ಮುದ್ದೇಬಿಹಾಳ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಿಜಯಪುರ ಜಿಲ್ಲೆಯಾದ್ಯಂತ 5.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆದಿರುವ ತೊಗರಿ ಬೆಳೆ ಸಂಪೂರ್ಣ ಹಾನಿಗೀಡಾಗಿದೆ. ಈ ಕೂಡಲೇ ಬೆಳೆ ಹಾನಿಯ ಸಮೀಕ್ಷೆ ನಡೆಸಿ ನೈಜ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕೋರಿ ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ವಿ.ಅನ್ಬುಕುಮಾರ, ಕೃಷಿ ಆಯುಕ್ತ ವೈ.ಎಸ್.ಪಾಟೀಲ, ಕೃಷಿ ನಿರ್ದೇಶಕ ಡಾ.ಜಿ.ಟಿ.ಪುತ್ರ ಅವರಿಗೆ ಎಲ್ಲ ರೈತರ ಪರವಾಗಿ ಇ ಮೇಲ್ ಮುಖಾಂತರ ಬುಧವಾರ ಮನವಿ ಕಳಿಸಿದ್ದಾರೆ.
ವಾರದಿಂದ ರೈತಪರ ಸಂಘಟನೆಗಳು ಬೆಳೆ ನಾಶವಾಗಿರುವ ಕುರಿತು ವಿಜಯಪುರ ಜಿಲ್ಲಾಡಳಿತದ ಗಮನಕ್ಕೆ ತಂದು ಕೂಡಲೇ ಬೆಳೆ ನಾಶದ ಸರ್ವೆ ನಡೆಸಲು ಆಗ್ರಹಿಸುತ್ತಿದ್ದರೂ ಇಲ್ಲಿವರೆಗೂ ಜಿಲ್ಲಾಧಿಕಾರಿ ಸರ್ವೇ ಕಾರ್ಯಕ್ಕೆ ಆದೇಶ ಮಾಡಿರುವುದಿಲ್ಲ. ಇದರಿಂದ ಜಿಲ್ಲೆಯ ಲಕ್ಷಾಂತರ ರೈತರು ಆತಂಕಕ್ಕೊಳಗಾಗಿದ್ದಾರೆ. ರೈತರ ಆತಂಕ ನಿವಾರಿಸಲು ಕೂಡಲೇ ಬೆಳೆ ನಾಶದ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.