ತೊಗರಿ ಬಿತ್ತನೆ ಬೀಜ ಸಮರ್ಪಕ ವಿತರಣೆಗೆ ಒತ್ತಾಯಿಸಿ ಹಟ್ಟಿಚಿನ್ನದಗಣಿ ಹೋಬಳಿ ಭಾಗದ ರೈತರು ಗುರುಗುಂಟಾ ರೈತ ಸಂಪರ್ಕ ಕೇಂದ್ರದ ಮುಂಭಾಗ ಧರಣಿ ನಡೆಸಿದರು. 
ಜಿಲ್ಲೆ

ತೊಗರಿ ಬಿತ್ತನೆ ಬೀಜ ಸಮರ್ಪಕ ವಿತರಿಸುವಂತೆ ರೈತ ಸಂಪರ್ಕ ಕೇಂದ್ರದ ಮುಂಭಾಗ ಪಟ್ಟು ಹಿಡಿದ ರೈತರು

ಹಟ್ಟಿಚಿನ್ನದಗಣಿ: ಹೋಬಳಿ ವ್ಯಾಪ್ತಿಯಲ್ಲಿ ತೊಗರಿ ಬೆಳೆಯಲು ಬೇಡಿಕೆ ಹೆಚ್ಚಿದ್ದರೂ ಕಡಿಮೆ ಬೀಜ ಪೂರೈಸಿದ ಹಿನ್ನೆಲೆಯಲ್ಲಿ ಗುರುಗುಂಟಾ ರೈತ ಸಂಪರ್ಕ ಕೇಂದ್ರದ ಮುಂಭಾಗ ರೈತರು ಶುಕ್ರವಾರ ಧರಣಿ ನಡೆಸಿದರು.

ಪ್ರಸಕ್ತ ಸಾಲಿಗೆ ಸಮಯಕ್ಕೆ ಸರಿಯಾಗಿ ಮಳೆಯಾಗಿದ್ದು, ಬಿತ್ತನೆ ಮಾಡಲು ಜಮೀನು ಹದ ಮಾಡಿಕೊಂಡ ರೈತರು ಬಿತ್ತನೆ ಬೀಜಕ್ಕಾಗಿ ಅಲೆದಾಡುವಂತಾಗಿದೆ. ವಾರದಿಂದ ಅಲೆದಾಡುತ್ತಿದ್ದರೂ ಬೇಡಿಕೆಗೆ ತಕ್ಕಂತೆ ಬೀಜ ಸಿಗುತ್ತಿಲ್ಲವೆಂದು ರೈತರಾದ ಕೃಷ್ಣಪ್ಪ ದೊರೆ, ಹನುಮಂತ ಗಡ್ಡಿ, ತಿಪ್ಪಣ್ಣ ಇತರರು ದೂರಿದರು.

ಪ್ರಸಕ್ತ ಸಾಲಿಗೆ ತೊಗರಿ ಬೀಜಕ್ಕೆ ಭಾರಿ ಬೇಡಿಕೆ ಬಂದಿದೆ. 1500 ಕ್ವಿಂಟಾಲ್ ತೊಗರಿ ಬೀಜವನ್ನು ಈಗಾಗಲೇ ಮಾರಾಟ ಮಾಡಲಾಗಿದೆ. ಇನ್ನೂ 500 ಕ್ವಿಂಟಾಲ್ ಬೀಜ ಪೂರೈಸುವಂತೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಶನಿವಾರದೊಳಗೆ ಹೆಚ್ಚಿನ ಬೀಜ ತಂದು ರೈತರಿಗೆ ಸಮರ್ಪಕವಾಗಿ ವಿತರಿಸಲಾಗುವುದು.| ಮಹಾಂತೇಶ್ ಹವಾಲ್ದಾರ್, ಸಹಾಯಕ ಕೃಷಿ ನಿರ್ದೇಶಕ, ಲಿಂಗಸುಗೂರು