ಶ್ರೀನಿವಾಸಪುರ: ತಾಲೂಕಿನಲ್ಲಿ ಮಾವಿನ ಬೆಳೆಯೊಂದಿಗೆ ಟೊಮ್ಯಾಟೊ ಬೆಳೆಯನ್ನೇ ನಂಬಿ ಸಾವಿರಾರು ಎಕರೆಗಳಷ್ಟು ಟೊಮ್ಯಾಟೊ ಬೆಳೆ ನಾಟಿ ಮಾಡಿದ್ದವರು ಈಗ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಇಲ್ಲದೆ ಕಂಗಾಲಾಗುವಂತಾಗಿದೆ.
ಬೆಲೆ ಕಳೆದುಕೊಂಡು ಗಿಡದಲ್ಲೇ ಹಣ್ಣು ಕೊಳೆಯುವ ಸ್ಥಿತಿ ಎದುರಾಗಿದೆ. ಕೋಲಾರದ ಮಾರುಕಟ್ಟೆಯಲ್ಲಿ ಕಾಯಿ ಚೆನ್ನಾಗಿದ್ದರೆ 15 ಕೆಜಿ ಕ್ರೇಟ್ ಬೆಲೆಯು 140 ರೂ., ಚಿಕ್ಕ ಕಾಯಿಗಳಿದ್ದರೆ ಕೇವಲ 15 ಕೆಜಿ ಕ್ರೇಟ್ಗೆ 40 ರೂ. ಬೆಲೆ ಇದೆ. ಇದರಿಂದಾಗಿ ಬೆಳೆಗೆ ಹಾಕಿದ್ದ ಬಂಡವಾಳವೂ ಕೈಗೆ ಬರುತ್ತಿಲ್ಲ. ಕೂಲಿಗೂ ಸಾಕಾಗುತ್ತಿಲ್ಲ ಎಂದು ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಅಧಿಕ ಬೆಳೆಗೆ ಬೆಲೆ ಕುಸಿತ
ಈ ಬಾರಿ ಬೇಸಿಗೆಯಲ್ಲಿ ಉತ್ತಮ ಇಳುವರಿ ಬಂದಿದೆ. ಅಧಿಕ ಇಳುವರಿಯಿಂದ ಬೇಡಿಕೆ ಕಡಿಮೆಯಾಗಿರುವುದೇ ಬೆಲೆ ಕುಸಿತಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಸ್ಥರು. ವರ್ಷದ ಆರಂಭದಲ್ಲಿ ಪ್ರತಿ ಕೆಜಿಗೆ 20 ರೂ.ವರೆಗೂ ಮಾರಾಟವಾಗಿದ್ದ ಟೊಮ್ಯಾಟೊ, ಮಾರ್ಚ್ ನಿಂದ 15 ಕೆಜಿ ಕ್ರೇಟ್ಗೆ ಕೇವಲ 40 ರೂ.ಗಳಷ್ಟೇ ಇದೆ. ಚಿಲ್ಲರೆ ಮಾರಾಟಗಾರರು 100 ರೂ.ಗೆ 6-7 ಕೆಜಿ ಮಾರಾಟ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಅಂದಾಜು ಆರು ಏಳು ಸಾವಿರ ಹೆಕ್ಟೇರ್ಗೂ ಅಧಿಕ ಭೂ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯುವ ರೈತರಿದ್ದು, ಮದನಪಲ್ಲಿ, ಕೋಲಾರ, ಶ್ರೀನಿವಾಸಪುರ, ಒಡ್ಡಿಪಲ್ಲಿ, ಬೆಂಗಳೂರು ಮಾರುಕಟ್ಟೆ ಸಾಗಾಟ ಮಾಡುವ ವೆಚ್ಚ ಭರಿಸಲು ಸಾಧ್ಯವಾಗದೆ ಬಹುತೇಕ ರೈತರು ಹಣ್ಣು ಬಿಡಿಸದೆ ಗಿಡದಲ್ಲೇ ಬಿಟ್ಟಿದ್ದು, ಹಣ್ಣು ಕೊಳೆಯುತ್ತಿವೆ.
ಖರ್ಚು ಎಷ್ಟು?
ಒಂದು ಎಕರೆ ಟೊಮ್ಯಾಟೊ ಬೆಳೆಯಲು ಸುಮಾರು 1 ಲಕ್ಷ ರೂ.ಗೂ ಅಧಿಕ ಖರ್ಚು ಮಾಡಬೇಕಿದೆ. ಸಸಿಗಳ ಖರೀದಿ, ಗೊಬ್ಬರ, ಕೀಟನಾಶಕ, ಕೂಲಿ, ಸಾಗಾಟ ವೆಚ್ಚ ಬರುತ್ತದೆ. ಆದರೆ 100 ಕ್ರೇಟ್ ಹಣ್ಣು ಮಾರಿದರೆ 10 ಸಾವಿರ ರೂ. ಕೈಗೆ ಸಿಗುತ್ತಿಲ್ಲ ಎಂಬುದು ಬೆಳೆಗಾರರ ಅಳಲು.
