವುದು, ನಗರದ ಗೋಡೆಗಳ ಮೇಲೆ ರಾಜ್ಯ ಇತಿಹಾಸ ಸಾರುವ ಚಿತ್ರಗಳ ಬಿಡಿಸುವಿಕೆ, 20 ಪ್ರಮುಖ ವೃತ್ತಗಳನ್ನು ಐತಿಹಾಸಿಕ ಸಾಮ್ರಾಜ್ಯಗಳ ರೂಪದಲ್ಲಿ ಅಭಿವೃದ್ಧಿಗೆ ಒತ್ತು, ಬಿಬಿಎಂಪಿ ಆಸ್ಪತ್ರೆಗಳ ಆಧುನೀಕರಣ, ರಸ್ತೆಗಳ ಅಭಿವೃದ್ಧಿಗೆ, ಕಸದ ಸಮಸ್ಯೆ ನಿವಾರಣೆ, ಒಂಟಿ ಮನೆ ನಿರ್ವಣಕ್ಕೆ ಒತ್ತು, 75 ವರ್ಷ ಮೇಲ್ಪಟ್ಟ ಕಲಾವಿದರಿಗೆ ಸಹಾಯಧನ ನೀಡುವ ಯೋಜನೆಗಳು ಹೊರಬೀಳಬಹುದು.

ಶಿಕ್ಷಣಕ್ಕೆ ಆದ್ಯತೆ, ಪತ್ರಿಕೆಗಳಿಗೆ ನೆರವು: ಬಿಬಿಎಂಪಿ ವ್ಯಾಪ್ತಿಯ ಎಲ್ಲ ಶಾಲೆಗಳನ್ನು ದೆಹಲಿ ಅಥವಾ ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವುದು. ಪಾಲಿಕೆಯ ಶಾಲೆಗಳಲ್ಲಿ

ಇಂಗ್ಲಿಷ್ ಮಾಧ್ಯಮ ಪರಿಚಯ ಹಾಗೂ ಸ್ಮಾರ್ಟ್ ತರಗತಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಗಳಿವೆ. ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಹಾಗೂ ಮಾಸಪತ್ರಿಕೆಗಳು ಸೇರಿ ಎಲ್ಲ ವಿಧದ ಪತ್ರಿಕೆಗಳ ಮಾರಾಟಕ್ಕೆ 198 ವಾರ್ಡ್​ಗಳಲ್ಲಿ ಮಾರಾಟ ಮಳಿಗೆ ಸ್ಥಾಪಿಸುವ ಚಿಂತನೆಯಿದೆ. ಪತ್ರಕರ್ತರಿಗೆ ಆರೋಗ್ಯ ಹಾಗೂ ಅಪಘಾತ ವಿಮೆ, ಪತ್ರಿಕಾ ವಿತರಕರಿಗೆ ನೆರವು ನೀಡುವ ಉದ್ದೇಶವಿದೆ.

30 ಜನರಷ್ಟೇ ಉಪಸ್ಥಿತಿ

ವಿಡಿಯೋ ಕಾನ್ಪರೆನ್ಸ್ ಮೂಲಕ ಬಜೆಟ್ ಮಂಡಿಸಲಿರುವ ದೇಶದ ಮೊದಲ ಪಾಲಿಕೆ ಎಂಬ ಹೆಗ್ಗಳಿಕೆಗೆ ಬಿಬಿಎಂಪಿ ಪಾತ್ರವಾಗಲಿದೆ. ಮಂಡನೆ ವೇಳೆ 30 ಜನರಷ್ಟೇ ಉಪಸ್ಥಿತರಿರಲಿದ್ದು, ಉಳಿದ ಸದಸ್ಯರು ಆಯಾ ವಲಯದ ಕಚೇರಿಗಳಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಸಾಕ್ಷಿಯಾಗಲಿದ್ದಾರೆ. 1953ರಲ್ಲಿ ಕಾಲರಾ ಭೀತಿ ಕಾಣಿಸಿಕೊಂಡಾಗ ಬೆಂಗಳೂರು ನಗರಸಭೆಯ ಮೇಯೋಹಾಲ್​ನಲ್ಲಿ ಕೇವಲ 8 ಜನರ ಸಮ್ಮುಖ ಬಜೆಟ್ ಮಂಡನೆ ಮಾಡಲಾಗಿತ್ತು

ಚುನಾವಣೆ ದೃಷ್ಟಿಕೋನ ಬಿಟ್ಟು ವಾಸ್ತವಿಕ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಕಳೆದ ಬಾರಿಯಂತೆ ಬೃಹತ್ ಗಾತ್ರವಿರುವುದಿಲ್ಲ. ನಗರ ಒಟ್ಟಾರೆ ಅಭಿವೃದ್ಧಿಗೆ ಸಂಬಂಧಿಸಿದಂತೆ 11 ಸಾವಿರ ಕೋಟಿ ರೂ. ಮೀರದಂತೆ ಬಜೆಟ್ ಮಂಡಿಸಲಾಗುವುದು.

| ಎಲ್. ಶ್ರೀನಿವಾಸ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