ಜಿಲ್ಲೆ

ಟೋಕಿಯೋ ಒಲಿಂಪಿಕ್ಸ್‌ನ 11 ಶೂಟರ್ಸ್‌ಗೆ ಸಂಡೂರಿನ ಐಐಎಸ್‌ನಲ್ಲಿ ತರಬೇತಿ

Ballari

ಸಂಡೂರು: ಟೋಕಿಯೋ ಒಲಿಂಪಿಕ್ಸ್‌ನ ಶೂಟಿಂಗ್ ವಿಭಾಗದಲ್ಲಿ ಕ್ರೀಡಾಪಟುಗಳು ಹೆಚ್ಚಿನ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಹೆಚ್ಚಿಸಬೇಕು ಎಂದು ಜೆಎಸ್‌ಡಬ್ಲುೃ ಅಧ್ಯಕ್ಷ ಡಾ.ರಾಜಶೇಖರ ಪಟ್ಟಣಶೆಟ್ಟಿ ಹೇಳಿದರು.

ತಾಲೂಕಿನ ತಾಳೂರು ಕ್ರಾಸ್‌ನಲ್ಲಿರುವ ಜೆಎಸ್‌ಡಬ್ಲುೃನ ಇನ್ಸ್‌ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ 11 ಶೂಟರ್ಸ್‌ಗೆ ಒಂದು ವಾರ ಆಯೋಜಿಸಿದ್ದ ತರಬೇತಿ ಶಿಬಿರದ ಸಮಾರೋಪದಲ್ಲಿ ಮಂಗಳವಾರ ಮಾತನಾಡಿದರು. ಇತ್ತೀಚೆಗೆ ದೇಶದ ಶೂಟರ್ಸ್‌ಗಳು ಏಷ್ಯಾ ಖಂಡದ ಪಂದ್ಯಾವಳಿ ಸೇರಿ ಒಲಿಂಪಿಕ್ಸ್‌ಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಈ ಬಾರಿಯೂ ಚಿನ್ನದ ಪದಕಗಳನ್ನು ಗೆಲ್ಲಬೇಕೆಂಬುದು ನಮ್ಮೆಲ್ಲರ ನಿರೀಕ್ಷೆಯಾಗಿದೆ ಎಂದರು.

ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯ ಅಪೂರ್ವಿ ಚಾಂಡೇಲಾ, ಅಜುಂ ಮೌದ್ಗಿಲ್, ಮೈರಾಜ್ ಅಹ್ಮದ್‌ಖಾನ್, ಯುವ ಶೂಟರ್‌ಗಳಾದ ಮನು ಭಾಕರ್, ದಿವ್ಯಾಂಶ್ ಸಿಂಗ್ ಪನ್ವರ್, ದೀಪಕ್ ಕುಮಾರ, ಅಭಿಷೇಕ್ ವರ್ಮಾ, ಐಶ್ವರ್ಯಾ ಪ್ರತಾಪ್ ಸಿಂಗ್ ತೊಮರ್, ರಾಹಿ ಸರ್ನೊಬತ್, ಯಶಸ್ವಿನಿ ಸಿಂಗ್ ದೆಸ್ವಾಲ್ ಹಾಗೂ ಚಿಂಕಿ ಯಾದವ್ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಪಿಸ್ತೂಲ್ ಕೋಚ್ ವೇದಪ್ರಕಾಶ್ ಪಿಲಾನಿಯಾ ಹಾಗೂ ಕಿರಿಯರ ರಾಷ್ಟ್ರೀಯ ರೈಫಲ್ ಕೋಚ್ ಸುಮಾ ಶಿರೂರ್, ಜೆಎಸ್‌ಡಬ್ಲುೃನ ಹಿರಿಯ ಉಪಾಧ್ಯಕ ಮಂಜುನಾಥ ಪ್ರಭು, ಉಮೇಶ್‌ರೈ, ವಿಜಯ ಸಿನ್ಹಾ ಇತರರಿದ್ದರು. ಇದೇ ವೇಳೆ 300ಕ್ಕೂ ಹೆಚ್ಚು ಜನ ಜೆಎಸ್‌ಡಬ್ಲುೃ ಅಧಿಕಾರಿಗಳು ಹಾಗೂ ಅವರ ಕುಟುಂಬದ ಸದಸ್ಯರು ತ್ರೀವರ್ಣ ಧ್ವಜ ಹಿಡಿದು ದೇಶ ಪ್ರೇಮದ ಘೋಷಣೆ ಕೂಗಿ ಶೂಟರ್ಸ್‌ಗಳನ್ನು ಹುರಿದುಂಬಿಸಿದರು.