ಜಿಲ್ಲೆ

ಗುತ್ತಿಗೆದಾರರಿಗಷ್ಟೇ ಪ್ರೀತಿಯ ಹೈವೇ: ಶಾಸಕ ರವಿಕುಮಾರ್ ಟೀಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿ ಗುತ್ತಿಗೆದಾರರಿಗಷ್ಟೇ ಪ್ರಿಯವಾಗಿದೆ. ಆದರೆ ಪ್ರತಿದಿನ ಜನರು ಅಪಘಾತದಿಂದ ಸಾಯುವಂತಾಗಿದೆ. ನನ್ನ ಕ್ಷೇತ್ರದಲ್ಲಿ ಸರ್ವಿಸ್ ರಸ್ತೆ ಮಾಡಿದ್ದರೂ ಟೋಲ್ ಶುಲ್ಕ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ಶಾಸಕ ರವಿಕುಮಾರ್ ಗಣಿಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ವಿಸ್ ರಸ್ತೆ ಇಲ್ಲದ ಪರಿಣಾಮ ಜನರು ಹೆದ್ದಾರಿಗೆ ಹೋಗಿ ಸಾಯುವಂತಾಗಿದೆ. ಕಳೆದ ದಸರಾ ಹಬ್ಬದ ಸಮಯದಲ್ಲಿ ಕೆರೆ ಒಡೆದು ಹೋಗಿ ಎರಡು ದಿನ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಆದರೆ ಅಲ್ಲಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಮಳೆ ಬಂದರೆ ಮತ್ತೆ ಸಮಸ್ಯೆಯಾಗಲಿದೆ. ಚಿಕ್ಕಮಂಡ್ಯ ಬಳಿ ಸರಿಯಾದ ಕಾಮಗಾರಿ ಮಾಡದ ಪರಿಣಾಮ ಮಳೆ ನೀರು ನಗರದೊಳಗೆ ಬಂದು ಸಮಸ್ಯೆ ಸೃಷ್ಟಿಸುತ್ತಿದೆ. ಇದು ಕೊನೆಯ ಎಚ್ಚರಿಕೆ. ಸಮಸ್ಯೆಗಳನ್ನು ಬಗೆಹರಿಸದೇ ಶುಲ್ಕ ಸಂಗ್ರಹಿಸಿದರೆ ಟೋಲ್ ಮೇಲೆ ದಾಳಿ ಮಾಡುವುದು ಖಚಿತ. ಜತೆಗೆ ಪ್ರಾಧಿಕಾರದ ಒಂದು ವಾಹನವನ್ನು ಸಂಚರಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.