ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಕಬ್ಬು ಬೆಳೆಗಾರರ ನೆರವಿಗೆ ಮುಂದಾದ ಜಿಲ್ಲಾಡಳಿತ ಕಬ್ಬು ಸಾಗಿಸುವ ವಾಹನಗಳಿಗೆ ಟೋಲ್‌ಗಳಲ್ಲಿ ಶುಲ್ಕ ವಿನಾಯಿತಿ ೋಷಿಸಿರುವ ಮಾದರಿಯಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿಯೂ ರೈತರ ವಾಹನಗಳಿಗೆ ಶುಲ್ಕ ರಹಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ಸಂಬಂಧ ಗ್ರಾಮಾಂತರ ಜಿಲ್ಲಾಡಳಿತ ಉತ್ಸುಕತೆ ತೋರಿಸಿದೆ.
ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ದೇವನಹಳ್ಳಿ ತಾಲೂಕು ವ್ಯಾಪ್ತಿಯ ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲೂ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಎಲ್ಲ ಕಡೆಗಳಲ್ಲೂ ಟೋಲ್ ಸಂಗ್ರಹಣೆ ನಡೆಯುತ್ತಿದೆ. ಇದು ರೈತಾಪಿ ಜನರಿಗೆ ಆರ್ಥಿಕ ಹೊರೆಯಾಗಲಿದೆ. ಇದರ ಹೊರೆ ತಗ್ಗಿಸುವ ಸಂಬಂಧ ಶೀಘ್ರದಲ್ಲೇ ವಿಶೇಷ ಸಭೆ ನಡೆಸಲು ಚಿಂತನೆ ನಡೆಸಿದೆ.
ಗಾಯದ ಮೇಲೆ ಬರೆ: ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿದ್ದರೂ ತೋಟಗಾರಿಕಾ ಬೆಳೆಯೂ ಸಾಕಷ್ಟು ಪ್ರಗತಿಯಲ್ಲಿದೆ, ಮುಖ್ಯವಾಗಿ ತರಕಾರಿ, ಹೂ,ಹಣ್ಣು ಬೆಳೆಗಾರರು ಪ್ರತಿನಿತ್ಯ ಜಿಲ್ಲೆಯ ವಿವಿಧ ಕಡೆಯಿಂದ ಬೆಂಗಳೂರು ಸೇರಿ ಇನ್ನಿತರ ಜಿಲ್ಲೆಗಳಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸುತ್ತಾರೆ. ಪ್ರಸ್ತುತ ಸನ್ನಿವೇಶದಲ್ಲಿ ಬೆಳೆಹಾನಿ, ದರ ಕುಸಿತದಂಥ ಸಂಕಷ್ಟ ಎದುರಿಸುವುದು ಸಾಮಾನ್ಯವಾಗಿದೆ. ಪ್ರಸ್ತುತ ಇಂಧನದ ದರವೂ ಗಗನಮುಖಿಯಾಗಿದೆ, ವಾಹನಗಳ ನಿರ್ವಹಣೆ ಕೂಲಿ ಕಾರ್ಮಿಕರ ಕೊರತೆ ಸೇರಿ ಅನೇಕ ಸವಾಲುಗಳ ನಡುವೆ ಕೃಷಿ ಮಾಡುತ್ತಿರುವ ರೈತರಿಗೆ ಟೋಲ್‌ಗಳಲ್ಲಿ ಶುಲ್ಕ ವಸೂಲಿ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಈ ಹಿನ್ನೆಲೆಯಲ್ಲಿ ಟೋಲ್ ಪ್ರೀ ಮಾಡುವ ಮೂಲಕ ರೈತರ ಆರ್ಥಿಕ ಹೊರೆ ತಗ್ಗಿಸುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮನಸ್ಸು ಮಾಡಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ.
ಮಾನದಂಡಗಳ ಮೇಲೆ ನಿಗಧಿ: ಈಗಾಗಲೇ ಜಿಲ್ಲೆಯ ವಿವಿಧ ರೈತ ಸಂಘಗಳು ಜಿಲ್ಲಾಡಳಿತದ ಮೆಟ್ಟಿಲು ಏರಿದ್ದು, ಗ್ರಾಮಾಂತರ ಜಿಲ್ಲೆಯ ರೈತರಿಗೆ ಟೋಲ್ ವಿನಾಯಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಟೋಲ್‌ನಲ್ಲಿ ಶುಲ್ಕ ವಿನಾಯತಿ ಮಾಡುವಂತೆ ಅಲ್ಲಿನ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಇದೇ ಮಾದರಿಯಲ್ಲಿ ಗ್ರಾಮಾಂತರ ಜಿಲ್ಲೆಯಲ್ಲೂ ಆದೇಶ ಮಾಡಬೇಕು ಎಂಬುದು ರೈತರ ಒಕ್ಕೋರಲ ಒತ್ತಾಯವಾಗಿದೆ.
