ಪಿರಿಯಾಪಟ್ಟಣ: ಕುಂಡೆ ಹಬ್ಬದ ಅಂಗವಾಗಿ ಬುಧವಾರ ಪಟ್ಟಣದಲ್ಲಿ ನೂರಕ್ಕೂ ಹೆಚ್ಚು ಗಿರಿಜನರು 20ಕ್ಕಿಂತಲೂ ಹೆಚ್ಚು ತಂಡಗಳಲ್ಲಿ ವಿವಿಧ ರೀತಿಯ ವೇಷಭೂಷಣ ಧರಿಸಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು.
ಬುಡಕಟ್ಟು ಜನಾಂಗವಾದ ಜೇನು ಕುರುಬರ ಸಂಭ್ರಮದ ಕುಂಡೆ ಹಬ್ಬ ಮೇ 22 ಮತ್ತು 23ರಂದು ಕೊಡಗು ಜಿಲ್ಲೆ ಗೋಣಿಕೊಪ್ಪಲು ಬಳಿಯ ದೇವರಪುರದ ಭದ್ರಕಾಳಿ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ತಾಲೂಕಿನ ಪಂಚವಳ್ಳಿ, ಅಬ್ಬಳತಿ, ಬೂದಿತಿಟ್ಟು, ಅಳ್ಳೂರು, ಲಕ್ಷ್ಮೀಪುರ, ಕೋಗಿಲವಾಡಿ, ಲಿಂಗಾಪುರ, ಮರಳುಕಟ್ಟೆ ಮೊದಲಾದ ಭಾಗಗಳಲ್ಲಿರುವ ಬುಡಕಟ್ಟು ಜನರು ಮತ್ತು ವಿರಾಜಪೇಟೆ ತಾಲೂಕಿನ ಬುಡಕಟ್ಟು ಜನರು ಪಾಲ್ಗೊಳ್ಳುತ್ತಾರೆ. ಕುಂಡೆ ಹಬ್ಬದ ವಿಶೇಷತೆಯಾಗಿ ಮಹಿಳೆಯರ ಬಟ್ಟೆಗಳನ್ನು ಯುವಕರು, ಮಕ್ಕಳು ಹಾಗೂ ಪುರುಷರು ಧರಿಸಿ, ಚಿತ್ರ ವಿಚಿತ್ರ ವೇಷಭೂಷಣಗಳನ್ನು ತೊಟ್ಟು ಅಶ್ಲೀಲ ಬೈಗುಳಗಳನ್ನೇ ಹಾಡಾಗಿಸಿಕೊಂಡು ಎದುರಿಗೆ ಸಿಕ್ಕಿದವರಿಂದ ಹಣ ಬೇಡುವುದು ವಾಡಿಕೆ. ಗಿರಿಜನರ ಈ ಹಬ್ಬ ಪ್ರತಿ ವರ್ಷ ಮೇ ತಿಂಗಳ ಕೊನೆಯ ವಾರದಲ್ಲಿ ಜರುಗುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ.
ಎರಡು ದಿನಗಳ ಕಾಲ ನಡೆಯುವ ಈ ಹಬ್ಬಕ್ಕೆ ಮೇ 21ರಂದೇ ಚಾಲನೆ ದೊರೆತಿದೆ. ವರ್ಷಪೂರ್ತಿ ಕಾಡಿನೊಳಗಿರುವ ಗಿರಿಜನ ಹಾಡಿ ಮತ್ತು ಕಾಫಿ ತೋಟದಲ್ಲಿ ವಾಸಿಸುವ ಜೇನುಕುರುಬರು ವರ್ಷಕ್ಕೊಮ್ಮೆ 2 ದಿನಗಳ ಕಾಲ ತಮಗೆ ಇಷ್ಟವಾದ ವೇಷ ಧರಿಸಿಕೊಂಡು ಸಂಭ್ರಮಿಸುವ ಸಂಪ್ರದಾಯವನ್ನು ಬಹಳ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಬುಧವಾರ ವಿಚಿತ್ರ ವೇಷಧಾರಿಗಳಾಗಿದ್ದ ಗಿರಿಜನರು ಪಟ್ಟಣದ ವಿವಿಧಡೆ ಡೋಲು ಬಡಿಯುತ್ತಾ, ವಿಚಿತ್ರವಾದ ವಾದ್ಯಗಳನ್ನು ಬಾರಿಸುತ್ತಾ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು.