ಮಧುಗಿರಿ: ಪಾವಗಡ-ಮಳವಳ್ಳಿ ರಾಜ್ಯ ಹೆದ್ದಾರಿಯಲ್ಲಿ ಜಿಲ್ಲೆಯ 5 ಕಡೆ ಟೋಲ್ ಸಂಗ್ರಹ ಕೇಂದ್ರಗಳನ್ನು ಸರ್ಕಾರ ತೆರೆಯಲು ಮುಂದಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರ ವಿರೋಧ ವ್ಯಕ್ತವಾಗಿದೆ.
ಪಾವಗಡದಿಂದ ಆರಂಭವಾಗುವ ಈ ರಸ್ತೆಯ ಮಡಕಶಿರಾ ಸಮೀಪ ಮಧುಗಿರಿಯ ಚಿನ್ನೇನಹಳ್ಳಿ, ಕೊರಟಗೆರೆಯ ಪೆಮ್ಮದೇವರಹಳ್ಳಿ, ತುಮಕೂರಿನ ಓಬಳಾಪುರ, ಕುಣಿಗಲ್‌ನ ದೊಡ್ಡಮಾವತ್ತೂರು ಬಳಿ ಟೋಲ್ ಸಂಗ್ರಹ ಕೇಂದ್ರಗಳನ್ನು ನಿರ್ಮಿಸಲು ಸಿದ್ಧತೆ ಮಾಡಲಾಗುತ್ತಿದೆ.
ಪಾವಗಡದಿಂದ ತುಮಕೂರಿಗೆ 95 ಕಿ.ಮೀ. ಇದ್ದು ಟೋಲ್ ಸಂಗ್ರಹಿಸುವುದರಿಂದ ಲಘು ಹಾಗೂ ಬೃಹತ್ ವಾಹನಗಳಲ್ಲಿ ಸಂಚರಿಸುವವರು ದುಬಾರಿ ಶುಲ್ಕ ತೆರಬೇಕಾಗಲಿದೆ. ದ್ವಿಪಥ ರಸ್ತೆ ಹಾಗೂ ಸರ್ವೀಸ್ ರಸ್ತೆ ನಿರ್ಮಾಣ ಮಾಡದೆ ಟೋಲ್ ಸಂಗ್ರಹ ನಿರ್ಧಾರ ಅವೈಜ್ಞಾನಿಕವೆನಿಸಿದೆ. ಈ ನಡುವೆ ಮಧುಗಿರಿ ಬೈಪಾಸ್ ರಸ್ತೆ ಪೂರ್ಣಗೊಂಡಿದ್ದರೂ ರೈತರಿಗೆ ಸಮರ್ಪಕ ಪರಿಹಾರ ನೀಡಿಲ್ಲ ಹಾಗೂ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ.
ಅಪಘಾತ ವಲಯ: ಕೊರಟಗೆರೆ ಬೈಪಾಸ್ ರಸ್ತೆ ಪೂರ್ಣಗೊಂಡಿದೆಯಾದರೂ ವಾಹನಗಳು ಅತೀ ವೇಗದಿಂದ ಸಂಚರಿಸುವುದರಿಂದ ಅಪಘಾತಗಳು ಹೆಚ್ಚಾಗಿದ್ದು, ನಿಯಂತ್ರಿಸುವ ಮಾರ್ಗೋಪಾಯ ಮಾಡದೆ ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನಹರಿಸದೆ ಟೋಲ್ ಅಳವಡಿಸುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಶಿಪ್ ರಸ್ತೆಯು ಪಾವಗಡದಿಂದ ಮಳವಳ್ಳಿಯವರೆಗೂ 193 ಕಿ.ಮೀ.ಉದ್ದವಿದ್ದು, 576 ಕೋಟಿ ರೂ., ವಿಶ್ವ ಬ್ಯಾಂಕ್ ಆರ್ಥಿಕ ನೆರವಿನೊಂದಿಗೆ ನಿರ್ಮಿಸಲಾಗಿದೆ. ಪಾವಗಡ, ಮಧುಗಿರಿ, ಕೊರಟಗೆರೆ, ತುಮಕೂರು, ಕುಣಿಗಲ್, ಹುಲಿಯೂರುದುರ್ಗ, ಮದ್ದೂರು ಮೂಲಕ ಮಳವಳ್ಳಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ 3 ಹಾಗೂ 33 ಆಗಿದ್ದು, ಕೆಶಿಪ್-2 ಯೋಜನೆಯಡಿ ಗುತ್ತಿಗೆ ನೀಡಿ ಅಭಿವೃದ್ಧಿಪಡಿಸಲಾಗಿದೆ. ಈ ಗುತ್ತಿಗೆ ಅವಧಿ 10 ವರ್ಷಗಳಾಗಿದ್ದು. ಎರಡೂವರೆ ವರ್ಷ ನಿರ್ಮಾಣ ಅವಧಿ, ಉಳಿದ ವರ್ಷಗಳು ನಿರ್ವಹಣಾ ಅವಧಿಗಳಾಗಿರುತ್ತದೆ. 2014ರ ಮಾ.24 ರಂದು ಗುತ್ತಿಗೆ ಕರಾರು ಆಗಿದೆ. ಗುತ್ತಿಗೆ ಅವಧಿ ಮುಕ್ತಾಯವಾಗಿದ್ದರೂ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಹುಲಿಯೂರುದುರ್ಗ ಹೋಬಳಿ ಕೇಂದ್ರದಲ್ಲಿ ಬೈಪಾಸ್ ರಸ್ತೆ ನಿರ್ಮಾಣವಾಗಿದ್ದರೂ ಪಾವಗಡದಲ್ಲಿ ಏಕೆ ಸಾಧ್ಯವಾಗಿಲ್ಲ ಎಂಬುದು ಆ ಭಾಗದ ಜನರ ಪ್ರಶ್ನೆಯಾಗಿದೆ. ತುಮಕೂರು ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿಗೆ ತುಮಕೂರಿನಲ್ಲಿ ಚಾಲನೆ ನೀಡಿದ್ದು ಬೆಳಧರ ಬಳಿ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು ಕೆಶಿಪ್ ರಸ್ತೆಯ ಹಲವು ಭಾಗಗಳಲ್ಲಿ ರೈಲ್ವೆ ಹಳಿಯೂ ಸಹ ಹಾದು ಹೋಗಲಿದೆ.
ಈ ಯೋಜನೆ ವ್ಯಾಪ್ತಿ ಎಷ್ಟೆಷ್ಟು: ರಸ್ತೆ ವಿನ್ಯಾಸ, ಸುಧಾರಣೆ, ದೊಡ್ಡ ಮತ್ತು ಚಿಕ್ಕ ಸೇತುವೆಗಳ ನಿರ್ಮಾಣ, ಪುನರುಜ್ಜೀವನಗೊಳಿಸುವುದು, ಕಲ್ವರ್ಟ್‌ಗಳು, ರಸ್ತೆ ವಿಭಜಕಗಳು, ಚರಂಡಿಗಳು ಪರಿಸರ ರಕ್ಷಣೆ ಮಾಡುವುದು ರಾಜ್ಯ ಹೆದ್ದಾರಿ ದ್ವಿಪಥ ರಸ್ತೆಯನ್ನಾಗಿ ವಿನ್ಯಾಸಗೊಳಿಸುವುದು. ಈ ಮಾರ್ಗದಲ್ಲಿ 3 ದೊಡ್ಡ ಸೇತುವೆಗಳು, 24 ಹೊಸ ಚಿಕ್ಕ ಸೇತುವೆಗಳು, 9 ಸೇತುವೆಗಳನ್ನು ವಿಸ್ತರಣೆಗೊಳಿಸುವುದು, 5 ಸೇತುವೆಗಳನ್ನು ಶ್ರೇಷ್ಠ ನಿರ್ಮಿತಿಯಡಿ ಬದಲಾಯಿಸುವುದು. 35 ಸೇತುವೆ ದುರಸ್ತಿ ಮಾಡಬೇಕಿದೆ. 88 ತಂಗುದಾಣಗಳು ನಿರ್ಮಿಸಲಾಗಿದೆ. 2014 ನ.24ರಂದು ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯೋಜನೆಗೆ ಚಾಲನೆ ನೀಡಿದ್ದರು. ಆಗ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ (ಕೆಶಿಪ್) ಮತ್ತು ಲೋಕೋಪಯೋಗಿ, ಬಂದರು ಮತ್ತು ಒಳನಾಡ ಜಲಸಾರಿಗೆ ಇಲಾಖೆ ವತಿಯಿಂದ ಬಿಡುಗಡೆಯಾಗಿದ್ದ ಕೈಪಿಡಿಯಲ್ಲಿ ಎಲ್ಲಿಯೂ ಸಹ ಈ ರಸ್ತೆಗೆ ಟೋಲ್ ನಿರ್ಮಿಸುವ ಬಗ್ಗೆ ಪ್ರಕಟವಾಗಿಲ್ಲ. ಟೋಲ್ ಸಂಗ್ರಹ ಕುರಿತು ಪ್ರಸ್ತಾಪವಾದಾಗಲೆಲ್ಲ ಮಾಜಿ ಶಾಸಕ ಕೆ.ಎನ್.ರಾಜಣ್ಣ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಹೊರವಲಯದಲ್ಲಿ ರೈತರ ಜಮೀನು ಪಡೆದು ಕೆಶಿಪ್ ವತಿಯಿಂದ ಬೈಪಾಸ್ ರಸ್ತೆ ನಿರ್ಮಿಸಿದ್ದು, ಇದುವರೆಗೂ ರೈತರಿಗೆ ಸಮರ್ಪಕ ಪರಿಹಾರ ವಿತರಿಸ್ಲಿ. ಆದ್ದರಿಂದ ಬೈಪಾಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ರೈತರಿಗೆ ಸಮರ್ಪಕ ಪರಿಹಾರಕ್ಕಾಗಿ ಮೂರು ತಿಂಗಳ ಹಿಂದೆ ಮತ್ತೆ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗ್ಲಿ. ಲಾಲಾಪೇಟೆ ಮಂಜುನಾಥ್, ಪುರಸಭಾ ಸದಸ್ಯ ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಮಧುಗಿರಿ, ಪಾವಗಡ, ಕೊರಟಗೆರೆ ಅತೀ ಹಿಂದುಳಿದ ತಾಲೂಕುಗಳಾಗಿದ್ದು, ಇಲ್ಲಿ ಜನಜೀವನ ಸಾಗುವುದೇ ಕಷ್ಟಕರವಾಗಿದೆ. ಬಹುತೇಕ ಜನರು ಉದ್ಯೋಗ ಅರಸಿ ಪಟ್ಟಣಗಳತ್ತ ವಲಸೆ ಹೋಗುತ್ತಿದ್ದು, ಈ ಟೋಲ್ ನಿರ್ಮಾಣದಿಂದ ಸಮಯ ವ್ಯರ್ಥ. ಹಾಗೆಯೇ ಈ ಅವೈಜ್ಞಾನಿಕ ಕ್ರಮದಿಂದ ಈ ಭಾಗದ ನಾಗರಿಕರ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಎಂ.ವಿ.ವೀರಭದ್ರಯ್ಯ ಶಾಸಕ