ಎಂ.ರಾಮೇಗೌಡ ನಂದಗುಡಿ
ಕೆಲ ತಿಂಗಳ ಹಿಂದೆ ಚಿನ್ನದ ಬೆಲೆಯಂತಾಗಿದ್ದ ಟೊಮ್ಯಾಟೊ ಗ್ರಾಹಕರಿಗೆ ಕಣ್ಣೀರು ತರಿಸಿದ್ದರೆ ಅದೇ ಟೊಮ್ಯಾಟೊ ಈಗ ರೈತನ ಕಣ್ಣಲ್ಲಿ ನೀರುರುವಂತೆ ಮಾಡಿದೆ. ಕೆಲವೇ ತಿಂಗಳ ಹಿಂದೆ ಕೆಜಿ 150 ರೂ. ದಾಟಿದ್ದ ಟೊಮ್ಯಾಟೊವನ್ನು 5 ರೂಪಾಯಿಗೂ ಕೇಳುವವರು ಇಲ್ಲದಂತಾಗಿದೆ. ಎಕರೆಗಟ್ಟಲೆ ಟೊಮ್ಯಾಟೊ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದ ತೋಟಗಾರಿಕೆ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ರಾತ್ರಿ ವೇಳೆ ಕಳ್ಳರು ತೋಟಗಳಿಗೆ ನುಗ್ಗಿ ಕಳವು ಮಾಡುತ್ತಿದ್ದರು ಎಂದು ಈ ಹಿಂದೆ ತೋಟಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರು. ಟೊಮ್ಯಾಟೊ ಬಂಪರ್ ಬೆಲೆಯಿಂದ ರೈತರು ಹಿಗ್ಗಿದ್ದರು. ಇದೇ ವೇಗದಲ್ಲಿ ಸಾಕಷ್ಟು ರೈತರು ಎಕರೆಗಟ್ಟಲೆ ಬಂಡವಾಳ ಹಾಕಿ ಟೊಮ್ಯಾಟೊ ಬೆಳೆದಿದ್ದರು. ದಿಢೀರ್ ಬೆಲೆ ಕುಸಿತ ಎಲ್ಲ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದೆ. ಇನ್ನೇನು ಕೈ ತುಂಬಾ ಹಣ ಸಿಗುತ್ತದೆ, ಮಾಡಿದ ಸಾಲ ತೀರಿಸಿ ಆರ್ಥಿಕವಾಗಿ ಸುಧಾರಣೆ ಕಾಣಬಹುದು ಎಂದು ಭಾವಿಸಿದ್ದ ರೈತರಿಗೆ ಬೆಲೆ ಕುಸಿತ ಭಾರಿ ಹೊಡೆತ ನೀಡಿದೆ.
ಬಂಡವಾಳವೂ ವಾಪಸ್ ಬರಲ್ಲ: ನಂದಗುಡಿ ಹೋಬಳಿಯ ಚಿಕ್ಕ ಕೊರಟಿ, ದೊಡ್ಡ ಕೊರಟಿ, ಕಾರಹಳ್ಳಿ, ವಡ್ಡಹಳ್ಳಿ, ಗಿಡ್ಡನಹಳ್ಳಿ, ಹಳೇಊರು, ಗೋವಿಂದನಪುರ, ಶಿವನಾಪುರ ಸೇರಿ ಹಲವು ಗ್ರಾಮಗಳಲ್ಲಿ ಟೊಮ್ಯಾಟೊ ಬೆಳೆಯಲಾಗಿದೆ. ತಿಪ್ಪೆಗೊಬ್ಬರ, ಕೋಳಿ ತ್ಯಾಜ್ಯದ ಗೊಬ್ಬರ ಹಾಕಿ ಬೆಳೆ ಬೆಳೆದಿದ್ದಾರೆ. ತೋಟಗಳಲ್ಲಿ ಟೊಮ್ಯಾಟೊ ಸಲು ಹುಲುಸಾಗಿ ಬಂದಿದೆ. ಇದಕ್ಕಾಗಿ ಲಕ್ಷಾಂತರ ರೂ.ಖರ್ಚು ಮಾಡಲಾಗಿದೆ. ಆದರೆ ಮಾರುಕಟ್ಟೆಗಳಲ್ಲಿ ದರ ಪಾತಾಳಕ್ಕಿಳಿದಿದ್ದು ಹಾಕಿದ ಬಂಡವಾಳವೂ ವಾಪಸ್ ಬರದಂತಾಗಿದೆ.
ಹೊರ ರಾಜ್ಯದ ಪೈಪೋಟಿ: ಉತ್ತಮ ಇಳುವರಿಯಿಂದ ಮಾರುಕಟ್ಟೆಗಳಲ್ಲಿ ಎಲ್ಲೆಂದರಲ್ಲಿ ಟೊಮ್ಯಾಟೊ ರಾಶಿ ಕಂಡುಬರುತ್ತಿದೆ. ಮಹಾರಾಷ್ಟ್ರದ ನಾಸಿಕ್, ಔರಂಗಾಬಾದ್, ಮಧ್ಯಪ್ರದೇಶ ರಾಜ್ಯಗಳಿಂದ ಹೆಚ್ಚೆಚ್ಚು ಟೊಮ್ಯಾಟೋ ಬಂದಿವೆ. ಇದರಿಂದ ಮಾರುಕಟ್ಟೆಗಳಲ್ಲಿ ಕೇಳುವವರೇ ಇಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಪ್ರಸ್ತುತ 5ಕೆಜಿ ಬಾಕ್ಸ್ 50ರಿಂದ 60ರೂಗಳಾಗಿದೆ, 2 ಎಕರೆಯಲ್ಲಿ ಟೊಮ್ಯಾಟೊ ಬೆಳೆಯಲು ಸುಮಾರು 6 ರಿಂದ 8 ಲಕ್ಷ ರೂ.ಖರ್ಚಾಗುತ್ತದೆ. ಹಣ್ಣು ಕೀಳಲು ಒಬ್ಬರಿಗೆ 300 ರಿಂದ 400ರೂ ಕೂಲಿ ಕೊಡಬೇಕಾಗುತ್ತದೆ. ಬಾಕ್ಸ್ ಒಂದಕ್ಕೆ 15 ರೂಪಾಯಿ ಲಗೇಜ್ ಚಾರ್ಜ್ ಕೊಡಬೇಕಾಗುತ್ತದೆ. ದಳ್ಳಾಳಿಗಳಿಗೆ ಕಮಿಷನ್ ಕೊಡಬೇಕು, ಔಷಧಕ್ಕೆ ಸಾವಿರಾರು ರೂ. ವ್ಯಯಿಸಬೇಕು. ಇದೆಲ್ಲ ಖರ್ಚು ಹೋಗಿ 10-20 ರೂ.ಕೈಗೆ ಸಿಗುತ್ತದೆ. ಹಾಕಿದ ಬಂಡವಾಳ, ಕೂಲಿಯೂ ಇಲ್ಲದೆ ಹಾಕಿದ ಬಂಡವಾಳಕ್ಕೆ ಬಡ್ಡಿ ಸಂದಾಯ ಮಾಡಲು ಆಗದ ತ್ರಿಶಂಕು ಸ್ಥಿತಿ ತಲುಪಿದ್ದೇವೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.