ಜಿಲ್ಲೆ

ಇಂದು ಕಬ್ಬು ಕಟಾವು ಚಾಲೆಂಜ್

ಲೋಕೇಶ್ ಮನು. ಡಿ

ಮದ್ದೂರು: ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಎಂಬಂತೆ ‘ಕಬ್ಬು ಕಟಾವು ಚಾಲೆಂಜ್’ ಎನ್ನುವ ಕೃಷಿ ಕ್ರೀಡಾಕೂಟಕ್ಕೆ ಅ. 4 ರಂದು ಬೆಳಗ್ಗೆ 9.30 ಕ್ಕೆ ತಾಲೂಕಿನ ಸಿ.ಎ.ಕೆರೆ ಹೋಬಳಿಯ ಕಾರಕಹಳ್ಳಿ ಗ್ರಾಮದಲ್ಲಿ ವೇದಿಕೆ ಸಿದ್ಧವಾಗಿದೆ.


ಸ್ಪರ್ಧೆಯ ಅವಧಿ ಕಡಿಮೆ ಇರುವುದರಿಂದ ಸದ್ಯಕ್ಕೆ 1ಎಕರೆ ಜಮೀನನ್ನು ಗುರುತಿಸಲಾಗಿದೆ. ಅಕ್ಕಪಕ್ಕದ ಜಮೀನುಗಳ ಮಾಲೀಕರೊಂದಿಗೂ ಸಮಾಲೋಚಿಸಿದ್ದು, ತಂಡಗಳ ಸಂಖ್ಯೆ ಹೆಚ್ಚಾದರೆ ಆ ಜಮೀನುಗಳ ಕಬ್ಬನ್ನು ಕಟಾವು ಮಾಡಿಸಲಾಗುವುದು. ಪ್ರತಿ ತಂಡದಲ್ಲಿ 6 ಮಂದಿಗಷ್ಟೇ ಅವಕಾಶ. 15 ನಿಮಿಷದಲ್ಲಿ ಕಟಾವಾದ ಕಬ್ಬನ್ನು ಕಂತೆ ಕಟ್ಟಿರಬೇಕು. ಕಂತೆ ಕಟ್ಟಿದ ಕಬ್ಬನ್ನು ಮಾತ್ರ ತೂಕಕ್ಕೆ ಪರಿಗಣಿಸಲಾಗುತ್ತದೆ. ಉಳಿದ ಕಬ್ಬನ್ನು ತೂಕಕ್ಕೆ ಪರಿಗಣಿಸುವುದಿಲ್ಲ.
ಮೊದಲ ಮೂರು ಸ್ಥಾನಗಳನ್ನು ಪಡೆದ ತಂಡಗಳಿಗೆ ಕ್ರಮವಾಗಿ 10,000ರೂ.(ಪ್ರ), 7,500ರೂ.(ದ್ವಿ), 5,000ರೂ.(ತೃ) ಹಾಗೂ 4ರಿಂದ 8ನೇ ಸ್ಥಾನ ಪಡೆದ ತಂಡಗಳಿಗೆ 2000ರೂ. ಮತ್ತು 9, 10ನೇ ಸ್ಥಾನ ಪಡೆದ ತಂಡಗಳಿಗೆ ತಲಾ 1000ರೂ. ಬಹುಮಾನ ನೀಡಲಾಗುತ್ತದೆ.
ಕಾರ್ಮಿಕರ ಅಭಾವವನ್ನು ನೀಗಿಸುವ ಹಾಗೂ ಕಬ್ಬು ಕಟಾವಿನತ್ತ ಜನರನ್ನು ಸೆಳೆಯುವ ನಿಟ್ಟಿನಲ್ಲಿ ಮದ್ದೂರು, ಮಳವಳ್ಳಿ ತಾಲೂಕಿನ ಯುವಕರ ಗುಂಪು ಬಾ ಗುರು ಕಬ್ಬು ಕಡಿ ಶೀರ್ಷಿಕೆಯಡಿ ‘ಕಬ್ಬು ಕಟಾವು ಚಾಲೆಂಜ್’ ಹಾಕಿದೆ. ಈ ಮೂಲಕ ಕೃಷಿಗೆ ಬೆನ್ನು ಹಾಕಿ ಉದ್ಯೋಗ ಅರಸಿ ನಗರಗಳತ್ತ ಮುಖ ಮಾಡಿರುವ ಯುವಜನರು, ಕಾರ್ಮಿಕರನ್ನು ಸೆಳೆಯಲು ಮುಂದಾಗಿದೆ ಎಂದು ಎನ್.ಕೆ.ಯುವ ಬ್ರಿಗೇಡ್‌ನ ಸಂಚಾಲಕ ಕೆ.ಎಂ.ಶಿವಪ್ರಸಾದ್ ಮಳವಳ್ಳಿ ತಿಳಿಸಿದ್ದಾರೆ.


ಕ್ರೀಡಾಕೂಟದಲ್ಲಿ ಭಾಗವಹಿಸುವಿಕೆ ಉಚಿತವಾಗಿದ್ದು, ಕೇವಲ 12 ತಂಡಗಳಿಗೆ ಅವಕಾಶ ಇದ್ದು, ಒಂದೊಂದು ತಂಡದಲ್ಲಿ 6 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈಗಾಗಲೆ 8 ತಂಡಗಳು ನೋಂದಣಿ ಮಾಡಿಕೊಂಡಿವೆ