ಮಾಗಡಿ: ತಾಲೂಕಿನ ಚೀಲೂರು ಗ್ರಾಮದಲ್ಲಿ 2 ಎಕರೆ ಟೊಮ್ಯಾಟೊ ಬೆಳೆಗೆ ಕಿಡಿಗೆಡಿಗಳು ಕಳೆ ನಾಶಕ ಸಿಂಪಡಿಸಿ ನಾಶ ಮಾಡಿದ್ದಾರೆ.
ಗ್ರಾಮದ ಬಸವರಾಜು 7 ಎಕರೆ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಪಡೆದು ರಾಗಿ, ಹಾಗಲಕಾಯಿ ಹಾಗೂ 2 ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದು, ಬೆಳೆಗೆ ಕ್ರಿಮಿನಾಶ ಸಿಂಪಡಿಸಲು ನೀರು ಸಂಗ್ರಹಿಸಿಟ್ಟಿದ್ದರು. ಕ್ರಿಮಿನಾಶಕ ಸಿಂಪಡಿಸಲು ಸಂಗ್ರಹಿಸಿಟ್ಟ ನೀರಿಗೆ ಕಿಡಿಗೇಡಿಗಳು ಕಳೆನಾಶಕ ಸುರಿದು ಹೋಗಿದ್ದಾರೆ. ದುಷತ್ಯದ ಅರಿವಿಲ್ಲದೆ ಬುಧವಾರ ಬೆಳಗ್ಗೆ ಬಸವರಾಜು ನೀರಿಗೆ ಕ್ರಿಮಿನಾಶಕ ಬೆರೆಸಿ ಬೆಳೆಗೆ ಸಿಂಪಡಿಸಿದ್ದಾರೆ. ಪರಿಣಾಮ ಬೆಳೆ ಸಂಪೂರ್ಣ ನಾಶವಾಗಿದೆ. ಈ ಮೊದಲು ಸಹ ಬಸವರಾಜು ಅವರ ರಾಗಿ ಮೆದೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ನಾಶ ಮಾಡಿದ್ದರು. ಇನ್ನೇನು 15 ದಿನಗಳಲ್ಲಿ ಟೊಮ್ಯಾಟೊ ಸಲು ಕೈಸೇರುತ್ತಿತ್ತು. ಅದನ್ನೂ ನಾಶ ಮಾಡಿದ್ದಾರೆ ಎಂದು ಬಸವರಾಜು ಅಳಲು ತೋಡಿಕೊಂಡರು. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.