ಜಿಲ್ಲೆ

ಇಂದು ಸಿಎಂ ಜನಸ್ಪಂದನ ಕಾರ್ಯಕ್ರಮ: ಪಾಲ್ಗೊಳ್ಳುವ ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ 9.30ರಿಂದ ಜನಸ್ಪಂದನ ಕಾರ್ಯಕ್ರಮ ನಡೆಸಲಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಸಚಿವಾಲಯವು ಸಕಲ ಸಿದ್ಧತೆ ನಡೆಸಿದೆ. ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್ ಭಾನುವಾರ ಸಂಜೆ ಸಿಎಂ ಗೃಹ ಕಚೇರಿ ಕೃಷ್ಣಾ ಕ್ಕೆ ಭೇಟಿ ನೀಡಿ ಅಂತಿಮ ಸಿದ್ಧತೆ ಪರಿಶೀಲಿಸಿದರು.

ಅಹವಾಲು ಸ್ವೀಕರಿಸಲು ಒಟ್ಟು 20 ಕೌಂಟರ್ ಸ್ಥಾಪಿಸಿದ್ದು, ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಎರಡು ಪ್ರತ್ಯೇಕ ಕೌಂಟರ್ ಮೀಸಲಿರಿಸಲಾಗಿದೆ. ಆಗಮಿಸುವ ನಾಗರಿಕರಿಗೆ ಕುಡಿಯುವ ನೀರು, ಆಹಾರ ಹಾಗೂ ಶೌಚಗೃಹ ಮತ್ತು ಇತರ ವ್ಯವಸ್ಥೆ ಇರಲಿದೆ. ಸ್ವೀಕರಿಸಿದ ಅಹವಾಲುಗಳನ್ನು ಇಲಾಖಾವಾರು ವಿಂಗಡಿಸಿ ತಂತ್ರಾಂಶದಲ್ಲಿ ದಾಖಲಿಸಿ ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಿದ ನಂತರ ಮುಖ್ಯಮಂತ್ರಿಯವರು ಅಹವಾಲು ಆಲಿಸಿ ಪರಿಹಾರ ಸೂಚಿಸುವರು.

ಅಹವಾಲು ಸಲ್ಲಿಸಲು ಆಗಮಿಸುವ ನಾಗರಿಕರು ಗುರುತಿಗಾಗಿ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ತರುವಂತೆ ಕೋರಲಾಗಿದೆ. ಇದರಿಂದ ತಂತ್ರಾಂಶದಲ್ಲಿ ದಾಖಲಿಸುವ ಅರ್ಜಿಗಳ ಸ್ಥಿತಿಗತಿ ಪತ್ತೆಹಚ್ಚಲು ಅನುಕೂಲವಾಗಲಿದೆ ಎಂದು ಸಿಎಂ ಕಚೇರಿ ತಿಳಿಸಿದೆ. 550ಕ್ಕೂ ಅಧಿಕ ಪೊಲೀಸರು, ಅಧಿಕಾರಿ, ಸಹಾಯಕ ಸಿಬ್ಬಂದಿಯ ನ್ನೊಳಗೊಂಡು 1000ಕ್ಕೂ ಅಧಿಕ ಜನರನ್ನು ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ.