ದೇವದುರ್ಗ: ತಾಲೂಕಿನ ಕಾಕರಗಲ್ ಹಾಗೂ ಜಾಲಹಳ್ಳಿಯಲ್ಲಿ ಟೋಲ್‌ಗೇಟ್ ನಿರ್ಮಾಣ ವಿರೋಧಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಕಾಕರಗಲ್ ಟೋಲ್‌ಗೇಟ್ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ದೇವದುರ್ಗದಲ್ಲಿ ಟೋಲ್‌ಗೇಟ್ ನಿರ್ಮಾಣ ಬೇಡ
ದೇವದುರ್ಗ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಹಳ್ಳಿಗಳು, ತಾಂಡಾ, ದೊಡ್ಡಿಗಳನ್ನು ಹೊಂದಿದೆ. ಬಡತನ, ಅಪೌಷ್ಟಿಕ ಸಮಸ್ಯೆ, ಗುಳೆ ಹೆಚ್ಚಾಗಿದೆ. ಯುವಕರು ಕೆಲಸವಿಲ್ಲದೆ ಮಹಾನಗರಗಳಿಗೆ ಹೋಗುತ್ತಿದ್ದಾರೆ. ಜಿಲ್ಲೆ ಮಾತ್ರವಲ್ಲ ರಾಜ್ಯದಲ್ಲಿ ಎಲ್ಲ ಹಂತದಲ್ಲಿ ತಾಲೂಕು ಅತ್ಯಂತ ಹಿಂದುಳಿದಿದೆ.
ಕಲ್ಮಲಾ-ತಿಂಥಣಿ ಬ್ರಿಡ್ಜ್ ರಸ್ತೆ ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿಯಾಗಿದ್ದು, ಅದಕ್ಕೆ ತಕ್ಕಂತೆ ಅಭಿವೃದ್ಧಿ ಕಂಡಿಲ್ಲ. ಆದರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಮೀಲಾಗಿ ಟೋಲ್‌ಗೇಟ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲದ ಟೋಲ್‌ಗೇಟ್ ಇಲ್ಲಿ ಯಾಕೆ ನಿರ್ಮಿಸುತ್ತಿದ್ದಾರೆ.
ಇದು ತಾಲೂಕಿನ ಜನರಿಗೆ ಮಾಡುತ್ತಿರುವ ದ್ರೋಹವಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಎರಡು ಟೋಲ್‌ಗೇಟ್‌ಗಳನ್ನು ರದ್ದುಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ವಿವಿಧ ಸಂಘಟನೆಗಳು, ರೈತರ ಜತೆಗೂಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರಮುಖರಾದ ಹನುಮಂತಪ್ಪ ಮನ್ನಾಪುರ, ಬುರ‌್ರಪ್ಪ ಮರೆಡ್ಡಿ, ವೆಂಕಟೇಶ ಜಾಲಹಳ್ಳಿ, ಬಸವರಾಜ ಮಸರಕಲ್, ಹೊನ್ನಪ್ಪ ಗುಂಡಗುರ್ತಿ ಇದ್ದರು.