ಜಿಲ್ಲೆ

ಇಂದಿನ ವಿದ್ಯಾರ್ಥಿಗಳು ಚರಿತ್ರೆಯನ್ನು ಅರಿಯಬೇಕು

ಅವಿನಾಶ್ ಜೈನಹಳ್ಳಿ

ಮೈಸೂರು: ಸ್ವಾತಂತ್ರ್ಯ ಹೋರಾಟವಾಗಲಿ, ಸಂವಿಧಾನವಾಗಲಿ ಸುಲಭವಾಗಿ ನಮಗೆ ಸಿಕ್ಕಿಲ್ಲ. ಹಲವಾರು ಮಹನೀಯರ ಚಿಂತನೆ, ಹೋರಾಟ, ತ್ಯಾಗ ಹಾಗೂ ಬಲಿದಾನಗಳಿಂದ ದೊರೆತಿದೆ. ಅದರಲ್ಲೂ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಾವು ಸದಾ ಸ್ಮರಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.

ನಗರದ ಮಹಾರಾಜ ಕಾಲೇಜಿನ ಜೂನಿಯರ್ ಬಿಎ ಹಾಲ್‌ನಲ್ಲಿ ಮೈವಿವಿ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಶರಣ ತತ್ವ ಮತ್ತು ಗಾಂಧಿ ತತ್ವ: ಅನುಸಂಧಾನ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ಚರಿತ್ರೆಯನ್ನು ಅರಿಯಬೇಕು. ಮಹನೀಯರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆದರೆ ಅಂದುಕೊಂಡ ಗುರಿ ತಲುಪಲು ಸಾಧ್ಯ. ಬುದ್ಧ, ಮಹಾವೀರ, ಬಸವಣ್ಣ, ಗುರುನಾನಕ್, ಕನಕದಾಸ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು ಸೇರಿದಂತೆ ಸಾಕಷ್ಟು ಮಹನೀಯರು ತಮಗಾಗಿ ಅಥವಾ ತಮ್ಮ ಕುಟುಂಬಕ್ಕಾಗಿ ಮಾತ್ರ ಚಿಂತಿಸಲಿಲ್ಲಘಿ. ಬದಲಿಗೆ ಇಡೀ ಮಾನವ ಕುಲಕ್ಕೆ ಒಳ್ಳೆಯದಾಗಬೇಕೆಂದು ಬಯಸಿದವರು. ಇದಕ್ಕಾಗಿ ತಾವು ಬದುಕಿದ್ದ ಕಾಲಘಟ್ಟಗಳಲ್ಲಿ ಅಸಮಾನತೆಗಳನ್ನು ವಿರೋಧಿಸಿ, ಹೋರಾಟಗಳನ್ನು ಮಾಡಿದರು. ಚಿಂತನೆಗಳನ್ನು ಬಿತ್ತಿದರು ಎಂದು ಪ್ರತಿಪಾದಿಸಿದರು.