ಅನ್ಸಾರ್ ಇನೋಳಿ ಉಳ್ಳಾಲ
ಜೋರು ಮಳೆ ಬಂದಾಗ ತೊಕ್ಕೊಟ್ಟು ಮೇಲ್ಸೇತುವೆ ಕೆಳಭಾಗದಲ್ಲಿ ಸಂಚರಿಸುವವರಿಗೆ ಉಚಿತ ಸ್ನಾನ ಭಾಗ್ಯ. ಇದು ತೊಕ್ಕೊಟ್ಟು ಮೇಲ್ಸೇತುವೆಯ ದುರವಸ್ಥೆ. ಎರಡು ವರ್ಷ ಹಿಂದೆ ಉದ್ಘಾಟನೆಗೊಂಡ ಈ ಮೇಲ್ಸೇತುವೆಯಿಂದ ನೀರು ಕೆಳಗೆ ರಸ್ತೆಗೆ ಬೀಳುತ್ತಿದ್ದು, ವಾಹನ ಸವಾರರು, ಪಾದಚಾರಿಗಳಿಗೆ ಸಮಸ್ಯೆಯಾಗಿದೆ.
ಸೇತುವೆ ಮೇಲ್ಭಾಗ ಮಳೆಗಾಲದಲ್ಲಿ ನೀರು ಕೆಳಗೆ ಹರಿದು ಹೋಗಲು ಪೈಪ್‌ಗಳನ್ನು ಅಳವಡಿಸಲಾಗಿದೆ. ಎರಡು ಪೈಪ್ ವಾಹನ ಹಾಗೂ ಜನ ಸಂಚರಿಸುವ ಭಾಗಕ್ಕೂ ಹಾಕಲಾಗಿದೆ. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಈ ಪೈಪ್‌ಗಳಿಂದ ನೀರು ಕೆಳಭಾಗದ ರಸ್ತೆಗೆ ಬೀಳಲು ಬಿಡದೆ ಉದ್ದದ ಪೈಪ್ ಜೋಡಿಸಿ ಸೇತುವೆಯಿಂದಲೇ ಸಾಗಹಾಕಿ ರಸ್ತೆಯ ಒಂದು ಮೂಲೆಗೆ ಹಾಕಬೇಕಿತ್ತು. ಅಥವಾ ಇಲ್ಲಿಗೆ ಪೈಪ್ ಅಳವಡಿಸಬಾರದಿತ್ತು. ಆದರೆ ಇಲ್ಲಿ ಜನಹಿತ ಕಡೆಗಣಿಸಲಾಗಿದೆ. ಸೇತುವೆ ಮೇಲ್ಭಾಗದ ನೀರು ಸರಾಗವಾಗಿ ಹರಿಯಬೇಕೆಂದು ನಾಲ್ಕೈದು ಪೈಪ್‌ಗಳನ್ನು ಅಳವಡಿಸಿ ನೇರವಾಗಿ ಕೆಳಕ್ಕೆ ಬಿಡಲಾಗಿದೆ.
ಅಪಘಾತಕ್ಕೆ ಆಹ್ವಾನ: ಇಲ್ಲಿ ಎರಡು ಸೇತುವೆಗಳ ಎಂಟು ಪೈಪ್‌ಗಳಿಂದ ನೀರು ರಸ್ತೆಗೆ ಬೀಳುತ್ತದೆ. ಅವುಗಳ ಪೈಕಿ ಆರು ಪೈಪ್‌ಗಳ ನೀರು ನೇರವಾಗಿ ದೇರಳಕಟ್ಟೆ ರಸ್ತೆಯಾಗಿ ಬಂದು ಸೇತುವೆ ಕೆಳಭಾಗದಿಂದ ಮಂಗಳೂರಿಗೆ ಹೋಗುವ, ಉಳ್ಳಾಲ ಭಾಗದಿಂದ ದೇರಳಕಟ್ಟೆ ರಸ್ತೆಗೆ ಹೋಗುವ ವಾಹನಗಳ ಮೇಲೆ ಬೀಳುತ್ತದೆ. ಈ ಸಂದರ್ಭ ದ್ವಿಚಕ್ರ ವಾಹನಗಳಲ್ಲಿ ಹೋಗುವವರ ಸ್ಥಿತಿ ಶೋಚನೀಯ. ರಭಸದಿಂದ ಬೀಳುವ ನೀರು ಒದ್ದೆಯಾಗಿಸುವುದು ಮಾತ್ರವಲ್ಲದೆ ಕೆಲವೊಮ್ಮೆ ಸವಾರರ ನಿಯಂತ್ರಣವನ್ನೇ ತಪ್ಪಿಸಿ ಅಪಘಾತಕ್ಕೂ ಕಾರಣವಾಗುತ್ತದೆ. ಇಷ್ಟು ಸಮಸ್ಯೆ ಇದ್ದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೌನ ಅಸಮಾಧಾನಕ್ಕೆ ಕಾರಣವಾಗಿದೆ.
ಸಮಸ್ಯೆ ಬಗ್ಗೆ ಈಗಷ್ಟೇ ಗಮನಕ್ಕೆ ಬಂದಿದೆ. ಸಂಬಂಧಿತ ಸ್ಥಳೀಯ ಅಧಿಕಾರಿಗಳಲ್ಲಿ ಮಾತನಾಡಿ ಸಮಸ್ಯೆ ಪರಿಹರಿಸಲು ಸೂಚಿಸುತ್ತೇನೆ. ಶಿಶುಮೋಹನ್ ಯೋಜನಾ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸರ್ವೀಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಯ ಮೇಲ್ಭಾಗದಲ್ಲಿ ತಗ್ಗು ಇರಬಹುದು. ಇದರಿಂದ ನೀರು ಕೆಳಕ್ಕೆ ಇಳಿಯುತ್ತಿದ್ದು, ಜನರಿಗೆ ಸಮಸ್ಯೆ ಆಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಅಗತ್ಯ. ಸುರೇಶ್ ಭಟ್ನಗರ, ಗುತ್ತಿಗೆದಾರರು ಪೈಪ್ ನೇರವಾಗಿ ಕೆಳಗೆ ಬಿಟ್ಟಿರುವುದರಿಂದ ಮಳೆ ನೀರು ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳ ಮೈಮೇಲೆ ಬೀಳುತ್ತಿದೆ. ಎಲ್ಲ ಪೈಪ್‌ಗಳನ್ನು ಜತೆಯಾಗಿಸಿ ಒಂದೇ ಪೈಪ್‌ಗೆ ಜೋಡಿಸಿ ಸೇತುವೆಯ ಒಂದು ಬದಿಗೆ ಹಾಕಿದರೆ ಸಮಸ್ಯೆ ಪರಿಹಾರ ಆಗಲಿದೆ. ಅಬ್ದುಲ್ ಜಲೀಲ್ ಮೋಂಟುಗೋಳಿ, ಗುತ್ತಿಗೆದಾರರು