ಜಿಲ್ಲೆ

ಟೊಮ್ಯಾಟೊ ಕೊಂಚ ಇಳಿಕೆ, ಈರುಳ್ಳಿ ತುಟ್ಟಿ

ಅವಿನಾಶ್ ಜೈನಹಳ್ಳಿ

ಮೈಸೂರು: ಮಾರುಕಟ್ಟೆಯಲ್ಲಿ ಈ ವಾರ ಟೊಮ್ಯಾಟೊ ಬೆಲೆ ಏರಿಳಿತ ಕಂಡಿದ್ದು, ಈರುಳ್ಳಿ ಸೇರಿದಂತೆ ಬಹುತೇಕ ತರಕಾರಿಗಳು ತುಟ್ಟಿ ಆಗಿವೆ.
ಮಳೆಯ ಹಿನ್ನೆಲೆಯಲ್ಲಿ ಟೊಮ್ಯಾಟೊ ಪೂರೈಕೆ ಕಡಿಮೆಯಾದ ಕಾರಣಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಏರಿದ್ದು, ಕಳೆದ ವಾರ ಪ್ರತಿ ಕೆ.ಜಿ.ಗೆ 100 ರೂ. ರವರೆಗೆ ಮಾರಾಟವಾಗಿತ್ತು.
ಒಂದೆರಡು ದಿನಗಳಿಂದ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡಿದ್ದು, ನಗರದ ಎಪಿಎಂಸಿಯಲ್ಲಿ ಸಗಟು ದರದಲ್ಲಿ ಪ್ರತಿ ಕೆ.ಜಿ.ಗೆ 45 ರೂ.ರಂತೆ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ 60 ರಿಂದ 80 ರೂ.ರವರೆಗೆ ವ್ಯಾಪಾರ ನಡೆದಿದೆ. ಸದ್ಯ ಉತ್ಪನ್ನದ ಪೂರೈಕೆ ಹೆಚ್ಚುತ್ತಿದ್ದು, ಬೆಲೆ ಇನ್ನಷ್ಟು ಇಳಿಯಬಹುದು ಎನ್ನುತ್ತಾರೆ ವರ್ತಕರು.
ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಅಲ್ಪ ಏರಿಕೆ ಕಂಡಿದ್ದು, ದಪ್ಪ ಗಾತ್ರದ ಈರುಳ್ಳಿ ಕೆ.ಜಿ.ಗೆ 40 ರೂ.ರಂತೆ ಮಾರಾಟವಾಗುತ್ತಿದೆ. ಮಳೆ ಕೊರತೆ ಕಾರಣಕ್ಕೆ ಕಳೆದ ವರ್ಷ ಉತ್ಪಾದನೆ ಕಡಿಮೆ ಆಗಿದ್ದು, ಪೂರೈಕೆಯ ವ್ಯತ್ಯಯವಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಲೆ ಕೊಂಚ ಏರುವ ಸಾಧ್ಯತೆ ಇದೆ. ಮೂಲಂಗಿ, ನುಗ್ಗೆಕಾಯಿ ಸಹ ದರ ಏರಿಸಿಕೊಂಡಿದ್ದು, ಗಡ್ಡೆಕೋಸು, ಬೀನ್ಸ್, ದಪ್ಪ ಮೆಣಸಿನಕಾಯಿ ಸೇರಿದಂತೆ ಹೆಚ್ಚಿನ ತರಕಾರಿಗಳ ಬೆಲೆಯು ದುಬಾರಿಯಾಗಿಯೇ ಮುಂದುವರಿದಿದೆ. ಸೌತೆ, ನಿಂಬೆ ಮಾತ್ರ ಅಗ್ಗವಾಗಿದೆ.
ಸೊಪ್ಪುಗಳು ಎಂದಿನಂತೆ ದುಬಾರಿಯಾಗಿವೆ. ಕೊತ್ತಂಬರಿ, ಪಾಲಕ್ ಸಣ್ಣ ಕಟ್ಟು 10ರೂ.ಗೆ ಒಂದರಂತೆ, ಮೆಂತ್ಯ ಹಾಗೂ ಸಬ್ಬಸ್ಸಿಗೆ ದೊಡ್ಡ ಕಟ್ಟು 40-50 ರೂ., ಕೀರೆ, ಕಿಲ್‌ಕೀರೆ, ದಂಟು ಸಣ್ಣ ಕಟ್ಟು 3ಕ್ಕೆ 20 ರೂ.ರಂತೆ ವ್ಯಾಪಾರ ನಡೆದಿದೆ. ಮಳೆಗಾಲವಾದ್ದರಿಂದ ಸೊಪ್ಪು ಬೆಳೆಯುವುದು ಕಡಿಮೆ ಆಗಿದ್ದು, ಬೆಲೆ ಇನ್ನಷ್ಟು ವಾರ ಕಾಲ ದುಬಾರಿಯಾಗಿಯೇ ಮುಂದುವರಿಯುವ ಸಾಧ್ಯತೆ ಇದೆ.