ಮೈಸೂರು: ಪ್ರಶ್ನಿಸುವ ನೈತಿಕತೆ ಕಿತ್ತುಕೊಂಡಿರುವ ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳನ್ನು ಭಯದಲ್ಲಿ ಇರುವಂತಹ ವ್ಯವಸ್ಥೆಗೆ ದೂಡುತ್ತಿದೆ ಎಂದು ಭಾರತೀಯ ಶಿಕ್ಷಣ ಮಂಡಲ ಅಖಿಲ ಭಾರತೀಯ ಸಂಘಟನಾ ಮಂತ್ರಿ ಬಿ.ಆರ್.ಶಂಕರಾನಂದ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದಿಂದ ಮುಕ್ತ ಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಯುವ ಜನತೆಗೆ ಸ್ವಾಮಿ ವಿವೇಕಾನಂದರ ಸಂದೇಶ ಕುರಿತು ಅವರು ಉಪನ್ಯಾಸ ನೀಡಿದರು.
ಇವತ್ತಿನ ಕಾಲದಲ್ಲಿ ಪ್ರಶ್ನಿಸುವ, ಅನುಮಾನ ಬಂದಿದ್ದನ್ನು ಕೇಳುವ ನೈತಿಕತೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸತ್ತು ಹೋಗಿದೆ. ಇಡೀ ಶಿಕ್ಷಣ ವ್ಯವಸ್ಥೆ ಭಯದ ವ್ಯವಸ್ಥೆ ಆಧಾರದ ಮೇಲೆ ನಡೆಯುತ್ತಿದೆ ಎಂದರು.
ವಿದ್ಯಾರ್ಥಿಗಳು ಪ್ರಶ್ನೆ ಕೇಳಿದರೆ ಶಿಕ್ಷಕರು ಕೋಪಗೊಳ್ಳುತ್ತಾರೆ. ಪ್ರಶ್ನೆ ಕೇಳುವ ಅವಕಾಶವಿಲ್ಲದಿದ್ದರೆ ಅವರ ಜೀವನದಲ್ಲಿ ಹೇಗೆ ಉದ್ಧಾರವಾಗುತ್ತಾರೆ. ಎಲ್ಲರೂ ಪ್ರಶ್ನಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಪಂಚವನ್ನೇ ಪ್ರಶ್ನಿಸುವ ಪ್ರವೃತ್ತಿಯ ಮನಸ್ಸು ವಿವೇಕಾನಂದರಲ್ಲಿತ್ತು. ಒಂದು ವೇಳೆ ಅವರು ಪ್ರಶ್ನಿಸದಿದ್ದರೆ, ನರೇಂದ್ರರಾಗಿ ಉಳಿದು ಬಿಡುತ್ತಿದ್ದರು. ಸ್ವಾಮಿ ವಿವೇಕಾನಂದರಾಗಲು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಭಾರತದಲ್ಲಿ ಜನರು ಭಯದಿಂದ ಬದುಕುತಿದ್ದಾಗ ವಿವೇಕಾನಂದ ಅವರು ದೃಢವಾಗಿ ನಿರ್ಭಯರಾಗಿರಿ ಎಂದು ಸಂದೇಶ ನೀಡಿದರು. ಭಾರತದ ಅವ್ಯವಸ್ಥೆಯನ್ನು ನೋಡಿ ಅಸ್ವಸ್ಥರಾಗಿದ್ದರು. ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ ಅನುಕರಣೆ, ಗುಲಾಮಗಿರಿಯನ್ನು ನೋಡಿ ನೋವು ಅನುಭವಿಸಿದರು ಎಂದರು.
ಪ್ರಪಂಚದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವ ದೇಶ ಭಾರತವಾಗಿದೆ. ಯಾರೂ ಆಸೆ, ಅಮಿಷಗಳಿಗೆ ಬಲಿಯಾಗದೆ ದೃಢ ಸಂಕಲ್ಪದಿಂದ ಜೀವಿಸಬೇಕು ಎಂದು ಸಲಹೆ ನೀಡಿದರು.
ಬದುಕು ಬದಲಾಗಬೇಕಾದರೆ ವಿವೇಕಾನಂದ ಅವರನ್ನು ಓದಬೇಕು. ಪ್ರಜ್ಞಾವಂತರಾಗಬೇಕಾದರೆ ವಿವೇಕಾನಂದರ ಸಂದೇಶದಿಂದ ಮಾತ್ರ ಸಾಧ್ಯ. ದೇಶ ಸುತ್ತು ಕೋಶ ಓದು ಎನ್ನುವ ಮಾತಿನ ಹಾಗೆ ಬದುಕಿದ ಒಬ್ಬರೇ ವ್ಯಕ್ತಿ ವಿವೇಕಾನಂದ ಎಂದು ಬಣ್ಣಿಸಿದರು.
ರಾಮಕೃಷ್ಣ ಪರಮಹಂಸರು ತಮ್ಮ ಪರೀಕ್ಷೆಯ ಪ್ರಯೋಗಾಲಯದಲ್ಲಿ ಉತ್ತೀರ್ಣವಾದ ಮೇಲೆ ಸ್ವಾಮಿ ವಿವೇಕಾನಂದ ಅವರನ್ನು ಸಂಪೂರ್ಣವಾಗಿ ಒಪ್ಪಿಕೊಂಡರು. ನಮ್ಮ ದೇಶದಲ್ಲಿ ಗುರುವು ಶಿಷ್ಯನನ್ನು, ಶಿಷ್ಯನು ಗುರುವನ್ನು ಪರೀಕ್ಷಿಸಿ ಒಪ್ಪಿಕೊಳ್ಳುತಿದ್ದರು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ ಹಲಸೆ, ಕುಲಸಚಿವ ಪ್ರೊ. ಕೆ.ಬಿ ಪ್ರವೀಣ್, ಪರೀಕ್ಷಾಂಗ ಕುಲಸಚಿವ ಡಾ.ಎಚ್.ವಿಶ್ವನಾಥ್, ಹಣಕಾಸು ಅಧಿಕಾರಿ ಡಾ. ಎಸ್.ನಿರಂಜನ್‌ರಾಜ್, ಡೀನ್ ಪ್ರೊ.ಎನ್. ಲಕ್ಷ್ಮಿ, ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ವಿಭಾಗದ ಸಂಯೋಜನಾಧಿಕಾರಿ ಡಾ.ಜ್ಯೋತಿಶಂಕರ್ ಇತರರು ಇದ್ದರು.