ಢವಳಗಿ: ಸೂಕ್ತ ಬೆಲೆ ಸಿಗದ ಕಾರಣ ಕಷ್ಟಪಟ್ಟು ಬೆಳೆದ ಬೆಳೆಯನ್ನು ರೈತರು ಆಡು-ಮೇಕೆಗೆ ಹಾಕುತ್ತಿದ್ದಾರೆ.
ದೇಶದಲ್ಲಿ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ನಿರಾಸೆಗೊಂಡಿರುವ ರೈತರು ಆಡು-ಮೇಕೆಗಳನ್ನು ಹೊಲದಲ್ಲಿ ಬಿಟ್ಟಿದ್ದಾರೆ.
ಢವಳಗಿ ಗ್ರಾಮದ ನಡಿಗೇರಪ್ಪ ಬೀರಗೊಂಡ ಎಂಬ ರೈತ ತಮ್ಮ ಹೊಲದ ಒಂದು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು. ಅದಕ್ಕೆ ಮೂವತ್ತೈದು ಸಾವಿರ ರೂ. ಖರ್ಚು ಮಾಡಿ, ಉತ್ತಮ ಲಾಭದ ನಿರೀಕ್ಷಿಸಿದ್ದರು. ಆದರೆ, ಈಗ ಲಾಭ ಬಿಡಿ, ಮಾಡಿದ ಖರ್ಚು ವಾಪಸ್ ಬಂದರೆ ಸಾಕು ಎಂಬಂತಾಗಿದೆ ಅವರ ಪರಿಸ್ಥಿತಿ. ಮಾರುಕಟ್ಟೆ ಬಂದ್ ಆಗಿರುವುದರಿಂದ ಬೆಳೆದ ಬೆಳೆಯನ್ನು ಆಡು-ಮೇಕೆಗಳಿಗೆ ಹಾಕುತ್ತಿದ್ದಾರೆ.
ಇನ್ನೊಬ್ಬ ರೈತ ಸಂಕೇತಗೌಡ ಕೊಣ್ಣೂರ ಅವರು ಎರಡುವರೇ ಎಕರೆಯಲ್ಲಿ ಟೊಮೆಟೊ ಬೆಳೆಯಲು ಬರೊಬ್ಬರಿ ಒಂದು ಲಕ್ಷ ರೂ. ಖರ್ಚು ಮಾಡಿದ್ದರು. ನಿರೀಕ್ಷೆಗಿಂತಲೂ ಉತ್ತಮ ಬೆಳೆ ಬಂದಿದ್ದರೂ ಲಾಕ್‌ಡೌನ್‌ದಿಂದಾಗಿ ಬೆಳೆ ಸಾಗಿಸಲಾಗಿದೇ ಹಾಗೂ ಸೂಕ್ತ ಬೆಲೆ ಸಿಗದೇ ಕಾರಣ ರೂಟರ್ ಹೊಡೆದು ಕಣ್ಣೀರು ಹಾಕಿದರು. ಕೈಯಲ್ಲಿದ್ದ ಹಣವನ್ನು ಟೊಮೆಟೊ ವ್ಯವಸಾಯಕ್ಕೆ ಹಾಕಿ ಕೈ ಸುಟ್ಟಿಕೊಂಡಿರುವ ಅವರು, ಮುಂದೇನು? ಎಂದು ಕಣ್ಣೀರಿಡುತ್ತಿದ್ದಾರೆ. ಸರ್ಕಾರ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ನಿಗದಿ ಮಾಡಬೇಕೆಂದು ಹೇಳಿದರು.