ಎರಡೂ ಕಡೆ ವಿನಾಯಿತಿ ಕೊಡಿ: ಜಿಲ್ಲೆಯಿಂದ ಬೆಂಗಳೂರು ಸೇರಿ ವಿವಿಧ ಕಡೆಗಳಿಗೆ ತೆರಳುವ ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಹನಗಳಿಗೆ ವಿನಾಯಿತಿ ೋಷಿಸಬೇಕು ಎಂಬುದು ಒತ್ತಾಯವಾಗಿದೆ. ಅತ್ತ ಕಡೆಯಿಂದ ಖಾಲಿ ಬರುವ ವಾಹನಗಳಿಗೂ ವಿನಾಯಿತಿ ನೀಡಬೇಕು. ಒಂದು ವೇಳೆ ಅತ್ತ ಕಡೆಯಿಂದ ಬೇರೆ ವಸ್ತುಗಳನ್ನು ಸಾಗಿಸುತ್ತಿದ್ದರೆ ಟೋಲ್ ಕಟ್ಟಿಸಿಕೊಳ್ಳಿ ಆದರೆ ಖಾಲಿ ಗಾಡಿಗಳಿಗೆ ವಿನಾಯಿತಿ ಕೊಡಿ ಎಂಬುದು ರೈತರ ಒತ್ತಾಯವಾಗಿದೆ.
ಯಾವುದಕ್ಕೆ ಅನ್ವಯ? ಹಾವೇರಿ ಜಿಲ್ಲೆಯಲ್ಲಿ ಬೆಳೆದ ಕಬ್ಬನ್ನು ರೈತರು ಕಟಾವಿನ ನಂತರ ಇತರೆ ಜಿಲ್ಲೆಗಳಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ವಾಹನಗಳಿಗೆ ಅಧಿಕ ತೂಕವಿದೆ ಎಂದು ಟೋಲ್‌ಗೇಟ್‌ಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದಾರೆ ರೈತರ ಹಿತದೃಷ್ಟಿಯಿಂದ ಶುಲ್ಕ ವಸೂಲಿ ನಿಲ್ಲಿಸಬೇಕು ಎಂದು ಅಲ್ಲಿನ ರೈತರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಬ್ಬು ಸಾಗಿಸುವ ವಾಹನಗಳಿಗೆ ಶುಲ್ಕ ವಿನಾಯಿತಿ ಸೂಕ್ತವೆಂದು ತೀರ್ಮಾನಿಸಿ ವಿನಾಯಿತಿ ೋಷಿಸಲಾಗಿದೆ ಎನ್ನಲಾಗಿದೆ. ಅದೇ ರೀತಿ ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಸೇರಿ ತೋಟಗಾರಿಕೆ ಬೆಳೆಗಳು ಹಾಗೂ ಎಲ್ಲ ಕೃಷಿ ಉತ್ಪನ್ನಗಳ ಸಾಗಣೆಗೆ ವಿನಾಯಿತಿ ಸಿಗಲಿದೆಯೇ ಅಥವಾ ಕೆಲವೊಂದು ಉತ್ಪನ್ನಗಳ ಸಾಗಣೆಗೆ ಮಾತ್ರ ಇದು ಅನ್ವಯವಾಗಲಿದೆಯೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಗ್ರಾಮಾಂತರ ಜಿಲ್ಲೆಯಲ್ಲಿನ ಕೃಷಿ ಉತ್ಪನ್ನಗಳ ಸಾಗಣೆ ವಾಹನಗಳಿಗೆ ಟೋಲ್‌ಗಳಲ್ಲಿ ವಿನಾಯಿತಿ ೋಷಿಸಬೇಕು ಎಂದು ರೈತ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹಾವೇರಿಯಲ್ಲಿನ ಆದೇಶದ ಪ್ರತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಶೀಘ್ರದಲ್ಲೇ ಸಭೆ ನಡೆಸಲು ಚಿಂತಿಸಲಾಗಿದೆ.
ಎಚ್.ಅಮರೇಶ್, ಅಪರ ಜಿಲ್ಲಾಧಿಕಾರಿ
ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವ ವೇಳೆಗಾಗಲೇ ರೈತರಿಗೆ ಸಾಕಷ್ಟು ಆರ್ಥಿಕ ಹೊರೆ ಬಿದ್ದಿರುತ್ತದೆ, ವಾಹನಗಳಿಗೆ ಇಂಧನ ಸೇರಿ ನಿರ್ವಹಣೆ ಖರ್ಚು ಅಧಿಕವಾಗಿರುತ್ತದೆ. ಇದರೊಂದಿಗೆ ಟೋಲ್‌ಗಳಲ್ಲಿ ಶುಲ್ಕ ಕಟ್ಟುವುದು ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ, ರೈತಾಪಿ ಜನರ ಹಿತದೃಷ್ಟಿಯನ್ನು ಗಣನೆಗೆ ತೆಗೆದುಕೊಂಡು ಜಿಲ್ಲಾಡಳಿತ ಟೋಲ್‌ಗಳಲ್ಲಿ ವಿನಾಯಿತಿ ನೀಡಲಿದೆ ಎಂಬ ಭರವಸೆ ಇದೆ.
ವಸಂತ್‌ಕುಮಾರ್, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ದೊಡ್ಡಬಳ್ಳಾಪುರ