ವಿಕ್ರಮ ನಾಡಿಗೇರ ಧಾರವಾಡ
ಸಾವಿನ ಹೆದ್ದಾರಿ ಎಂದೇ ಬಿಂಬಿತವಾಗಿರುವ ಹು-ಧಾ ನಡುವಿನ ಬೈಪಾಸ್ ರಸ್ತೆಯ ನಿರ್ವಹಣೆ ಮತ್ತು ರಸ್ತೆ ಬಳಕೆದಾರರ ಶುಲ್ಕ ಆಕರಣೆ ಇನ್ನು ಬಂದಾಗಲಿದೆ. ಈ ರಸ್ತೆ ನಿರ್ವಹಣೆ ಮಾಡುತ್ತಿದ್ದ ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ (ಎನ್ಎಚ್ಡಿಎಲ್) ಗುತ್ತಿಗೆ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಶುಲ್ಕ ಆಕರಣೆ ಸ್ಥಗಿತವಾಗಲಿದೆ.
ಹುಬ್ಬಳ್ಳಿಯ ಗಬ್ಬೂರ ಕ್ರಾಸ್ನಿಂದ ಧಾರವಾಡ ನರೇಂದ್ರವರೆಗೆ ಸುಮಾರು 31 ಕಿ.ಮೀ ಅಂತರದ ಈ ರಸ್ತೆಯನ್ನು ಎನ್ಎಚ್ಡಿಎಲ್ ಕಂಪನಿ ನಿರ್ಮಿಸಿ ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿತ್ತು. ಇದೀಗ ಗುತ್ತಿಗೆ ಅವಧಿ ಸೆ. 6ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಸೆ. 7ರ ಸಂಜೆ 6 ಗಂಟೆಯಿಂದ ಟೋಲ್ ಸಂಗ್ರಹ ಬಂದಾಗಲಿದೆ. ಈ ವಿಷಯವಾಗಿ ಸ್ವತಃ ಎನ್ಎಚ್ಡಿಎಲ್ ಘೋಷಿಸಿ, ಮಾಹಿತಿಯನ್ನು ಟೋಲ್ ಬಳಿ ಸಹ ಅಂಟಿಸಿದೆ.
ಸಂಸ್ಥೆಯು ಬೈಪಾಸ್ ರಸ್ತೆ ನಿರ್ಮಿಸಿ, ನಿರ್ವಹಿಸಿ ಮತ್ತು ಹಸ್ತಾಂತರಗೊಳಿಸುವ ಕಾರ್ಯಕ್ಕಾಗಿ 1998ರ ಸೆ. 5ರಂದು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. 2024ರ ಮೇ 5ರಂದೇ ಗುತ್ತಿಗೆ ಅವಧಿ ಮುಕ್ತಾಯವಾಗಿತ್ತು. ಆದರೆ ಕಂಪನಿಗೆ ಆದ ನಷ್ಟದಿಂದ ಸೆ. 6ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಆ ಅವಧಿಯೂ ರ್ಪೂಣಗೊಂಡ ಕಾರಣ ಶುಲ್ಕ ಆಕರಣೆ ನಿಲ್ಲಿಸಲಿದೆ.
ಬೆಂಗಳೂರಿನಿಂದ ಪುಣೆವರೆಗೂ ಬೈಪಾಸ್ ರಸ್ತೆ 6 ಲೇನ್ ಇದ್ದರೆ, ಹು-ಧಾ ನಡುವಿನ ರಸ್ತೆ ಬಾಟೆಲ್ ನೆಕ್ ಆಗಿದ್ದ ಕಾರಣ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದವು. 2022ರ ಜ. 15ರಂದು ಇಟ್ಟಿಗಟ್ಟಿ ಬಳಿ ಸಂಭವಿಸಿದ ಅಪಘಾತದಲ್ಲಿ 10ಕ್ಕೂ ಮಹಿಳೆಯರು ಮೃತಪಟ್ಟಿದ್ದರು. ಇದೇ ಕಾರಣಕ್ಕೆ ಈ ರಸ್ತೆಯನ್ನು ಸಾವಿನ ಹೆದ್ದಾರಿ ಎಂದೇ ಬಿಂಬಿಸಲಾಗಿತ್ತು. ಬಳಿಕ ರಸ್ತೆ ಅಗಲೀಕರಣಕ್ಕೆ ಸಾಕಷ್ಟು ಹೋರಾಟಗಳು ನಡೆದಿದ್ದರಿಂದ ಕೇಂದ್ರ ಸರ್ಕಾರ ಷಟ್ಪಥ ಎಕ್ಸಪ್ರೆಸ್ ಹೈವೇ ಆಗಿ ಮಾರ್ಪಡಿಸಲು ಯೋಜನೆ ರೂಪಿಸಿದೆ.
