ಪಾ.ಶ್ರೀ.ಅನಂತರಾಮ್ ಕೋಲಾರ
ಕರೊನಾ ಭಯದ ನಡುವೆಯೂ ಟೊಮ್ಯಾಟೊ ಅವಕ ಹೆಚ್ಚಾಗಿರುವುದರಿಂದ ಕೋಲಾರ ಎಪಿಎಂಸಿಯಲ್ಲಿ ಜನ ಸಂದಣಿ ನಿಯಂತ್ರಣಕ್ಕೆ ಆಡಳಿತ ಮಂಡಳಿ ಪರದಾಡುವಂತಾಗಿದೆ.
ಕರೊನಾ ನಿಭಾಯಿಸಲು ಆಡಳಿತ ಮಂಡಳಿ 2-3 ಬಾರಿ ರೈತರು, ವರ್ತಕರು ಹಾಗೂ ದಲ್ಲಾಳಿಗಳೊಂದಿಗೆ ಸಭೆ ನಡೆಸಿ ಜೂನ್‌ನಿಂದ ಆಗಸ್ಟ್‌ವರೆಗೆ ಟೊಮ್ಯೊಟೊ ಧಾರಣೆ ಹೆಚ್ಚಾಗುವುದರಿಂದ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ನಿಯಮ ಪಾಲನೆಯಾಗದಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.
ಕಳೆದ ಲಾಕ್‌ಡೌನ್ ಅವಧಿಯಲ್ಲಿ ಆಂಧ್ರಪ್ರದೇಶದ ಟೊಮ್ಯಾಟೊ ವ್ಯಾಪಾರಿಯೊಬ್ಬ ಎಪಿಎಂಸಿಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಕೆಲವು ಮಂಡಿ ಮಾಲೀಕರು, ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು, ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಡಳಿತ ಸೂಚಿಸಿತ್ತು, ರೈತರು ಮತ್ತು ವರ್ತಕರ ಮನವಿಯಿಂದ ಸೀಲ್‌ಡೌನ್‌ಗೆ ಬದಲಾಗಿ ಕೆಲ ಕಟ್ಟುಪಾಡು ವಿಧಿಸಲಾಗಿತ್ತು.
ಎಪಿಎಂಸಿ ಪಕ್ಕದ ಖಾಸಗಿ ತರಕಾರಿ ಮಂಡಿಗೆ ಕರೊನಾ ವಕ್ಕರಿಸಿ ಸೀಲ್‌ಡೌನ್ ಮಾಡಲಾಗಿತ್ತು. ಲಾಕ್‌ಡೌನ್ ತೆರವಿನ ಬಳಿಕ ಟೊಮ್ಯಾಟೊ ಧಾರಣೆಯಲ್ಲಿ ಚೇತರಿಕೆ ಕಂಡಿದೆ. ಪ್ರತಿದಿನ 23000 ಕ್ವಿಂಟಾಲ್‌ನಿಂದ 26 ಸಾವಿರ ಕ್ವಿಂಟಾಲ್ ಅವಕ ದಾಖಲಾಗುತ್ತಿದೆ.
ಎಪಿಎಂಸಿಗೆ ವಾಹನಗಳು ಪ್ರವೇಶಿಸಲು 11 ದ್ವಾರಗಳಿದ್ದು, ಭದ್ರತಾ ಸಿಬ್ಬಂದಿ ಕೊರತೆಯಿಂದ ನಿಗಾ ವಹಿಸುವುದು ಕಷ್ಟವಾಗಿದೆ. ಇದರಿಂದ ಸಮಿತಿಗೆ ಬರುವ ಆದಾಯ ಸಹ ಸೋರಿಕೆಯಾಗುತ್ತಿದೆ. ಬೇಗ ಕೆಲಸವಾಗಬೇಕೆಂಬ ಅತುರದಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ನಿಯಂತ್ರಣ ಕಷ್ಟವಾಗುತ್ತಿದೆ, ಪರಸ್ಪರ ಅಂತರ ಕಾಪಾಡುವುದು ಸವಾಲಾಗಿ ಪರಿಣಮಿಸಿದೆ.