ಕೊಳೆಯುತ್ತಿರುವ ಫಸಲು
ಈಗ ಬೆಲೆ ಕುಸಿದಿರುವುದರಿಂದ ಹಣ್ಣು ಬಿಡಿಸಲು ಮತ್ತು ಸಾಗಣೆ ವೆಚ್ಚವೂ ರೈತರಿಗೆ ಸಿಗುತ್ತಿಲ್ಲ. ಹೀಗಾಗಿ ಹಲವು ರೈತರು ಟೊಮ್ಯಾಟೊ ಫಸಲು ಬಿಡಿಸಲು ಮನಸ್ಸಾಗುತ್ತಿಲ್ಲ. ಮತ್ತೊಂದೆಡೆ ಗಿಡದಲ್ಲೇ ಬಿಟ್ಟರೆ ಮತ್ತೆ ಬೆಳೆ ಬೆಳೆಯಲು ಸಮಸ್ಯೆ ಆಗಬಹುದು ಎಂದು ನಷ್ಟವಾದರೂ ಮಾರುಕಟ್ಟೆಗೆ ಹಾಕುತ್ತಿದ್ದಾರೆ. ಈ ರೀತಿಯಾದರೆ ನಾವು ಬದುಕುವುದಾದರೂ ಹೇಗೆ ಎನ್ನುತ್ತಾರೆ ಬೆಳೆಗಾರರು.
ಕೂಲಿ, ಸಾಗಣೆ ವೆಚ್ಚವೇ ಹೆಚ್ಚು?
ಅದ್ಯಾವ ಕಾರಣವೋ ಏನೋ ಟೊಮ್ಯಾಟೊ ಇಳುವರಿ ಮಾತ್ರ ಬೊಂಬಾಟಾಗಿದೆ. ಎಲ್ಲೆಲ್ಲೂ ಕೆಂಪು ಸುಂದರಿ ಕಣ್ಣಿಗೆ ರಾಚುತ್ತಾಳೆ. ದುರದೃಷ್ಟವೆಂದರೆ ಮಾರುಕಟ್ಟೆಯಲ್ಲಿ ಮೌಲ್ಯ ಕಳೆದುಕೊಂಡಿದ್ದಾಳೆ. ಒಂದು ಎಕರೆ ಬೆಳೆ ಬೆಳೆಯಲು ಸಾವಿರಾರೂ ರೂ. ಖರ್ಚು ಬರುತ್ತದೆ. ಇಂದಿನ ಬೆಲೆಯಲ್ಲಿ ಕಾಯಿ ಬಿಡಿಸುವ ಕೂಲಿ ಆಳಿಗೆ ಗಂಡಸರಿಗೆ 700 ರೂ., ಹೆಂಗಸರಿಗೆ 500 ರೂ. ಕೊಡಬೇಕಾಗಿದೆ. ಸಾಗಾಟಕ್ಕೆ ಒಂದು ಕ್ರೇಟ್ಗೆ ಮದನಪಲ್ಲಿಗೆ 30 ಕೆಜಿಗೆ 20 ರೂ,ಕೋಲಾರಕ್ಕೆ 20 ರೂ. ನೀಡಬೇಕಾಗಿದೆ. ಇದರಿಂದ ಸಾಗಾಟ ವೆಚ್ಚ ಸಹ ಬರುತ್ತಿಲ್ಲ. ಹಾಗಾಗಿ ಕಾಯಿ ಬಿಡಿಸದೆ ಗಿಡದಲ್ಲೇ ಬಿಡಲಾಗಿದೆ. ಹಣ್ಣುಗಳು ಕೊಳೆಯುತ್ತಿವೆ.
ಸರ್ಕಾರ ತಾಲೂಕಿನಲ್ಲಿ ಟೊಮ್ಯಾಟೊ ಸಾಸ್ ತಯಾರಿಕೆ ಕಂಪನಿ ತೆರೆಯಬೇಕು. ಬೆಂಬಲ ಬೆಲೆಯಲ್ಲಿ ಸರ್ಕಾರವೇ ಟೊಮ್ಯಾಟೊ ಖರೀದಿ ಮಾಡುವಂತಾಗಬೇಕು. ಮಾವು ಹಾಗೂ ಟೊಮ್ಯಾಟೊಗೆ ಕೋಲ್ಡ್ ಸ್ಟೋರೇಜ್ ತೆರೆಯುವಂತೆ ಬೆಳೆಗಾರರು ಅನೇಕ ವರ್ಷಗಳಿಂದ ಒತ್ತಾಯ ಮಾಡುತ್ತಾ ಬಂದಿದ್ದಾರೆ. ಬೇಡಿಕೆ ಇದುವರೆಗೂ ಈಡೇರಿಲ್ಲ. ಇನ್ನಾದರೂ ಸರ್ಕಾರ ರೈತರ ಮತ್ತು ಟೊಮ್ಯಾಟೊ ಬೆಳೆಗಾರರ ನೆರವಿಗೆ ಮುಂದಾಗಲಿ ಎಂಬುದು ರೈತರ ಆಗ್ರಹ.
ನಾಲ್ಕು ಎಕರೆಯಷ್ಟು ಟೊಮ್ಯಾಟೊ ಬೆಳೆಯನ್ನು ಲಕ್ಷಾಂತರ ರೂ. ಸಾಲ ಮಾಡಿ ಬೆಳೆದಿರುವೆ. ಗಿಡದ ತುಂಬಾ ಕಾಯಿ ಬಿಟ್ಟಿದೆ. ಆದರೆ ಇಂದು ಕೆಲ ಗಿಡಗಳಿಗೆ ಮಿಲ್ಟು ರೋಗ ಹರಡಿದೆ. ಇದರಿಂದ ನಷ್ಟವುಂಟಾಗುತ್ತಿದೆ. ಹಾಗಾಗಿ ಸರ್ಕಾರ ರೈತರ ಕಷ್ಟಗಳಿಗೆ ಸ್ಪಂದಿಸಬೇಕು.
- ಅಂಬರೀಶ್
ಪಂದಿವಾರಿಪಲ್ಲಿ ರೈತ