ಸುಮಾರು 1200 ಕೋಟಿ ರೂ. ಈ ಯೋಜನೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಇನ್ನು ಕೆಲ ವರ್ಷಗಳಲ್ಲೇ ಎಕ್ಸಪ್ರೆಸ್ ಹೈವೇ ಸಿದ್ಧವಾಗಲಿದೆ. ಹೊಸ ರಸ್ತೆ ನಿರ್ಮಾಣ ಬಳಿಕ ಗುತ್ತಿಗೆ ಪಡೆದ ಕಂಪನಿ ನಿರ್ವಹಣೆ ಜವಾಬ್ದಾರಿಯನ್ನೂ ಹೊರಲಿದೆ. ಆದರೆ ಅಲ್ಲಿಯವರೆಗೆ ರಸ್ತೆ ನಿರ್ವಹಣೆ, ಅಲ್ಲಿ ಸಂಭವಿಸುವ ಅವಡಗಳಿಗೆ ಯಾರು ಹೊಣೆ? ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಜನರೇ ಎಚ್ಚರ ವಹಿಸಿ: ಎನ್ಎಚ್ಡಿಎಲ್ ಕಂಪನಿ ಟೋಲ್ ಸಂಗ್ರಹಣೆ ಸ್ಥಗಿತದ ಜತೆಗೆ ಶುಲ್ಕ ಆಕರಣೆ, ಇತರ ಕಾರ್ಯಗಳನ್ನು ನಿಭಾಯಿಸಲು ನೇಮಕ ಮಾಡಿಕೊಂಡಿದ್ದ ಸಿಬ್ಬಂದಿಗಳನ್ನು ಸಹ ಸೇವೆಯಿಂದ ಬಿಡುಗಡೆ ಮಾಡಲು ಮುಂದಾಗಿದೆ. ಸೆ. 7ರ ನಂತರ ಎಲ್ಲ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆ ಮಾಡಲಿದೆ. ಆದಾಗ್ಯೂ ಕೆಲವರು ಕಂಪನಿ ಹೆಸರಲ್ಲಿ ಟೋಲ್ ಸಂಗ್ರಹ ನೆಪದಲ್ಲಿ ಹಣ ದೋಚುವ ಸಾಧ್ಯತೆ ಹೆಚ್ಚಿದೆ. ಟೋಲ್ ಬಂದಾಗುವುದರಿಂದ ಆ ರಸ್ತೆಯಲ್ಲಿ ಸಂಚರಿಸುವ ಸವಾರರು ಯಾರಿಗೂ ಹಣ ನೀಡಬೇಕಿಲ್ಲ. ಹೀಗಾಗಿ ಜನರು ಎಚ್ಚರ ವಹಿಸಬೇಕಿದೆ.
ನಾವು ಹೊಣೆಗಾರರಲ್ಲಸೆ. 7ರ ಸಂಜೆ 6 ಗಂಟೆಯಿಂದ ಟೋಲ್ ಸಂಗ್ರಹಣೆಯನ್ನು ಸ್ಥಗಿತಗೊಳಿಸಲಾಗುವುದು. ನಂತರದಲ್ಲಿ ಬೈಪಾಸ್ನಲ್ಲಿ ವಾಹನ ಸಂಚಾರದಲ್ಲಿ ಉಂಟಾಗುವ ಅಡೆ-ತಡೆ, ಅಪಘಾತಗಳು ಹಾಗೂ ಇತರ ಘಟನೆಗಳು ಸಂಭವಿಸಿದರೆ, ತೆರವುಗೊಳಿಸುವ ಜವಾಬ್ದಾರಿ ಎನ್ಎಚ್ಡಿಎಲ್ ಕಂಪನಿಯದ್ದಲ್ಲ ಎಂಬ ಮಾಹಿತಿಯನ್ನು ಸಂಸ್ಥೆ ವತಿಯಿಂದ ಟೋಲ್ ಬಳಿ ಸಾರ್ವಜನಿಕ ಪ್ರಕಟಣೆ ಅಂಟಿಸಲಾಗಿದೆ.