ಲಾರಿ ಚಾಲಕರು ಮತ್ತು ಕ್ಲಿನರ್‌ಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕೆಂದು ಸಾರಿಗೆ ಏಜೆನ್ಸಿಗಳ ಮಾಲೀಕರ ಸಭೆಯಲ್ಲಿ ಸೂಚಿಸಲಾಗಿತ್ತಾದರೂ ನಿಯಮ ಪಾಲನೆ ತೃಪ್ತಿದಾಯಕವಾಗಿಲ್ಲ. ಇತ್ತೀಚಿಗೆ ಸುರಿದ ಮಳೆಯಿಂದ ಪ್ರಾಂಗಣದಲ್ಲಿ ಸ್ವಚ್ಛತೆ ಇಲ್ಲದಾಗಿದೆ. ಚರಂಡಿಗಳಲ್ಲಿ ಟನ್‌ಗಟ್ಟಲೆ ಹೂಳು ತುಂಬಿದೆ, ಟೊಮ್ಯಾಟೊ ವಿಂಗಡಣೆ ಮಾಡುವ ಸಿಬ್ಬಂದಿ ತ್ಯಾಜ್ಯವನ್ನು ತಕ್ಷಣ ವಿಲೇವಾರಿ ಮಾಡದಿರುವುದರಿಂದ ಮಾರುಕಟ್ಟೆ ಗಬ್ಬು ನಾರುತ್ತಿದೆ.
ಒಂದು ಕಡೆ ಸ್ವಚ್ಛತೆ ಕೊರತೆ ಮತ್ತೊಂದು ಕಡೆ ಕರೊನಾ ಹಾವಳಿಯಿಂದ ಆಡಳಿತ ಮಂಡಳಿಗೆ ಸೋಂಕು ತಡೆಯುವುದು ತಲೆ ನೋವಾಗಿ ಪರಿಣಮಿಸಿದೆ. ಪ್ರತಿದಿನ ಮಾರುಕಟ್ಟೆಗೆ ಜಿಲ್ಲೆ, ಅಂತರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ರೈತರು ಮತ್ತು ವ್ಯಾಪಾರಿಗಳು ಬರುತ್ತಿದ್ದು. ಲಾಕ್‌ಡೌನ್ ತೆರವಿನ ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ ಇತ್ತ ಸುಳಿದಿಲ್ಲ.
ಎಪಿಎಂಸಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಆತಂಕ ತಪ್ಪಿಲ್ಲ, ಜನರಲ್ಲಿ ಉದಾಸೀನ ಸಲ್ಲ. ಕೆಲಕೂಲಿ ಕಾರ್ಮಿಕರು ಮಾಸ್ಕ್ ಧರಿಸದ ಕಾರಣ ಬಸ್ಕಿ ಶಿಕ್ಷೆ ವಿಧಿಸಲಾಗಿದೆ, ನಿಯಮ ಪಾಲಿಸದಿದ್ದರೆ ಇನ್ನೂ ಉಗ್ರ ಶಿಕ್ಷೆ ನೀಡಬೇಕಾಗುತ್ತದೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ರೈತರು, ವ್ಯಾಪಾರಿಗಳೇ ಕರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಬೇಕು, ಕರೊನಾ ನಡುವೆ ಟೊಮ್ಯಾಟೊ ದರ ಕಳೆದ ವರ್ಷಕ್ಕಿಂತ ಹೆಚ್ಚಳವಾಗಿರುವುದು ಸಂತಸವನ್ನುಂಟು ಮಾಡಿದೆ. ಮಂಜುನಾಥ್ ಕೆ.ಗೌಡ, ಅಧ್ಯಕ್ಷ, ಎಪಿಎಂಸಿ, ಕೋಲಾರ